‘ಒಂಥರಾ ಬಣ್ಣ’ಗಳಲ್ಲಿ ಮಿಂದೆದ್ದ ಸೋನು...

7

‘ಒಂಥರಾ ಬಣ್ಣ’ಗಳಲ್ಲಿ ಮಿಂದೆದ್ದ ಸೋನು...

Published:
Updated:
Deccan Herald

ಚಂದನವನದಲ್ಲಿ ಕಳೆದ ಒಂದು ದಶಕದಿಂದ ತುಂಬಾ ಬಿಜಿ ಆಗಿರುವ ತಾರೆ ಸೋನು ಗೌಡ. ತಮ್ಮ ಮೊದಲ ಚಿತ್ರ ‘ಇಂತಿ ನಿನ್ನ ಪ್ರೀತಿಯ’ದಿಂದ ಪ್ರಾರಂಭವಾದ ಇವರ ನಟನಾ ವೃತ್ತಿ ಇಂದು ಬರೀ ಚಂದನವನದಲ್ಲಷ್ಟೇ ಅಲ್ಲದೇ ಕಾಲಿವುಡ್ ಮತ್ತು ಮಾಲಿವುಡ್‌ನಲ್ಲಿ ಹರಡಿದೆ. ಕನ್ನಡದ ಜೊತೆ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಸೋನು ತಮ್ಮ ಛಾಪು ಮೂಡಿಸಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ಸೋನು, ತಮ್ಮ ಮುಂದಿನ ಚಿತ್ರ ‘ಒಂಥರಾ ಬಣ್ಣಗಳು’ ಇದೇ 17ರಂದು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಪ್ರಮೋಷನ್‌ಗೆ ಹುಬ್ಬಳ್ಳಿಗೆ ಬಂದಾಗ ‘ಮೆಟ್ರೊ’ ಜೊತೆ ಮಾತಿಗಿಳಿದರು..

ಸೋನು ಗೌಡ ಮೂಲತಃ ಬೆಂಗಳೂರಿನವರು. ಚಂದನವನದ ಅನುಭವಿ ಮೇಕಪ್ ಆರ್ಟಿಸ್ಟ್ ರಾಮಕೃಷ್ಣ ಅವರ ಮಗಳು ಮತ್ತು ಕಿರುತೆರೆ ನಟಿ, ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಖ್ಯಾತಿಯ ಗೊಂಬೆ (ಶ್ರುತಿ) ಅವರ ಮುದ್ದಿನ ಅಕ್ಕ. 2008ರಲ್ಲಿ ಚಂದನವನಕ್ಕೆ ಪದಾರ್ಪಣೆ ಮಾಡಿದ ಮೇಲೆ ಸೋನು ಚಂದನವನದಲ್ಲಿ ಒಂದರ ಮೇಲೊಂದರಂತೆ ಪ್ರಸಿದ್ಧ ನಟರೊಡನೆ ತೆರೆ ಹಂಚಿಕೊಂಡವರು. ಜೊತೆಗೆ ತಮಿಳಿನ ಖ್ಯಾತ ನಟ ಮುಮ್ಮಟ್ಟಿಯವರ ಜೊತೆ ಅಭಿನಯಿಸಿದವರು.

ನಟನೆಯೇ ಜೀವಾಳವಾಗಿರುವ ಸೋನುಗೆ ಯಾವಾಗಲೂ ನಟನೆಯ ಬಗ್ಗೆಯೇ ಯೋಚನೆಯಂತೆ. ತಮ್ಮ ಪಾತ್ರಗಳ ಬಗ್ಗೆ, ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ತುಂಬಾ ಸೊಗಸಾಗಿ ವ್ಯವಹರಿಸುವ ಈ ನಿಪುಣೆಗೆ ಮೂರು ಭಾಷೆಗಳ ಸಿನಿಮಾಗಳಲ್ಲಿ ಪಾತ್ರ ಮಾಡಿದ ಅನುಭವವಿದೆ. ಕನ್ನಡಕ್ಕೆ ಮೊದಲ ಆದ್ಯತೆ ನೀಡುವ ಸೋನು, ಮಿಕ್ಕೆಲ್ಲ ಭಾಷೆಗಳಿಗಿಂತ ಕನ್ನಡ ಮತ್ತು ಮಲಯಾಳಂದಲ್ಲಿ ತುಂಬಾನೇ ಕಂಫಂರ್ಟ್ ಆಗಿರುತ್ತಾರೆ. ಅವಕಾಶಗಳು ಸಿಕ್ಕರೆ ಸೋನು ಬಾಲಿವುಡ್‌ನಲ್ಲಿ ನಟಿಸುವುದಕ್ಕೂ ರೆಡಿ. ಭಾಷೆ ಯಾವುದಾದರೇನು ಶ್ರದ್ಧೆಯಿಂದ ನಟಿಸಿದರೆ ಜನ ನೋಡುತ್ತಾರೆ. ಜನರನ್ನು ಹಿಡಿದಿಟ್ಟುಕೊಳ್ಳುವ ಕಲೆಯೇ ನಟನೆ. ಅದು ನನ್ನ ಆದ್ಯತೆ ಕೂಡ ಎನ್ನುತ್ತಾರೆ ಸೋನು.

ತಮ್ಮ ಎಲ್ಲ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸೋನು ‘ಕಿರುಗೂರಿನ ಗಯ್ಯಾಳಿಗಳು’ ಸಿನಿಮಾದಲ್ಲಿ ನಾಗಮ್ಮನ ಪಾತ್ರದಲ್ಲಿ ಕನ್ನಡದ ಜನತೆಯ ಮುಂದೆ ವಿಶೇಷವಾಗಿ ಕಾಣಿಸಿಕೊಂಡವರು. ಇವರ ಮುಂದಿನ ಚಿತ್ರ ‘ಒಂಥರಾ ಬಣ್ಣಗಳು’ ರಾಜ್ಯದಾದ್ಯಂತ ತೆರೆಕಾಣುತ್ತಿದ್ದು, ಸೋನು ತಮ್ಮ ಈ ಚಿತ್ರದ ಬಗ್ಗೆ ಹೀಗೆ ಹೇಳುತ್ತಾರೆ.

‘ಒಂಥರಾ ಬಣ್ಣಗಳು ಸಿನಿಮಾ ಜನರಿಗೆ ಸ್ನೇಹ, ಪ್ರೀತಿಯ ಭಾವನೆಗಳೊಂದಿಗೆ ಪ್ರಯಾಣದ ಅನುಭವಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತವೆ. ಬದುಕಿನ ಪ್ರಯಾಣದಲ್ಲಿ ಮನುಷ್ಯನಿಗೆ ಅನೇಕ ಅನುಭವಗಳಾಗುತ್ತವೆ. ಹಾಗೆಯೇ ಪ್ರಯಾಣ ಮಾಡುವಾಗ ಆಗುವ ಅನುಭವಗಳ ಸುಂದರ ಕಥಾನಕವೇ ಒಂಥರಾ ಬಣ್ಣಗಳು. ಇಂತಹ ಚಿತ್ರಗಳು ಬಾಲಿವುಡ್‌ನಲ್ಲಿ ಹೆಚ್ಚಾಗಿ ಕಾಣಸಿಕ್ಕರೂ ಕನ್ನಡದಲ್ಲಿ ಒಂದು ಹೊಸ ಪ್ರಯೋಗವಾಗಿರಲಿದೆ’ ಎನ್ನುತ್ತಾರೆ ಈ ನಟಿ.

ಸೋನು ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ವಿಶೇಷ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಯಾಕಂದ್ರೆ ಇವರು ತಮ್ಮ ಮುಂದಿನ ಚಿತ್ರ ‘ಶಾಲಿನಿ ಐಎಎಸ್’ ನಲ್ಲಿ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರ ಪಾತ್ರಕ್ಕೆ ಜೀವತುಂಬಲಿದ್ದಾರೆ. ಜೊತೆಗೆ ನಟ ಸತೀಶ ನೀನಾಸಂ ಜೊತೆಗೆ ಚಂಬಾಲ್ ಮತ್ತು ನಟ ಉಪೇಂದ್ರ ಅವರ ಜೊತೆ ಐ ಲವ್ ಯೂ, ನಟ ದಿಗಂತ ಜೊತೆ ಫಾರ್ಚುನರ್ ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ.

ಸೋನುಗೆ ವಿಧವಿಧವಾದ ಖಾದ್ಯ, ತಿಂಡಿಗಳೆಂದರೆ ತುಂಬಾ ಇಷ್ಟವಾದರೂ ಇವರು ಡಯಟಿಂಗ್ ಪ್ರಿಯೆ. ನಟನೆಯ ಹೊರತಾಗಿ ಸಿನಿಮಾಗಳನ್ನು ನೋಡುವುದು, ಪುಸ್ತಕ ಓದುವುದು ಸೋನು ಹವ್ಯಾಸಗಳು. ‘ಬಿಯಿಂಗ್ ಸಿಂಪಲ್ ಈಸ್ ದಿ ಬೆಸ್ಟ್’ ಎನ್ನುವುದು ಸೋನು ಅವರ ಫ್ಯಾಷನ್ ಸ್ಟೇಟ್‌ಮೆಂಟ್.

ಸೋನುಗೆ ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ನಟ ಪುನೀತ್ ರಾಜಕುಮಾರ ಜೊತೆ ಅಭಿನಯಿಸುವ ಕನಸಿದೆ. ಜೊತೆಗೆ ಬಾಲಿವುಡ್‌ನ ‘ತುಮ್ಹಾರಿ ಸಲ್ಲು’ ಸಿನಿಮಾದಲ್ಲಿ ವಿದ್ಯಾ ಬಾಲನ್ ಅವರಂತೆ, ಕನ್ನಡದ ರಾಣಿ ಮಹಾರಾಣಿ ಚಿತ್ರದಲ್ಲಿ ನಟಿ ಮಾಲಾಶ್ರೀ ಅವರು ಮಾಡಿರುವ ಪಾತ್ರಗಳಲ್ಲಿ, ಮತ್ತು ಮಹಿಳಾ ಪ್ರಧಾನ ಪಾತ್ರಗಳಲ್ಲಿ ನಟಿಸುವಾಸೆಯಂತೆ. ತಮ್ಮ ತಂಗಿ ನೇಹಾ ಗೌಡ ಅವರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಸೋನು ನೇಹಾರನ್ನು ಡೆಡಿಕೇಟೆಡ್, ಕಮಿಟೆಡ್, ಎಕ್ಸ್‌ಪ್ರೆಸಿವ್, ಟೈಮ್ಲೀ ಹಾಗೂ ಮುದ್ದಿನ ತಂಗಿ ಎನ್ನುವ ಒಕ್ಕಣೆ ಇಡುತ್ತಾರೆ.

ಚಂದನವನಕ್ಕೆ ಪ್ರವೇಶಿಸುವ ಪ್ರತಿಯೊಬ್ಬ ಯುವ ಕಲಾವಿದ, ನಟ, ನಟಿಯರಿಗೆ ಸೋನು ಹೇಳುವುದಿಷ್ಟೇ--ನಟನೆಗೆ ಜೀವಂತಿಕೆ ತುಂಬಲು ನಟ, ನಟಿಯರಿಗೆ ನಟನೆಯ ಬಗ್ಗೆ ತಿಳಿದುಕೊಂಡಿರಬೇಕು. ಆ ಕಲೆಯನ್ನು ಆರಾಧಿಸಬೇಕು, ಇಷ್ಟ ಪಡಬೇಕು ಮತ್ತು ತಮ್ಮನ್ನು ತಾವು ನಟನೆಯಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ನೈಜತೆ ಹೊರಬರುತ್ತದೆ ಎನ್ನುತ್ತಾರೆ ಇವರು.

ಹುಬ್ಬಳ್ಳಿ ಮತ್ತು ಹುಬ್ಬಳ್ಳಿಯ ಜನತೆಯನ್ನು ತಮ್ಮ ಚಿತ್ರದ ಶೂಟಿಂಗ್ ಸಮಯದಲ್ಲಿ ತುಂಬಾ ಹತ್ತಿರದಿಂದ ಕಂಡ ಸೋನುಗೆ ಹುಬ್ಬಳ್ಳಿಯ ಜನರ ರೈ ರುಚಿ ತುಂಬಾ ಇಷ್ಟವಾಯ್ತಂತೆ. ತಮ್ಮ ಭೇಟಿಯ ಸಮಯ ಸೋನು ಮಿರ್ಚಿ ಮಂಡಕ್ಕಿ ತುಂಬಾ ವಾವ್ ಅಂದಿದ್ದೂ ಮಾತ್ರ ಹುಬ್ಬಳ್ಳಿಗರು ಮರೆಯಲಾರರು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !