ಭಾನುವಾರ, ಮಾರ್ಚ್ 26, 2023
24 °C

ನಟಿ ಬೃಂದಾ ಆಚಾರ್ಯ ಸಂದರ್ಶನ: ‘ಪ್ರೇಮಂ ಪೂಜ್ಯಂ’ ಮೂಲಕ ಬೆಳ್ಳಿತೆರೆಗೆ ಹೆಜ್ಜೆ

ನಿರೂಪಣೆ: ಅಭಿಲಾಷ್‌ ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಕಿರುತೆರೆಯ ಪೌರಾಣಿಕ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಬೃಂದಾ ಆಚಾರ್ಯ ಇದೀಗ ಬೆಳ್ಳಿತೆರೆಗೆ ಹೆಜ್ಜೆ ಇಡುತ್ತಿದ್ದಾರೆ. ‘ನೆನಪಿರಲಿ’ ಖ್ಯಾತಿಯ ನಟ ಪ್ರೇಮ್‌ ಅವರ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಮುಖಾಂತರ ಸ್ಯಾಂಡಲ್‌ವುಡ್‌ಗೆ ಬೃಂದಾ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಸಿನಿಮಾದ ವಿಶೇಷ ಏನೆಂದರೆ ನಾಯಕ–ನಾಯಕಿ ಸಿನಿಮಾದಲ್ಲಿ ಒಬ್ಬರನ್ನೊಬ್ಬರು ಮುಟ್ಟುವುದೇ ಇಲ್ಲ. ಡಾ.ರಾಘವೇಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಇಂಥ ವಿಭಿನ್ನ ಕಥಾಹಂದರದ ಈ ಸಿನಿಮಾ ನ.12ರಂದು ತೆರೆ ಮೇಲೆ ಬರುತ್ತಿದೆ. ಇಂಥ ಸಿನಿಮಾಗಾಗಿಯೇ ಕೈತುಂಬಾ ವೇತನ ಸಿಗುತ್ತಿದ್ದ ಐ.ಟಿ ಕೆಲಸಕ್ಕೆ ವಾರದಲ್ಲೇ ರಾಜೀನಾಮೆ ನೀಡಿ ಬಂದಿದ್ದ ಬೃಂದಾ ಅವರು ತಮ್ಮ ನಟನೆಯ ಪಯಣದ ಬಗ್ಗೆ ಹೀಗೆನ್ನುತ್ತಾರೆ....  

ಸಿನಿಮಾಕ್ಕಾಗಿ ಬೆಂಗಳೂರಿಗೆ ಶಿಫ್ಟ್‌!

ನನ್ನ ಮಾತೃಭಾಷೆ ಕನ್ನಡ ಆಗಿದ್ದ ಕಾರಣ, ಕನ್ನಡ ಸಿನಿಮಾ ಕ್ಷೇತ್ರದಲ್ಲೇ ಪ್ರಯತ್ನಿಸಬೇಕು ಎಂದು ನಿರ್ಧರಿಸಿದ್ದೆ. ಇದಕ್ಕಾಗಿ ಮುಂಬೈಯಲ್ಲಿ ಕೆಲಸ ತೊರೆದು, ಬೆಂಗಳೂರಿನಲ್ಲಿ ಹೊಸ ಐ.ಟಿ. ಕೆಲಸಕ್ಕೆ ಸೇರಿದ್ದೆ. ಆದರೆ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಚಿತ್ರರಂಗದಲ್ಲಿ ಯಾರ ಪರಿಚಯವೂ ನನಗೆ ಇರಲಿಲ್ಲ. ಒಳ್ಳೆಯ ಕೆಲಸ, ವೇತನ ಎಲ್ಲವನ್ನೂ ಬಿಟ್ಟು ಏನೂ ತಿಳಿಯದೇ ಇರುವ ಕ್ಷೇತ್ರಕ್ಕೆ ಕಾಲಿಡುವ ಬಗ್ಗೆ ಅಪ್ಪ, ಅಮ್ಮನಿಗೂ ಅಳುಕಿತ್ತು. ಕಿರುತೆರೆ ಪಯಣ ಪ್ರಾರಂಭಿಸಿದ ಸಂದರ್ಭದಲ್ಲಿ ಐ.ಟಿ. ಕೆಲಸದ ಜೊತೆಗೇ ಅದರ ಚಿತ್ರೀಕರಣದಲ್ಲೂ ಭಾಗವಹಿಸುತ್ತಿದ್ದೆ. ನಾನು ಮಾಡಿದ ‘ಮಹಾಕಾಳಿ’ ಹಾಗೂ ‘ಶನಿ’ ಧಾರಾವಾಹಿಗಳು ಪೌರಾಣಿಕ ಧಾರಾವಾಹಿಗಳು.

ಶನಿ ಧಾರಾವಾಹಿ ಪೂರ್ಣಗೊಂಡ ಬಳಿಕ ಆಲ್ಬಂ ಸಾಂಗ್‌ಗಾಗಿ ಒಬ್ಬರು ಸಹಾಯಕ ನಿರ್ದೇಶಕರು ಕರೆ ಮಾಡಿದ್ದರು. ಆದರೆ ನನ್ನ ಪರಿಚಯ ನೋಡಿ ‘ಪ್ರೇಮಂ ಪೂಜ್ಯಂ’ನಲ್ಲಿನ ನಾಯಕಿ ಪಾತ್ರಕ್ಕೆ ನಾನು ಸೂಕ್ತ ಎಂದು ನಿರ್ಧರಿಸಿ, ನಿರ್ದೇಶಕ ಡಾ.ರಾಘವೇಂದ್ರ ಅವರಿಗೆ ನನ್ನ ಪ್ರೊಫೈಲ್‌ ಕಳುಹಿಸಿದ್ದರು. 2019ರ ಮಾರ್ಚ್‌ನಲ್ಲಿ ‘ಪ್ರೇಮಂ ಪೂಜ್ಯಂ’ ಪ್ರಾಜೆಕ್ಟ್‌ ಸಿಕ್ಕಿದ ಬಳಿಕ ಪೂರ್ಣವಾಗಿ ನಾನು ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಿರ್ಧರಿಸಿ, ಒಂದೇ ವಾರದಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದ್ದೆ. 

ನನಗೆ ರೊಮ್ಯಾಂಟಿಕ್‌ ಸಿನಿಮಾಗಳೆಂದರೆ ಅಚ್ಚುಮೆಚ್ಚು. ಹೀಗಿರುವಾಗ ಇದೇ ಜಾನರ್‌ನ ಸಿನಿಮಾ ಹಾಗೂ ‘ಪ್ರೇಮಂ ಪೂಜ್ಯಂ’ನಂಥ ಅದ್ಭುತವಾದ ಕಥೆ ಇರುವ ಸಿನಿಮಾ ಮುಖಾಂತರ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಡುತ್ತಿದ್ದೇನೆ ಎನ್ನುವುದಕ್ಕಿಂತ ಬೇರೆ ಖುಷಿ ಬೇಕೇ? ಚಿಕ್ಕವಯಸ್ಸಿನಿಂದಲೂ ವೇದಿಕೆಯಲ್ಲಿ ಇದ್ದು ಕ್ಯಾಮೆರಾ ಭಯ ಎನ್ನುವುದೇ ಇಲ್ಲ. ಆದರೂ, ಮೊದಲ ಸಿನಿಮಾದ ಅನುಭವ ನೆನಪಿನಲ್ಲಿ ಉಳಿಯುವಂಥದ್ದು. ಪ್ರೇಮ್‌ ಅವರು ಪ್ರೀತಿಯಿಂದ ಮಾತನಾಡಿಸುತ್ತಾರೆ. ಅವರಿಂದ ಬಹಳ ಕಲಿತಿದ್ದೇನೆ. ಐಂದ್ರಿತಾ ರೇ ಅವರು ಚಿತ್ರೀಕರಣದಲ್ಲಿ ತೊಡಗಿರುವ ಸಂದರ್ಭದಲ್ಲಿ ನಾನು ಹೋಗಿ ಚಿತ್ರತಂಡದ ನಡುವೆ ಇದ್ದುಕೊಂಡು ಇಣುಕಿ ಇಣುಕಿ ನೋಡುತ್ತಿದ್ದೆ. ಚಿತ್ರೀಕರಣದ ಬಳಿಕ ನನ್ನ ಬಳಿಗೆ ಬಂದ ಅವರು ‘ಮೊದಲ ಸಿನಿಮಾನಾ?’ ಎಂದು ಕೇಳಿದ್ದರು.

ಚಿತ್ರದಲ್ಲಿ ನನ್ನ ಹಾಗೂ ಐಂದ್ರಿತಾ ರೇ ಅವರ ಪಾತ್ರಗಳು ಸರಿಸಮಾನವಾದ ಪ್ರಾಮುಖ್ಯತೆ ಹೊಂದಿವೆ. ನಾನು ಎರಡು ಶೇಡ್‌ನಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಟ್ರೇಲರ್‌ನಲ್ಲಿ ನನ್ನ ಪಾತ್ರ ತುಣುಕಷ್ಟೇ ಇರುವುದು, ಸಾಗರದಷ್ಟು ಸಿನಿಮಾದಲ್ಲಿದೆ. ಮೊದಲ ಸಿನಿಮಾದ ಬಿಡುಗಡೆಗಾಗಿ ನ.12ಕ್ಕೆ ಕಾತುರದಿಂದ ಕಾಯುತ್ತಿದ್ದೇನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು