ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣೂರು ಮೇಲ್ಸೇತುವೆ ಕಾಮಗಾರಿಗೆ ಮುಕ್ತಿ

Last Updated 2 ಮಾರ್ಚ್ 2018, 19:56 IST
ಅಕ್ಷರ ಗಾತ್ರ

ಬೆಂಗಳೂರು: ಎಂಟು ವರ್ಷಗಳಿಂದ ಆಮೆಗತಿಯಲ್ಲಿ ಸಾಗಿದ ಹೆಣ್ಣೂರು ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಅಂತೂ ಮುಕ್ತಾಯ ಹಂತಕ್ಕೆ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್‌ 4ರಂದು ಉದ್ಘಾಟಿಸಲಿದ್ದಾರೆ.

ಆರಂಭದಲ್ಲಿ ಈ ಕಾಮಗಾರಿಗೆ ₹22 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಬಳಿಕ ವೆಚ್ಚ ಎರಡೂ ವರೆ ಪಟ್ಟು ಹೆಚ್ಚಾಗಿತ್ತು. ರ‍್ಯಾಂಪ್‌ಗಳ ನಿರ್ಮಾಣಕ್ಕೆ ಅಗತ್ಯವಾದ 39  ಗುಂಟೆಸ್ವಾಧೀನ ಪಡಿಸಿಕೊಳ್ಳುವಲ್ಲಿ ಉಂಟಾಗಿದ್ದ ಗೊಂದಲಗಳಿಂದಾಗಿ ಕಾಮಗಾರಿ ನನೆಗುದಿಗೆ ಬಿದ್ದಿತ್ತು. 2016ರ ಜೂನ್‌ 28ರಂದು ಕಾಮಗಾರಿಗೆ ಮರುಚಾಲನೆ ನೀಡಲಾಗಿತ್ತು. ಆ ಬಳಿಕವೂ ಕುಂಟುತ್ತಾ ಸಾಗಿತ್ತು.

‘ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿವೆ. ಉದ್ಘಾಟನೆಗೂ ಮುನ್ನ ಅವುಗಳನ್ನು ಪೂರ್ಣಗೊಳಿಸುತ್ತೇವೆ. ಈ ಭಾಗದ  ಸಂಚಾರ ದಟ್ಟಣೆ ಸಮಸ್ಯೆಗೆ ಮುಕ್ತಿ ಸಿಗಲಿದೆ’ ಎಂದು ಬಿಡಿಎ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಒಳಚರಂಡಿ ಮಾರ್ಗ ಹಾಗೂ ವಿದ್ಯುತ್‌ ಮಾರ್ಗಗಳ ಸ್ಥಳಾಂತರಿಸುವ ಕೆಲಸ ಪೂರ್ಣಗೊಂಡಿದೆ ಎಂದರು.

ಕಳಪೆ ಕಾಮಗಾರಿ: ‘ಜನಪ್ರತಿನಿಧಿಗಳ ಒತ್ತಡದಿಂದ ತರಾತುರಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಗುಣಮಟ್ಟ ಕಾಯ್ದುಕೊಂಡಿಲ್ಲ’ ಎಂದು ಮುನಿರಾಜು ಆರೋಪಿಸಿದರು.

ಸ್ಥಳೀಯ ನಿವಾಸಿ ಜಗನ್ನಾಥ ರೆಡ್ಡಿ, ‘ಮೇಲ್ಸೇತುವೆ ರ‍್ಯಾಂಪ್‌ಗಳ ಉದ್ದವನ್ನು ಸುಮಾರು 100 ಅಡಿಯಷ್ಟು ಕಡಿಮೆ ಮಾಡಲಾಗಿದ್ದು, ಮೇಲ್ಸೇತುವೆ
ಯಲ್ಲಿ ವಾಹನ ಸಂಚಾರ ಕಷ್ಟವಾಗಲಿದೆ. ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಮೇಲ್ಸೇತುವೆ ಪಕ್ಕದ ರಸ್ತೆಯಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನವಿದೆ. ಕಾಮಗಾರಿ ಪೂರ್ಣಕ್ಕೆ ಅದೂ ತೊಡಕಾಗಿದೆ. ಸಮೀಪದಲ್ಲಿಯೇ ಬಿಡಿಎ ವತಿ
ಯಿಂದ ಬದಲಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಆದರೆ, ಹಳೆಯ ದೇವಸ್ಥಾನವನ್ನು ತೆರವುಗೊಳಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೇಲ್ಸೇತುವೆ ಕೆಳಗಿನ ಎರಡು ಬದಿಯ ರಸ್ತೆಗಳು ಹದಗೆಟ್ಟಿವೆ. ಬೃಹತ್ ಗಾತ್ರದ ಗುಂಡಿಗಳು ಬಿದ್ದಿವೆ. ಆ ರಸ್ತೆಗಳನ್ನು ಇನ್ನೂ ದುರಸ್ತಿಗೊಳಿಸಿಲ್ಲ. ಮೇಲ್ಸೇತುವೆ ಕೆಳ ಭಾಗದಲ್ಲಿ ಓಡಾಟ ನಡೆಸುವವರಿಗೆ ಇದರಿಂದ ತೊಂದರೆ ಉಂಟಾಗಲಿದೆ ಎಂದು ಕ್ಯಾಬ್ ಚಾಲಕ ಮಹೇಶ್ ಹೇಳಿದರು.

‘ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಗಡಿಬಿಡಿಯಲ್ಲಿ ಕಾಮಗಾರಿ ನಡೆಸಿರುವುದು ಸರಿಯಲ್ಲ. ಅಪೂರ್ಣ ಕಾಮಗಾರಿಯಿಂದ ಜನರಿಗೆ ತೊಂದರೆ
ಯುಂಟಾದರೆ ಅದಕ್ಕೆ ಸರ್ಕಾರವೇ ಹೊಣೆ’ ಎಂದು ಹೋಟೆಲ್ ಮಾಲೀಕ ನರಸರೆಡ್ಡಿ ತಿಳಿಸಿದರು.

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ₹1,200 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸುವ ಹಾಗೂ ಮುಖ್ಯ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ 4ರಂದು ನೆರವೇರಿಸಲಿದ್ದಾರೆ.

ಉದ್ಘಾಟನೆ ಕಾರ್ಯಕ್ರಮವು ಮಾಗಡಿ ರಸ್ತೆಯ ನೈಸ್‌ ಜಂಕ್ಷನ್ ಬಳಿಯ ಮೈದಾನದಲ್ಲಿ ನಡೆಯಲಿದೆ.

ಅಂಕಿ–ಅಂಶ

600 ಮೀಟರ್‌ -ಹೆಣ್ಣೂರು ಮೇಲ್ಸೇತುವೆಯ ಉದ್ದ

₹ 54.64 ಕೋಟಿ -ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT