ಎರಡು ದೋಣಿ ಮೇಲೆ ‘ಶುಭಾ’ ಪಯಣ

7

ಎರಡು ದೋಣಿ ಮೇಲೆ ‘ಶುಭಾ’ ಪಯಣ

Published:
Updated:

ಸ್ಯಾಂಡಲ್‌ವುಡ್‌ ಜತೆಜತೆಗೆ ತಮಿಳು ಚಿತ್ರರಂಗದಲ್ಲೂ ಗುರುತಿಸಿಕೊಳ್ಳುತ್ತಿರುವ ಕನ್ನಡತಿ, ನಟಿ ಶುಭಾ ರಕ್ಷಾ. ಪ್ರಸ್ತುತ ಇನ್ನೂ ಹೆಸರಿಡದ ತಮಿಳು ಸಿನಿಮಾ ಒಂದರ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಶುಭಾ, ಈ ಹಿಂದೆ ‘ವೈಫೈ’ ಎಂಬ ತಮಿಳು ಸಿನಿಮಾಕ್ಕೂ ಬಣ್ಣ ಹಚ್ಚಿದ್ದರು. ಇವರು ನಟಿಸಿರುವ ಕನ್ನಡ ಸಿನಿಮಾ ‘ಆ್ಯಪಲ್‌ ಕೇಕ್‌’ ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ತೆರೆಗೆ ಬರಲಿದೆ.

ರಂಜಿತ್‌ ಕುಮಾರ್‌ ನಿರ್ದೇಶನದ ‘ಆ್ಯಪಲ್‌ ಕೇಕ್‌’ ಸಿನಿಮಾ ತುಂಬ ವಿಭಿನ್ನವಾದ ಚಿತ್ರ ಎಂಬುದು ಶುಭಾ ನಂಬಿಕೆ. ಈ ಸಿನಿಮಾದಲ್ಲಿ ಅವರು ನಕ್ಷತ್ರ ಎಂಬ ಪಾತ್ರವನ್ನು ನಿರ್ವಹಿಸಿದ್ದಾರಂತೆ. ಇವರಿಗೆ ಜತೆಯಾಗಿ ನಾಯಕನಟ ಕೃಷ್ಣ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭ ಇದೇ ತಿಂಗಳ ಅಂತ್ಯದಲ್ಲಿ ನಡೆಯಲಿದ್ದು, ಚಿತ್ರದಲ್ಲಿ ಮೂರು ಹಾಡುಗಳಿವೆ. ಒಂದು ಹಾಡು ಸ್ನೇಹ ಬೆಸುಗೆಯನ್ನು ತಿಳಿಸುವುದಾದರೆ, ಇನ್ನೆರಡು ಹಾಡುಗಳು ಪ್ರೀತಿ–ಪ್ರೇಮಕ್ಕೆ ಸಂಬಂಧಿಸಿದವು.

ಕನ್ನಡ ಹಾಗೂ ತಮಿಳು ಚಿತ್ರಗಳೆರಡರಲ್ಲೂ ನಟಿಸುತ್ತಿದ್ದೀರಿ, ಯಾವ ಸಿನಿಮಾದ ಮೇಲೆ ನಿಮಗೆ ಹೆಚ್ಚಿನ ನಿರೀಕ್ಷೆ ಇದೆ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ: ‘ಕನ್ನಡದ ಆ್ಯಪಲ್‌ ಕೇಕ್‌ ಸಿನಿಮಾದ ಬಗ್ಗೆಯೇ ನನಗೆ ಅಪಾರ ನಿರೀಕ್ಷೆಗಳಿವೆ. ನಾನು ತುಂಬ ಇಷ್ಟಪಟ್ಟು ಮಾಡಿದ ಸಿನಿಮಾ ಇದು. ಈ ಚಿತ್ರ ವಿಭಿನ್ನವಾಗಿ ಮೂಡಿ ಬಂದಿದೆ. ಈ ಸಿನಿಮಾದಲ್ಲಿ ಕತೆಯೇ ನಾಯಕ. ನಾಲ್ಕು ಜೋಡಿಯ ಕತೆಯನ್ನು ಬೇರೆಬೇರೆಯಾಗಿ ನಿರೂಪಿಸಲಾಗಿದೆ. ಇದೊಂದು ಕೌಟುಂಬಿಕ ಮನರಂಜನಾ ಸಿನಿಮಾ. ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ದೊರಕಿದ್ದು ಮುಂದಿನ ತಿಂಗಳು ತೆರೆಕಾಣಲಿದೆ. ಪ್ರೇಕ್ಷಕರು ನಮ್ಮ ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಹೆಚ್ಚಿದೆ’.

ಕುಟ್ಟಿ ಕುಮಾರನ್‌ ಆ್ಯಕ್ಷನ್‌ ಕಟ್‌ ಹೇಳಿರುವ ಸಸ್ಪೆನ್ಸ್‌, ಥ್ರಿಲ್ಲರ್‌ ಕಥಾಹಂದರದ ‘ಎಫ್‌ಬಿ’ ತಮಿಳು ಸಿನಿಮಾದಲ್ಲಿ ಶುಭಾ ರಕ್ಷಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತರುಣ್‌ ಈ ಚಿತ್ರದ ನಾಯಕನಟ. ಈ ಸಿನಿಮಾದ ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಉಳಿದಿವೆಯಂತೆ.

ರಿಯಲ್‌ ಸ್ಟಾರ್‌ ಉಪೇಂದ್ರ ಅಭಿನಯದ ‘ಹೋಂ ಮಿನಿಸ್ಟರ್‌’ ಸಿನಿಮಾಕ್ಕೂ ಬಣ್ಣ ಹಚ್ಚಿರುವ ಶುಭಾ ರಕ್ಷಾ, ಈ ಚಿತ್ರದಲ್ಲಿ ಉಪೇಂದ್ರ ಅವರೊಂದಿಗೆ ಅಭಿನಯಿಸಿದ್ದು ಅವರಿಗೆ ತುಂಬ ಥ್ರಿಲ್‌ ಕೊಟ್ಟಿತಂತೆ. ‘ಉಪ್ಪಿ ಸರ್‌ ಜತೆಗೆ ಮೊದಲ ಬಾರಿ ಅಭಿನಯಿಸಿದ್ದು ನನ್ನಲ್ಲಿ ಪುಳಕ ಮೂಡಿಸಿತು. ದೊಡ್ಡ ನಟರೊಬ್ಬರ ಜತೆಗೆ ನಟಿಸಿದ್ದು ಇದೇ ಮೊದಲು. ಈ ಸಿನಿಮಾದಲ್ಲಿ ನಾನೊಂದು ಮುಖ್ಯ ಪಾತ್ರವನ್ನು ನಿರ್ವಹಿಸಿದ್ದೇನೆ. ಚಿತ್ರ ನೋಡಿದ ಪ್ರೇಕ್ಷಕರ ನೆನಪಿನಲ್ಲಿ ಉಳಿಯುವಂತಹ ಪಾತ್ರ ಅದು. ಈ ಚಿತ್ರದ ಗ್ರೂಪ್‌ ಸಾಂಗ್‌ಗಾಗಿ ಬ್ಯಾಂಕಾಕ್‌ಗೆ ಹೋಗಿದ್ದೆವು. ಅಲ್ಲಿ ತುಂಬ ಫನ್‌ ಇತ್ತು’ ಎಂದು ಖುಷಿಯಿಂದ ಹೇಳುತ್ತಾರೆ ಶುಭಾ ರಕ್ಷಾ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !