ಭಾನುವಾರ, ಜುಲೈ 25, 2021
22 °C

ದಳಪತಿ ವಿಜಯ್ ನಟನೆಯ 65ನೇ ಚಿತ್ರಕ್ಕೆ ಮಡೋನ್ನಾ ನಾಯಕಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಮಿಳಿನ ದಳಪತಿ ವಿಜಯ್‌ ನಟನೆಯ 65ನೇ ಸಿನಿಮಾಕ್ಕೆ ಎ.ಆರ್‌. ಮುರುಗದಾಸ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ಹೊಸ ಸುದ್ದಿಯೇನಲ್ಲ. ಈಗಾಗಲೇ, ಈ ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸಗಳು ಶುರುವಾಗಿವೆ. ‘ತುಪಾಕಿ’, ‘ಕಥಿ’ ಮತ್ತು ‘ಸರ್ಕಾರ್‌’ ಚಿತ್ರಗಳ ಬಳಿಕ ಈ ಹೊಸ ಸಿನಿಮಾದಲ್ಲಿ ಮತ್ತೆ ವಿಜಯ್‌ ಮತ್ತು ಮುರುಗದಾಸ್‌ ಜೋಡಿ ಒಂದಾಗುತ್ತಿದೆ. ಈ ಮೂರು ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಫಸಲು ತೆಗೆದಿದ್ದವು. ಈ ಹೊಸ ಚಿತ್ರವು 2012ರಲ್ಲಿ ತೆರೆಕಂಡ ‘ತುಪಾಕಿ’ ಚಿತ್ರದ ಸೀಕ್ವೆಲ್‌ ಎಂಬ ಗಾಳಿಸುದ್ದಿಯೂ ಹಬ್ಬಿತ್ತು. ಕೊನೆಗೆ, ಛಾಯಾಗ್ರಾಹಕ ಸಂತೋಷ್‌ ಶಿವನ್‌ ಇದನ್ನು ಅಲ್ಲಗೆಳೆದಿದ್ದರು.

ಆಗಸ್ಟ್‌ನಿಂದ ಈ ಸಿನಿಮಾದ ಶೂಟಿಂಗ್‌ ಶುರುವಾಗುವ ನಿರೀಕ್ಷೆಯಿದೆ. ಆದರೆ, ಇದರಲ್ಲಿ ದಳಪತಿಗೆ ನಾಯಕಿ ಯಾರೆಂಬುದು ಅವರ ಅಭಿಮಾನಿಗಳ ಪ್ರಶ್ನೆ. ಮಲಯಾಳದ ಬೆಡಗಿ ಮಡೋನ್ನಾ ಸೆಬಾಸ್ಟಿನ್‌ ವಿಜಯ್‌ ಜೊತೆಗೆ ರೊಮ್ಯಾನ್ಸ್‌ ಮಾಡಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ.

ನಿರ್ದೇಶಕ ಮಣಿರತ್ನಂ ನಿರ್ಮಿಸಿದ್ದ ತಮಿಳಿನ ‘ವನಂ ಕೊಟ್ಟಟಮ್’ ಚಿತ್ರದಲ್ಲೂ ಮಡೋನ್ನಾ ನಟಿಸಿದ್ದರು. ಮುರುಗದಾಸ್‌ ಅವರು ವಿಡಿಯೊ ಕಾಲ್‌ ಮೂಲಕ ಆಕೆಯೊಟ್ಟಿಗೆ ಮಾತುಕತೆ ನಡೆಸಿದ್ದಾರಂತೆ. ಆಕೆ ಕೂಡ ಸ್ಕ್ರಿಪ್ಟ್‌ ಬಗ್ಗೆ ಇಂಪ್ರೆಸ್‌ ಆಗಿದ್ದಾರಂತೆ. ಆದರೆ, ಇನ್ನೂ ನಟಿಸುವ ಬಗ್ಗೆ ಒಪ್ಪಿಗೆ ನೀಡಿಲ್ಲ. ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಆ ಪೈಕಿ ಮಡೋನ್ನಾ ಅವರ ಹೆಸರನ್ನು ಚಿತ್ರತಂಡ ಅಂತಿಮಗೊಳಿಸಿದೆ. ಆಕೆ ಹಸಿರು ನಿಶಾನೆ ತೋರಿದರೆ ಜೂನ್‌ 22ರ ವಿಜಯ್‌ ಅವರ ಹುಟ್ಟುಹಬ್ಬದಂದು ಅಧಿಕೃತವಾಗಿ ಘೋಷಿಸಲು ಚಿತ್ರತಂಡ ನಿರ್ಧರಿಸಿದೆ. ಅಂದಹಾಗೆ ಕನ್ನಡದಲ್ಲಿ ಶಿವಕಾರ್ತಿಕ್‌ ನಿರ್ದೇಶನದ ಸುದೀಪ್‌ ನಟನೆಯ ‘ಕೋಟಿಗೊಬ್ಬ 3’ ಚಿತ್ರದಲ್ಲಿಯೂ ಆಕೆ ನಾಯಕಿಯಾಗಿ ನಟಿಸಿದ್ದಾರೆ.

ಪ್ರಸ್ತುತ ವಿಜಯ್‌ ನಟನೆಯ 64ನೇ ಸಿನಿಮಾ ‘ಮಾಸ್ಟರ್‌’ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದಲ್ಲಿ ಅವರದು ಪ್ರೊಫೆಸರ್ ಪಾತ್ರ. ಈ ಆ್ಯಕ್ಷನ್‌ ಥ್ರಿಲ್ಲರ್‌ ಚಿತ್ರಕ್ಕೆ ಲೋಕೇಶ್‌ ಕನಕರಾಜ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಇದರಲ್ಲಿ ಮಾಳವಿಕಾ ಮೋಹನನ್‌ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು