ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಿನ್ನ ಪಾತ್ರ ಪ್ರಿಯೆ ನಟಿ ಹರಿಪ್ರಿಯಾ

Last Updated 21 ನವೆಂಬರ್ 2019, 19:30 IST
ಅಕ್ಷರ ಗಾತ್ರ

ನಾನು ಪರಿಪೂರ್ಣ ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕಾದರೆ ಎಲ್ಲ ರೀತಿಯ ಪಾತ್ರಗಳಲ್ಲಿ ನಟಿಸುವುದು ನನಗೂ ಅನಿವಾರ್ಯ - ಹರಿಪ್ರಿಯಾ

ಬೋಲ್ಡ್‌, ಗ್ಲಾಮರ್‌, ಡಿಗ್ಲಾಮರ್‌... ಹೀಗೆ ಯಾವುದೇ ಪಾತ್ರ ಕೊಟ್ಟರೂ ಅದರಲ್ಲಿ ಬಿಂದಾಸ್‌ ಆಗಿ ನಟಿಸುವ ಬಹುಭಾಷಾ ತಾರೆ ಹರಿಪ್ರಿಯಾ ವಿಭಿನ್ನ ಪಾತ್ರಗಳಿಗೆ ಈಗ ಆದ್ಯತೆ ನೀಡುತ್ತಿದ್ದಾರೆ.‌ಅದೂ ಅಲ್ಲದೇ, ಈಗೀಗ ನಾಯಕಿ ಪ್ರಧಾನ ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಅವರ ಅಭಿನಯದನಾಯಕಿ ಪ್ರಧಾನ ಚಿತ್ರಗಳಾದ ‘ಸೂಜಿದಾರ’, ‘ಡಾಟರ್‌ ಆಫ್‌ ಪಾರ್ವತಮ್ಮ’ ಚಿತ್ರಗಳು ಪ್ರೇಕ್ಷಕರ ಗಮನ ಸೆಳೆದಿವೆ. ಅವರ ಅಭಿನಯದ ಮತ್ತೊಂದು ನಾಯಕಿ ಪ್ರಧಾನ ಚಿತ್ರ ‘ಕನ್ನಡ್‌ ಗೊತ್ತಿಲ್ಲ..!’ ಇದೇ ವಾರ ತೆರೆ ಕಾಣುತ್ತಿದೆ. ಅವರ ಪಾಲಿಗೆ ಈ ವರ್ಷದಲ್ಲಿ ಬಿಡುಗಡೆಯಾಗುತ್ತಿರುವ ಆರನೆಯ ಚಿತ್ರವಿದು. ಕೈಯಲ್ಲಿ ರಿವಾಲ್ವರ್‌ ಹಿಡಿದ ಹರಿಪ್ರಿಯಾ ಅವರ ರಗಡ್‌ ಲುಕ್‌ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರದಲ್ಲಿ ಅವರು ಯಾರನ್ನು ಎನ್‌ಕೌಂಟರ್‌ ಮಾಡಲಿದ್ದಾರೆ ಎನ್ನುವುದನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಈ ಚಿತ್ರದಕುರಿತು ಹರಿಪ್ರಿಯಾ ‘ಸಿನಿಮಾ ಪುರವಣಿ’ಯ ಸಂದರ್ಶನದಲ್ಲಿ ಹಲವು ಸಂಗತಿಗಳನ್ನು ತೆರೆದಿಟ್ಟಿದ್ದಾರೆ.

ಕನ್ನಡ್‌ ಗೊತ್ತಿಲ್ಲ..! ಚಿತ್ರ ಒಪ್ಪಿಕೊಂಡ ಹಿನ್ನೆಲೆ...

ಚಿತ್ರದ ಶೀರ್ಷಿಕೆಯೇಐ ಕ್ಯಾಚಿ ಆಗಿತ್ತು. ಪ್ರತಿನಿತ್ಯ ನಾವು ಹೊರ ರಾಜ್ಯದವರ ಬಾಯಿಯಿಂದ ಕೇಳುವಂತಹ ಪದವಿದು. ನಮ್ಮ ಕಾಸ್ಮೊಪಾಲಿಟಿನ್ ಸಿಟಿ ಬೆಂಗಳೂರಿನಲ್ಲಿ ನಮ್ಮವರಿಗಿಂತ ಹೊರಗಿನವರೇ ಹೆಚ್ಚಿದ್ದಾರೆ. ಅವರ ಬಾಯಲ್ಲಿ‘ಕನ್ನಡ್‌ ಗೊತ್ತಿಲ್ಲ’ ಪದ ಕೇಳಿದಾಗ ಬಹಳ ಬೇಜಾರಾಗುತ್ತದೆ. ಕನ್ನಡ ಕಲಿಯುವಂತೆ, ಕನ್ನಡ ಪ್ರೀತಿಸುವಂತೆಸಂದೇಶ ನೀಡುವ ಚಿತ್ರವಿದು. ಕನ್ನಡದ ಮೇಲಿನ ನನ್ನ ಪ್ರೀತಿ, ಅಭಿಮಾನ ವ್ಯಕ್ತಪಡಿಸಲು ನನಗೂ ಒಂದು ಮಾರ್ಗ ಬೇಕಾಗಿತ್ತು. ಹಾಗಾಗಿ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ. ಇದೊಂದು ಥ್ರಿಲ್ಲರ್‌, ಸಸ್ಪೆನ್ಸ್‌ ಜಾನರ್‌ ಸಿನಿಮಾ. ಪ್ರೇಕ್ಷಕರನ್ನು ಕುರ್ಚಿ ತುದಿಯಲ್ಲಿ ಕೂರಿಸಿ ನೋಡಿಸುವಂತಹ ಅಂಶಗಳು ಚಿತ್ರದಲ್ಲಿವೆ.

ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳಿ...

ಈ ಚಿತ್ರದಲ್ಲಿ ನನ್ನ ಹೆಸರು ಶ್ರುತಿ ಚಕ್ರವರ್ತಿ, ತನಿಖಾಧಿಕಾರಿಯ ಪಾತ್ರ. ಏನೋ ಒಂದು ಪ್ರಕರಣ ನಡೆದಿರುತ್ತದೆ, ಅದನ್ನು ಪತ್ತೆಹಚ್ಚುವುದು ನನ್ನ ಪಾತ್ರದ ಕೆಲಸ. ಅದು ಯಾವ ಪ್ರಕರಣ, ಅದನ್ನು ಹೇಗೆ ಪತ್ತೆ ಹಚ್ಚುತ್ತೇನೆ, ಅದು ಕನ್ನಡಕ್ಕೆ ಹೇಗೆ ಸಂಬಂಧಿಸಿರುತ್ತದೆ ಎನ್ನುವ ಕುತೂಹಲವನ್ನುನಿರ್ದೇಶಕರು ಥ್ರಿಲ್ಲರ್‌ ಜಾಡಿನಲ್ಲಿ ಹೇಳಿದ್ದಾರೆ. ನನ್ನ ಮತ್ತು ಸುಧಾರಾಣಿ ಅವರ ಕೆಮಿಸ್ಟ್ರಿಯೂ ಇದರಲ್ಲಿ ಚೆನ್ನಾಗಿ ಫಲಿಸಿದೆ. ಈ ಚಿತ್ರದಲ್ಲಿ ನಾನು ಖಾಕಿ ಧರಿಸಿಲ್ಲ. ನನಗೆ ಖಾಕಿ ಸಮವಸ್ತ್ರ ಧರಿಸುವ ಆಸೆ ತುಂಬಾ ಇದೆ. ಆದರೆ, ಈ ಪಾತ್ರ ಖಾಕಿ ಬಯುಸುತ್ತಿರಲಿಲ್ಲ. ಪೂರ್ಣ ಪ್ರಮಾಣದಲ್ಲಿ ಖಾಕಿ ಧರಿಸುವಂತಹ ಪಾತ್ರವನ್ನು ಮುಂದಿನ ದಿನಗಳಲ್ಲಿ ಎದುರು ನೋಡುತ್ತಿದ್ದೇನೆ. ನಟಿ ಮಾಲಾಶ್ರೀ ಅವರಂತೆ ಖಾಕಿಯಲ್ಲಿ, ವಿಭಿನ್ನ ಪಾತ್ರಗಳಲ್ಲಿಮಿಂಚುವ ಆಸೆಯೂ ಇದೆ.

ಹೊಸಬರ ಜತೆಗಿನ ಕೆಲಸ ಹೇಗೆನಿಸುತ್ತದೆ?

ನಿರ್ದೇಶಕರು, ನಿರ್ಮಾಪಕರು ಹಾಗೂ ತಾಂತ್ರಿಕ ವರ್ಗ ಸೇರಿದಂತೆ ಇಡೀ ಚಿತ್ರ ತಂಡ ಹೊಸಬರಿಂದಲೇ ಕೂಡಿದೆ. ಈ ಚಿತ್ರವನ್ನು ರೇಡಿಯೊ ಜಾಕಿಯಾಗಿದ್ದ ಮಯೂರ ರಾಘವೇಂದ್ರನಿರ್ದೇಶನ ಮಾಡುತ್ತಾರೆ ಎಂದಾಗ ಆರಂಭದಲ್ಲಿ ಹೇಗಪ್ಪಾ ಎಂದು ಸ್ವಲ್ಪ ಭಯವಿತ್ತು. ಆದರೆ, ನಾವೆಲ್ಲರೂ ತಂಡವಾಗಿ ಎಲ್ಲಾ ವಿಭಾಗದಲ್ಲಿ ಕೆಲಸ ಮಾಡುವ ಮೂಲಕ ಚಿತ್ರ ಮಾಡಿದ್ದೇವೆ. ಚಿತ್ರರಂಗಕ್ಕೆ ಹೊಸಬರನ್ನು ಪರಿಚಯಿಸುವ ಅವಕಾಶ ಸಿಕ್ಕಾಗಲೆಲ್ಲ ನಾನು ಹಿಂಜರಿದಿಲ್ಲ. ಆರಂಭದಲ್ಲಿ ನಾನೂ ಕೂಡ ಚಿತ್ರರಂಗಕ್ಕೆ ಬಂದಾಗ ಹೊಸಬಳೇ ಆಗಿದ್ದೆ ಎನ್ನುವುದನ್ನು ಯಾವತ್ತೂ ಮರೆಯುವುದಿಲ್ಲ. ಈ ಹಿಂದೆಯೂ ಹೊಸ ತಂಡದೊಂದಿಗೆ ಚಿತ್ರ ಮಾಡಿದ್ದೇನೆ.

ವಿಭಿನ್ನ ಪಾತ್ರಗಳನ್ನು ಅರಸುತ್ತಿರುವುದರ ಗುಟ್ಟೇನು?

ಒಂದೇ ರೀತಿಯ ಪಾತ್ರಗಳಿಗೆ ನಾನು ಅಂಟಿಕೊಂಡವಳಲ್ಲ, ಅಂತಹ ಹಣೆಪಟ್ಟಿ ತಗುಲಿಸಿಕೊಳ್ಳಲು ಇದುವರೆಗೆ ಅವಕಾಶ ನೀಡಿಲ್ಲ. ‘ಉಗ್ರಂ’ ಯಶಸ್ಸಿನ ನಂತರ ನಿರ್ದೇಶಕರಿಗೂ ಮತ್ತು ಕಥೆ ಬರೆಯುವವರಿಗೂ ನನ್ನ ನಟನಾಸಾಮರ್ಥ್ಯದ ಅರಿವಾಯಿತು. ಅವರೆಲ್ಲ ನನ್ನ ಮೇಲೆ ದೊಡ್ಡ ಜವಾಬ್ದಾರಿಯನ್ನೂ ಹೊರಿಸುತ್ತಾ ಬಂದರು. ‘ರಿಕ್ಕಿ’ ಸಿನಿಮಾದಲ್ಲಿ ನಕ್ಸಲೈಟ್ ಆಗಿ ಕಾಣಿಸಿಕೊಂಡಿದ್ದೆ. ‘ನೀರ್‌ದೋಸೆ’ಯಲ್ಲಿ ಕಾಲ್‌ ಗರ್ಲ್‌ ಆಗಿ, ‘ಸಂಹಾರ’ದಲ್ಲಿ ವಿಲನ್‌ ಆಗಿ, ‘ಭರ್ಜರಿ’ಯಲ್ಲಿ ಉತ್ತರ ಕರ್ನಾಟಕದ ಹುಡುಗಿಯಾಗಿ, ‘ಲೈಫ್‌ ಜತೆ ಒಂದು ಸೆಲ್ಫಿ’ಯಲ್ಲಿ ಮಾತಿನಮಲ್ಲಿಯಾಗಿ, ‘ಬೆಲ್‌ಬಾಟಂ’ನಲ್ಲಿ ರೆಟ್ರೊ ಗೆಟಪ್‌ನಲ್ಲಿ, ‘ಡಾಟರ್‌ ಆಫ್‌ ಪಾರ್ವತಮ್ಮ’ ಚಿತ್ರದಲ್ಲಿ ಅಧಿಕಾರಿಯಾಗಿ, ‘ಸೂಜಿದಾರ’ದಲ್ಲಿ ಮಧ್ಯ ವಯಸ್ಸಿನ ಗೃಹಿಣಿ ಹಾಗೂ ‘ಕುರುಕ್ಷೇತ್ರ’ದಲ್ಲಿ ಪೌರಾಣಿಕ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಈಗ ಬಿಡುಗಡೆಗೆ ಸಿದ್ಧವಾಗಿರುವ ‘ಕಥಾ ಸಂಗಮ’ದಂಥ ಪ್ರಯೋಗಾತ್ಮಕ ಚಿತ್ರದಲ್ಲೂ ನಟಿಸಿದ್ದೇನೆ.ಐತಿಹಾಸಿಕ ‌ಕಥೆಯ‘ಬಿಚ್ಚುಗತ್ತಿ’ಯಲ್ಲಿ, ಜನ್ನನ ಯಶೋಧರ ಚರಿತೆಆಧರಿಸಿದ, ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಚಿತ್ರದಲ್ಲಿ ಹಾಗೂ ಇನ್ನೊಂದು ರೊಮ್ಯಾಂಟಿಕ್‌ ಕಾಮಿಡಿ ಸಿನಿಮಾದಲ್ಲೂ ನಟಿಸುತ್ತಿದ್ದೇನೆ.

–ಹೀಗೆ ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ರೀತಿ ವಿಭಿನ್ನ ಪಾತ್ರಗಳು ಸಾಲುಸಾಲಾಗಿ ಯಾರಿಗೆ ಸಿಗುತ್ತವೆ ಹೇಳಿ? ನಿರ್ದೇಶಕರು ನನ್ನನ್ನು ನಂಬಿ ಇಂಥ ಪಾತ್ರಗಳನ್ನು ನೀಡುತ್ತಿರುವುದಕ್ಕೆ ತುಂಬಾ ಖುಷಿಯಾಗಿದ್ದೇನೆ. ಕನ್ನಡದ ನಟಿಯರ ಮಟ್ಟಿಗೆ ನನ್ನಷ್ಟು ಅದೃಷ್ಟವಂತೆ ಸದ್ಯಕ್ಕೆ ಯಾರೂ ಇಲ್ಲ ಎನ್ನಬಹುದು.ಒಬ್ಬ ವರ್ಸಟೈಲ್‌ ನಟಿ ಎನಿಸಿಕೊಳ್ಳಬೇಕಾದರೆ ವಿಭಿನ್ನ ಪಾತ್ರಗಳನ್ನು ಮಾಡಿತೋರಿಸಲೇಬೇಕಿದೆ. ನಾನು ಪರಿಪೂರ್ಣ ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕಾದರೆ ಎಲ್ಲ ರೀತಿಯ ಪಾತ್ರಗಳಲ್ಲಿ ನಟಿಸುವುದು ನನಗೂ ಅನಿವಾರ್ಯ.

ನಿರ್ದೇಶನದತ್ತ ಒಲವು ಇದೆಯಾ?

ಸದ್ಯಕ್ಕೆ ಗೊತ್ತಿಲ್ಲ.... (ನಗುತ್ತಾ). ಕಲಿಯುವುದು ತುಂಬಾ ಇದೆ. ನಾನು ನಟಿಯಾಗಬೇಕೆಂದು ಕನಸು ಕಟ್ಟಿಕೊಂಡಿರಲಿಲ್ಲ. ನಟಿಯಾಗಿದ್ದು ಕೂಡ ಆಕಸ್ಮಿಕ. ನನ್ನ ದೃಷ್ಟಿಯಲ್ಲಿ ನಿರ್ದೇಶಕಿಯಾಗಬೇಕಾದರೆ ತುಂಬಾ ತಯಾರಿ ಬೇಕಾಗುತ್ತದೆ. ಇವತ್ತುಯಾರು ಬೇಕಾದರೂ ನಿರ್ದೇಶಕರಾಗಬಹುದು. ಆದರೆ, ಯಶಸ್ವಿ ನಿರ್ದೇಶಕರಾಗುವುದು ತುಂಬಾ ಕಷ್ಟದ ಕೆಲಸ. ಇಡೀ ಚಿತ್ರ ತಂಡ ಮುನ್ನಡೆಸುವ, ನಿಭಾಯಿಸುವ ಶಕ್ತಿ ನಿರ್ದೇಶಕರಾದವರಿಗೆ ಇರಬೇಕು. ನಾನು ನಿರ್ದೇಶನ ಮಾಡುವುದಾದರೇಅದಕ್ಕೆ ಬೇಕಾದ ತಯಾರಿ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಕಾಲಿಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT