ಶುಕ್ರವಾರ, ಅಕ್ಟೋಬರ್ 30, 2020
23 °C

ಮದುವೆ ಮುಂದೂಡಿದ ನಟಿ ಕಾಜಲ್ ಅಗರ್‌ವಾಲ್?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟಿ ಕಾಜಲ್‌ ಅಗರ್‌ವಾಲ್ ಬೆಂಗಳೂರು ಮೂಲದ ಉದ್ಯಮಿ ಗೌತಮ್‌ ಅವರ ಕೈಹಿಡಿಯಲಿದ್ದಾರೆ ಎಂಬ ಸುದ್ದಿ ಕಳೆದ ತಿಂಗಳು ಹೊರಬಿದ್ದಿತ್ತು. ಈ ಇಬ್ಬರ ನಿಶ್ಚಿತಾರ್ಥ ಬೆಂಗಳೂರಿನಲ್ಲಿಯೇ ಖಾಸಗಿಯಾಗಿ ನಡೆದಿದೆ ಎನ್ನಲಾಗಿತ್ತು. 35ರ ಹರೆಯದ ಕಾಜಲ್ ಹಸೆಮಣೆ ಏರುತ್ತಿರುವ ಸುದ್ದಿ ಆಕೆಯ ಅಭಿಮಾನಿಗಳಲ್ಲೂ ಖುಷಿಗೆ ಕಾರಣವಾಗಿತ್ತು. ಆದರೆ, ಈಗ ಆಕೆ ಮದುವೆಯನ್ನು ಮುಂದೂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಕಳೆದ ವರ್ಷ ಮಂಚು ಲಕ್ಷ್ಮಿ ಜೊತೆಗಿನ ಚಾಟ್‌ ವೇಳೆ ತಾನು ಮದುವೆಯಾಗುತ್ತಿರುವುದಾಗಿ ಕಾಜಲ್‌ ಹೇಳಿದ್ದು ದೊಡ್ಡ ಸುದ್ದಿಯಾಗಿತ್ತು. ‘ನಾನು ವೈವಾಹಿಕ ಜೀವನಕ್ಕೆ ಅಡಿ ಇಡಲು ಸಿದ್ಧಳಾಗುತ್ತಿರುವುದು ನಿಜ. ನನ್ನನ್ನು ಕೈಹಿಡಿಯಲಿರುವ ಸಂಗಾತಿಗೆ ಚಿತ್ರರಂಗದ ಪರಿಚಯವೇ ಇಲ್ಲ’ ಎಂದು ಹೇಳಿದ್ದರು.

ಈ ನಡುವೆಯೇ ಕಾಜಲ್‌ ಅವರ ಪೋಷಕರು ಮುಂದಿನ ವರ್ಷ ಉದ್ಯಮಿ ಗೌತಮ್‌ ಜೊತೆಗೆ ವಿವಾಹ ನಿಗದಿಪಡಿಸಿದ್ದಾರಂತೆ. ಇದು ಅರೇಂಜ್‌ ಮ್ಯಾರೇಜ್. ಎರಡು ಕುಟುಂಬಗಳಿಗೂ ಪರಿಚಯವಿದೆಯಂತೆ. ಹಾಗಾಗಿ, ಕುಟುಂಬದ ಸದಸ್ಯರ ಒಪ್ಪಿಗೆಯಿಂದ ನಡೆಯುತ್ತಿರುವ ಮದುವೆ ಇದಾಗಿದೆ. ಆದರೆ, ಕೋವಿಡ್‌–19 ಪರಿಣಾಮ ಕಾಜಲ್‌ ಮದುವೆಯನ್ನು ಮುಂದೂಡಿದ್ದಾರೆ ಎಂಬ ಸುದ್ದಿ ಟಾಲಿವುಡ್‌ ಪಡಸಾಲೆಯಲ್ಲಿ ಹಬ್ಬಿದೆ.

ಪ್ರಸ್ತುತ ‘ಮೆಗಾಸ್ಟಾರ್’ ಚಿರಂಜೀವಿ ನಾಯಕರಾಗಿರುವ ‘ಆಚಾರ್ಯ’ ಚಿತ್ರದಲ್ಲಿ ಕಾಜಲ್‌ ನಟಿಸುತ್ತಿದ್ದಾರೆ. ಈ ಬಿಗ್‌ ಬಜೆಟ್‌ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಕೊರಟಾಲ ಶಿವ. ಶಂಕರ್‌ ನಿರ್ದೇಶನದ ‘ಇಂಡಿಯನ್‌ 2’ ಸಿನಿಮಾಕ್ಕೂ ಅವರೇ ನಾಯಕಿ. ಇದರಲ್ಲಿ ಕಮಲ ಹಾಸನ್‌ ನಟಿಸುತ್ತಿದ್ದಾರೆ. ಲೈಕಾ ಪ್ರೊಡಕ್ಷನ್‌ ಬಂಡವಾಳ ಹೂಡಿರುವ ಇದು 1996ರಲ್ಲಿ ತೆರೆಕಂಡ ‘ಇಂಡಿಯನ್’ ಚಿತ್ರದ ಸ್ವೀಕೆಲ್.

ಕೊರೊನಾ ಪರಿಣಾಮ ಈ ಸಿನಿಮಾಗಳ ಶೂಟಿಂಗ್‌ ಸ್ಥಗಿತಗೊಂಡಿದೆ. ಮೂಲಗಳ ಪ್ರಕಾರ ‘ಆಚಾರ್ಯ’ದ ಚಿತ್ರೀಕರಣ ಎರಡು ತಿಂಗಳು ಮುಂದಕ್ಕೆ ಹೋಗಿದೆಯಂತೆ. ಈ ಸಿನಿಮಾಗಳ ಶೂಟಿಂಗ್‌ ಪೂರ್ಣಗೊಂಡು ತೆರೆಕಾಣಲು ಸಾಕಷ್ಟು ಸಮಯ ಹಿಡಿಯಲಿದೆ. ಹಾಗಾಗಿಯೇ ಕಾಜಲ್‌ ಮದುವೆಯನ್ನು ಮುಂದೂಡಿರುವ ಸಾಧ್ಯತೆಯಿದೆ ಎನ್ನುತ್ತವೆ ಟಾಲಿವುಡ್‌ ಮೂಲಗಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು