ಹಳ್ಳಿ ಹುಡುಗಿಯ ಬೆಳ್ಳಿ ಮಾತು

7

ಹಳ್ಳಿ ಹುಡುಗಿಯ ಬೆಳ್ಳಿ ಮಾತು

Published:
Updated:
Deccan Herald

ತುಮಕೂರಿನಲ್ಲಿ ನಡೆದ ನೈಜ ಘಟನೆ ಆಧರಿಸಿ ‘ಪುಟ್ಟರಾಜು’ ಚಿತ್ರದ ಕಥೆ ಹೆಣೆದಿದ್ದಾರೆ ನಿರ್ದೇಶಕ ಸಹದೇವ. ಇದು ಇಬ್ಬರು ಹುಡುಗಿಯರ ಪ್ರೇಮಪಾಶಕ್ಕೆ ಸಿಲುಕುವ ಹುಡುಗನೊಬ್ಬನ ಕಥೆ. ಈ ಚಿತ್ರದ ಮೂಲಕ ಚಂದನವನಕ್ಕೆ ಹೊಸ ಪ್ರತಿಭೆಯ ಪರಿಚಯವಾಗುತ್ತಿದೆ. ಅವರ ಹೆಸರು ಸುಶ್ಮಿತಾ ಸಿದ್ದಪ್ಪ.

ಸುಶ್ಮಿತಾ ಮೂಲತಃ ಮೈಸೂರು ಜಿಲ್ಲೆಯ ಕೆ.ಆರ್‌. ನಗರ ತಾಲ್ಲೂಕಿನ ಮೂಲೆಪೆಟ್ಲು ಗ್ರಾಮದವರು. ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರೈಸಿದ್ದಾರೆ. ಅಪ್ಪ ಕೃಷಿಕ. ತಾಯಿ ಶಿಕ್ಷಕಿ. ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ ಪ್ರದರ್ಶನಕ್ಕೂ ಮೊದಲು ಅವರ ತಾಯಿ ಮನೆಯಲ್ಲಿ ತಾಲೀಮು ನಡೆಸುತ್ತಿದ್ದರಂತೆ. ಕೆಲವು ನಾಟಕಗಳ ಪಾತ್ರಗಳಿಗೆ ಸುಶ್ಮಿತಾ ಅವರೇ ನಾಯಕಿ. ಹಾಗಾಗಿ, ಬಾಲ್ಯದಿಂದಲೇ ನಟನೆ ಬಗ್ಗೆ ಅವರಿಗೆ ವಿಪರೀತ ಮೋಹ ಬೆಳೆಯಿತು.

‘ನಮ್ಮದು ಕಲಾವಿದರ ಕುಟುಂಬವಲ್ಲ. ಅಮ್ಮನಿಂದಲೇ ನಾನು ನಟನೆ ಕಲಿತೆ. ನಾನು ಎಂಜಿನಿಯರಿಂಗ್‌ನ ಏಳನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವಾಗ ಪುಟ್ಟರಾಜು ಚಿತ್ರದ ಆಡಿಶನ್‌ಗೆ ಕರೆ ಬಂತು. ಅಲ್ಲಿ ನನ್ನ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ನಾನು ಹಳ್ಳಿಯಲ್ಲಿ ಬೆಳೆದವಳು. ಮೊದಲ ಚಿತ್ರದಲ್ಲಿಯೇ ಹಳ್ಳಿ ಹುಡುಗಿಯ ಪಾತ್ರ ಸಿಕ್ಕಿರುವುದು ನನ್ನ ಅದೃಷ್ಟ’ ಎನ್ನುತ್ತಾರೆ ಅವರು.

ಹೈಸ್ಕೂಲ್‌ ಮತ್ತು ಕಾಲೇಜು ಹಂತದಲ್ಲಿ ಅವರು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದರಂತೆ. ಆದರೆ, ಎಂಜಿನಿಯರಿಂಗ್‌ ಕಾಲೇಜು ಪ್ರವೇಶಿಸಿದ ಬಳಿಕ ಕ್ರೀಡೆಯಿಂದ ದೂರ ಉಳಿಯಬೇಕಾಯಿತಂತೆ. ಚಿತ್ರದಲ್ಲಿ ಅವರು ಕೊಕ್ಕೊ ಪಟುವಾಗಿ ಕಾಣಿಸಿಕೊಂಡಿದ್ದಾರೆ.

ತಮ್ಮ ಮೊದಲ ಚಿತ್ರ ಮುಗಿಯುವ ಮೊದಲೇ ಅವರಿಗೆ ಆರು ಚಿತ್ರಗಳಲ್ಲಿ ನಟಿಸಲು ಅವಕಾಶ ಬಂದಿದೆ. ಆದರೆ, ಪಾತ್ರಗಳ ಆಯ್ಕೆಯಲ್ಲಿ ಅವರು ಸಾಕಷ್ಟು ಚ್ಯೂಸಿ. ‘ನಾನು ಪಾತ್ರಗಳಿಗೆ ಚೌಕಟ್ಟು ವಿಧಿಸುವುದಿಲ್ಲ. ಗ್ಲಾಮರ್‌ ಪಾತ್ರಗಳಲ್ಲಿಯೂ ನಟಿಸಲು ಸಿದ್ಧ. ರೌಡಿಸಂ ಚಿತ್ರಗಳು ಇಷ್ಟವಿಲ್ಲ. ನಾಯಕಿ ಪ್ರಧಾನ ಪಾತ್ರಗಳಲ್ಲೂ ನಟಿಸಲು ಆಸೆಯಿದೆ. ಚಿತ್ರದಲ್ಲಿ ಉತ್ತಮ ಸಂದೇಶ ಇರಬೇಕು. ಅದು ಜನರಿಗೆ ಇಷ್ಟವಾಗಬೇಕು. ಅಂತಹ ಚಿತ್ರಗಳಿಗೆ ಮಾತ್ರ ನನ್ನ ಮೊದಲ ಆದ್ಯತೆ’ ಎಂದು ವಿವರಿಸುತ್ತಾರೆ. 

ಪುಟ್ಟರಾಜು ಮೇಲೆ ಅವರಿಗೆ ನಿರೀಕ್ಷೆ ಹೆಚ್ಚಿದೆ. ಇನ್ನೊಂದೆಡೆ ಜನರು ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕವೂ ಅವರಿಗೆ ಇದೆ. ‘ಈ ಚಿತ್ರದ ಯಶಸ್ಸಿನ ಮೇಲೆ ನನ್ನ ಮುಂದಿನ ಯೋಜನೆಗಳು ನಿಂತಿವೆ. ಪ್ರೇಕ್ಷಕರಿಂದ ಒಳ್ಳೆಯ ಸ್ಪಂದನೆ ಸಿಗುವ ವಿಶ್ವಾಸವಿದೆ. ಹಾಗಾಗಿ, ಹೊಸ ಚಿತ್ರಗಳಲ್ಲಿ ನಟನೆಗೆ ಕರೆಬಂದರೂ ಇನ್ನೂ ನಿರ್ಧಾರಕೈಗೊಂಡಿಲ್ಲ’ ಎಂದು ಪ್ರಬುದ್ಧವಾಗಿ ನುಡಿಯುತ್ತಾರೆ.

ಕನ್ನಡ ಚಿತ್ರರಂಗದಲ್ಲಿಯೇ ಭವಿಷ್ಯ ಕಟ್ಟಿಕೊಳ್ಳುವ ಗುರಿ ಹೊಂದಿದ್ದಾರೆ. ಇದಕ್ಕಾಗಿ ನಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅವರು ಕಲಿಕೆಯಲ್ಲೂ ಹಿಂದೆ ಬಿದ್ದಿಲ್ಲ. ‘ಎಂಜಿನಿಯರಿಂಗ್‌ ಪೂರ್ಣಗೊಳಿಸಿದ್ದರೂ ಸರ್ಕಾರಿ ಅಥವಾ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಲು ಇಷ್ಟವಿಲ್ಲ. ಸಿನಿಮಾದಲ್ಲಿಯೇ ಮುಂದುವರಿಸುವ ಆಸೆಯಿದೆ. ಬಿಡುವಿನ ವೇಳೆ ಕನ್ನಡ ಸೇರಿದಂತೆ ಪರಭಾಷೆ ಚಿತ್ರಗಳನ್ನು ನೋಡುತ್ತೇನೆ. ನೃತ್ಯ ಕೂಡ ಕಲಿಯುತ್ತಿದ್ದೇನೆ’ ಎನ್ನುತ್ತಾರೆ ಅವರು.  

‘ಪುಟ್ಟರಾಜು ಚಿತ್ರದಲ್ಲಿ ಶಶಿಕಲಾ ಹೆಸರಿನ ಇಬ್ಬರು ಹುಡುಗಿಯರು ಇರುತ್ತಾರೆ. ಆದರೆ, ಎರಡು ಪಾತ್ರಗಳು ಮುಖಾಮುಖಿಯಾಗುವುದಿಲ್ಲ. ನನ್ನ ಮೇಲಿನ ಪ್ರೀತಿಯ ಸಲುವಾಗಿ ನಾಯಕ ಕೂಡ ಕೊಕ್ಕೊ ಕಲಿಯುತ್ತಾನೆ. ಇದು ನನಗೆ ತುಂಬಾ ಇಷ್ಟವಾದ ಪಾತ್ರ. ನಟನೆಗೂ ಮೊದಲು ನಿರ್ದೇಶಕರು ತರಬೇತಿ ನೀಡಿದರು. ಆದರೂ, ಭಯ ಕಾಡುತ್ತಿತ್ತು. ಎಲ್ಲರ ಸಹಕಾರದಿಂದ ನಟನೆ ಸುಲಭವಾಯಿತು. ಹಾಗಾಗಿ, ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಎಂದು ತಮ್ಮ ಪಾತ್ರ ಕುರಿತು ಹೇಳುತ್ತಾರೆ.

ಹಳ್ಳಿಗೆ ತೆರಳಿ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಅವರಿಗೆ ಇಷ್ಟವಂತೆ. ಬಿಡುವಿನ ವೇಳೆ ಪುಸ್ತಕಗಳನ್ನು ಓದುವ ಹವ್ಯಾಸವೂ ಅವರಿಗಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !