ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಡಿಲ ಹೆಣಿಗೆಯೇ ‘ಪುರಾಣ’ದ ಮಿತಿ

Last Updated 19 ಜುಲೈ 2019, 14:29 IST
ಅಕ್ಷರ ಗಾತ್ರ

ಆದಿ ಮತ್ತು ಲಕ್ಷ್ಮಿಯ ಪ್ರೀತಿಯ ಕಥೆ ಆದಿ ಲಕ್ಷ್ಮಿ ಪುರಾಣ. ಇದರಲ್ಲಿ ಆದಿ (ನಿರೂಪ್ ಭಂಡಾರಿ) ಪೊಲೀಸ್ ಅಧಿಕಾರಿ. ಲಕ್ಷ್ಮಿ (ರಾಧಿಕಾ ಪಂಡಿತ್) ಟ್ರಾವೆಲ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುವ ಬಬ್ಲಿ ಹುಡುಗಿ.

ಚಿತ್ರ ಆರಂಭವಾಗುವುದು ರಮೇಶ್ ಅರವಿಂದ್ ಅವರ ನಿರೂಪಣೆಯ ಧ್ವನಿಯ ಮೂಲಕ. ಬೆಂಗಳೂರಿನ ಬಗ್ಗೆ, ಇಲ್ಲಿ ನಡೆಯುತ್ತಿರುವ ಮಾದಕ ವಸ್ತುಗಳ ದಂಧೆಯ ಬಗ್ಗೆ ಹೇಳುವ ಅವರ ದನಿ, ಆದಿಯ ಪಾತ್ರವನ್ನೂ ಪರಿಚಯಿಸುತ್ತದೆ. ಆದಿ ಒಬ್ಬ ಖಡಕ್ ಅಧಿಕಾರಿ, ಸುಳ್ಳು ಹೇಳುವವರನ್ನು ಕಂಡರಾಗದವನು ಎನ್ನುತ್ತದೆ ಹಿನ್ನೆಲೆ ಧ್ವನಿ. ಡ್ರಗ್ಸ್‌ ಮಾಫಿಯಾ ಭೇದಿಸುವ ಜವಾಬ್ದಾರಿಯನ್ನು ಆದಿ ಮೇಲೆ ಹೊರಿಸಲಾಗುತ್ತದೆ.

ಈ ಚಿತ್ರವು ಗಂಭೀರ ಹಾಗೂ ಥ್ರಿಲ್ಲರ್–ಸಸ್ಪೆನ್ಸ್ ಅಂಶಗಳನ್ನು ಹೊಂದಿರುವ ಕಥೆ ಆಗಿರಬಹುದು ಎಂಬ ಭಾವನೆಯನ್ನು ಈ ವಿವರಣೆಗಳು ಬಿತ್ತುತ್ತವೆ. ಇದಾದ ತಕ್ಷಣ ಬರುವುದು ಲಕ್ಷ್ಮಿಯ ಪಾತ್ರದ ಪರಿಚಯ. ಈಕೆಗೆ ಸುಳ್ಳು ಹೇಳುವುದು ಬಹಳ ಸಲೀಸಿನ ಕೆಲಸ! ಲಕ್ಷ್ಮಿಯ ಪಾತ್ರದ ಪ್ರವೇಶ, ಪರಿಚಯ ಆದ ನಂತರ ಚಿತ್ರದ ನಡಿಗೆ ಥ್ರಿಲ್ಲರ್, ಸಸ್ಪೆನ್ಸ್ ಅಂಶಗಳನ್ನು ಬಿಟ್ಟು ತಿಳಿಹಾಸ್ಯದ ಕಡೆ ಹೊರಳುತ್ತದೆ.

ತಿಳಿಹಾಸ್ಯದ ಮಿಶ್ರಣ ಇರುವ ಪ್ರೀತಿಯ ಕಥೆ ಹಾಗೂ ಡ್ರಗ್‌ ಮಾಫಿಯಾ ಬೆನ್ನತ್ತುವ ಪೊಲೀಸ್ ಅಧಿಕಾರಿಯ ಕಥೆಯ ನಡುವೆ ಸಮತೋಲನ ಕಾಯ್ದುಕೊಳ್ಳುವಲ್ಲಿ ಚಿತ್ರ ಯಶಸ್ಸು ಕಾಣದಿರುವುದು ವೀಕ್ಷಕನ ಅನುಭವಕ್ಕೆ ಸುಲಭವಾಗಿ ದಕ್ಕುತ್ತದೆ. ಇದೇ ಈ ಚಿತ್ರದ ಮಿತಿ. ದಕ್ಷ ಪೊಲೀಸ್ ಅಧಿಕಾರಿ ಎನ್ನುವ ವ್ಯಕ್ತಿತ್ವ ಕಟ್ಟಿಕೊಂಡ ಆದಿ, ತಾನು ಪ್ರೀತಿಸಲಿರುವ ಹುಡುಗಿಯನ್ನು ಕಂಡಾಕ್ಷಣ ಪ್ರಮುಖ ಕರ್ತವ್ಯವನ್ನೂ ಮರೆತುಬಿಡುವಂತೆ ನಿರ್ದೇಶಕಿ ಪ್ರಿಯಾ ವಿ. ಅವರು ಚಿತ್ರಿಸಿರುವುದು ಸಿನಿಮಾದ ಸಡಿಲ ಹೆಣಿಗೆಗೆ ನಿದರ್ಶನ.

ಆದಿ ಮತ್ತು ಲಕ್ಷ್ಮಿಗೆ ‍ಪರಸ್ಪರರ ಮೇಲೆ ಪ್ರೀತಿ ಮೂಡುತ್ತದೆ. ಅದನ್ನು ಅವರು ಒಬ್ಬರಲ್ಲೊಬ್ಬರು ಹೇಗೆ ನಿವೇದಿಸಿಕೊಳ್ಳುತ್ತಾರೆ, ಅಲ್ಲಿ ಆಗುವ ತೊಂದರೆಗಳು ಏನು ಎಂಬುದು ಚಿತ್ರದ ಇನ್ನೊಂದು ಎಳೆ. ಇದರಲ್ಲಿ ಇರುವುದು ರಾಧಿಕಾ ಅವರ ಚುರುಕಿನ ನಟನೆಯ ಸೊಗಸು. ವರ್ಷಗಳ ನಂತರ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿರುವ ರಾಧಿಕಾ ಅವರು ವೀಕ್ಷಕರ ಮನಸ್ಸಿನಲ್ಲಿ ಕಚಗುಳಿ ಇಡುವ ಕೆಲಸ ಮುಂದುವರಿಸಿದ್ದಾರೆ. ಆದರೆ ಅವರ ಪ್ರತಿಭೆಯ ಎದುರು ಸೊರಗಿರುವುದು ನಿರೂಪ್‌ ಪಾತ್ರ.

ಪೊಲೀಸ್ ತನಿಖೆಯು ಚಿತ್ರದ ಒಂದು ಪ್ರಮುಖ ಎಳೆಯಾಗಿದ್ದರೂ ಅದಕ್ಕೆ ಬೇಕಿರುವ ಗಾಂಭೀರ್ಯ, ಗಡಸುತನ ಉಳಿಸಿಕೊಳ್ಳದಿರುವುದು ಸಿನಿಮಾದಲ್ಲಿ ಎದ್ದುಕಾಣುವ ಅಂಶ. ಪ್ರೀತಿ–ಪ್ರೇಮದ ಮಜಲಿನ ಕಥೆಯ ನಡುನಡುವೆ ನಗೆಬುಗ್ಗೆಯನ್ನು ಚಿಮ್ಮಿಸಲು ಯಶಸ್ಸು ಕಾಣುವುದು ಚಿತ್ರದ ಹೆಚ್ಚುಗಾರಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT