ಆಟ ಆಡಿಸಲು ಸಜ್ಜಾದ ರಾಘಣ್ಣ

ಸೋಮವಾರ, ಏಪ್ರಿಲ್ 22, 2019
29 °C

ಆಟ ಆಡಿಸಲು ಸಜ್ಜಾದ ರಾಘಣ್ಣ

Published:
Updated:

ಪಶ್ಚಿಮದಲ್ಲಿ ಸೂರ್ಯ ಮುಳುಗಲು ತಯಾರಿ ನಡೆಸಿದ್ದ. ಕಂಠೀರವ ಸ್ಟುಡಿಯೊದಲ್ಲಿದ್ದವರ ಮನದಲ್ಲೂ ಅವಸರವಿತ್ತು. ‘ಆಡಿಸಿದಾಗ’ ಚಿತ್ರದ ಮೊದಲ ದೃಶ್ಯದ ಶೂಟಿಂಗ್‌ ಮುಗಿಸಿದ ಬಳಿಕ ನೇರವಾಗಿ ಬಂದು ಕುರ್ಚಿಯಲ್ಲಿ ಆಸೀನರಾದರು ನಟ ರಾಘವೇಂದ್ರ ರಾಜ್‌ಕುಮಾರ್. ಅವರ ಪಕ್ಕದಲ್ಲಿಯೇ ನಿರ್ದೇಶಕ ಫಣೀಶ್‌ ಭಾರದ್ವಾಜ್‌ ಕೂಡ ಕುಳಿತುಕೊಂಡರು. 

‘ಈ ಚಿತ್ರದಲ್ಲಿ ರಾಘಣ್ಣ ಯಾರು ಎನ್ನುವುದೇ ದೊಡ್ಡ ಪ್ರಶ್ನೆ’ ಎಂದರು ನಿರ್ದೇಶಕರು. ‘ಹಾಗಾದರೆ, ನಾನು ಚಿತ್ರದ ಹೀರೊ ಅಲ್ಲವೇ’ ಎಂದು ಕಾಲೆಳೆದರು ರಾಘಣ್ಣ. ಇದು ಅವರ ನಟನೆಯ 25ನೇ ಚಿತ್ರ. ‘ಅಮ್ಮನ ಮನೆ’ ಚಿತ್ರದ ಬಳಿಕ ಅವರು ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.‌

‘ಆಡಿಸಿದಾತ’ ಟೈಟಲ್‌ ಕೇಳಿದಾಕ್ಷಣ ಡಾ.ರಾಜ್‌ಕುಮಾರ್‌ ಅವರ ‘ಕಸ್ತೂರಿ ನಿವಾಸ’ ಚಿತ್ರ ನೆನಪಾಗುತ್ತದೆ. ಇಂದಿಗೂ ಜನರ ಮನದಲ್ಲಿ ಈ ಹಾಡು ಬೆಚ್ಚಗೆ ಕುಳಿತಿದೆ. ಈ ಹಾಡಿನ ಮೊದಲ ಪದವನ್ನೇ ಈ ಚಿತ್ರಕ್ಕೆ ಶೀರ್ಷಿಕೆಯಾಗಿ ಇಡಲಾಗಿದೆ.  

‘ಆಡಿಸಿದಾಗ ಹಾಡಿನ ಚಿತ್ರೀಕರಣ ನಡೆದಿದ್ದು ಚಿಕ್ಕಮಗಳೂರಿನಲ್ಲಿ. ಆಗ ಅಪ್ಪಾಜ್ಜಿಯೊಟ್ಟಿಗೆ ನಾನೂ ಕೂಡ ಶೂಟಿಂಗ್‌ ಸ್ಥಳಕ್ಕೆ ಹೋಗಿದ್ದೆ. ಈಗ ಅದೇ ಹಾಡಿನ ಟೈಟಲ್‌ ಇರುವ ಚಿತ್ರದಲ್ಲಿ ನಟಿಸುತ್ತಿದ್ದೇನೆ’ ಎಂದು ನೆನಪಿನ ಸುರುಳಿಗೆ ಜಾರಿದರು ರಾಘಣ್ಣ. ‘ಇದು ನಾಯಕ, ನಾಯಕಿ ಇರುವ ರೆಗ್ಯುಲರ್ ಸಬ್ಜೆಕ್ಟ್‌ ಅಲ್ಲ. ಇದು ಹಳೆಯ ಕಥೆ. ಅದರ ನಿರೂಪಣೆಯಲ್ಲಿ ಹೊಸತನವಿದೆ’ ಎಂದು ಮಾತು ವಿಸ್ತರಿಸಿದರು.

ಸಿನಿಮಾದ ಮಧ್ಯಂತರದವರೆಗೂ ರಾಘಣ್ಣ ಅವರ ಪಾತ್ರದ ಬಗ್ಗೆ ಪ್ರೇಕ್ಷಕರಿಗೆ ಗೊತ್ತಾಗುವುದಿಲ್ಲವಂತೆ. ಆ ನಂತರವಷ್ಟೇ ನೋಡುಗರಿಗೂ ಅವರ ಪಾತ್ರದ ಬಗ್ಗೆ ಅರಿವಾಗುತ್ತದೆಯಂತೆ. ‘ಮೊದಲಿಗೆ ನಿರ್ದೇಶಕರು ನನಗೂ ಸ್ಕ್ರಿಪ್ಟ್‌ ಬಗ್ಗೆ ಹೇಳಿದಾಗ ಅರ್ಥವಾಗಲಿಲ್ಲ. ನಾಲ್ಕೈದು ಬಾರಿ ಕಥೆ ಕೇಳಿದಾಗಲೇ ಅದರ ಸತ್ವ ಅರ್ಥವಾಯಿತು. ಹೊಸ ಗೆಟೆಪ್‌ ಹಾಕಿದ್ದಾರೆ. ನಾನು ಇನ್ನೂ ಕಲಿಯುತ್ತಲೇ ಇದ್ದೇನೆ’ ಎಂದು ವಿಧೇಯ ವಿದ್ಯಾರ್ಥಿಯಂತೆ ಹೇಳಿದರು.

ನಿರ್ದೇಶಕ ಎಂ.ಡಿ. ಶ್ರೀಧರ್‌ ಬಳಿ ಕೆಲಸ ಮಾಡಿರುವ ಫಣೀಶ್‌ ಭಾರದ್ವಾಜ್‌ಗೆ ಇದು ಎರಡನೇ ಸಿನಿಮಾ. ‘ದುಡ್ಡು ಮತ್ತು ಮಾನವೀಯತೆ ನಡುವಿನ ಮಹತ್ವ ಹೇಳುವ ಕಥೆ ಇದೆ. ಚಿತ್ರದಲ್ಲಿ ಏಳೆಂಟು ಪಾತ್ರಗಳಿರುತ್ತವೆ. ಅವುಗಳನ್ನು ರಾಘಣ್ಣ ಹೇಗೆ ಆಟವಾಡಿಸುತ್ತಾರೆ ಎನ್ನುವುದೇ ಚಿತ್ರದ ತಿರುಳು’ ಎಂದು ವಿವರಿಸಿದರು.

‘ಬಾನಿಗೊಂದು ಎಲ್ಲೆ ಎಲ್ಲಿದೆ...’ ಹಾಡನ್ನು ಈ ಚಿತ್ರದಲ್ಲಿ ರಾಘಣ್ಣ ಅವರ ಕಂಠಸಿರಿಯಲ್ಲಿ ವಿಭಿನ್ನವಾಗಿ ಹಾಡಿಸುವ ಆಲೋಚನೆ ನಿರ್ದೇಶಕರದ್ದು. ಬೆಂಗಳೂರು ಮತ್ತು ಮೈಸೂರಿನಲ್ಲಿ ಶೂಟಿಂಗ್‌ ನಡೆಸಲು ಚಿತ್ರತಂಡ ನಿರ್ಧರಿಸಿದೆ. 

ಚಿತ್ರದಲ್ಲಿ ಐದು ಹಾಡುಗಳಿದ್ದು, ಕದ್ರಿ ಮಣಿಕಾಂತ್‌ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಉದಯ್‌ ಬಲ್ಲಾಳ್‌ ಅವರದ್ದು. ಬಿ.ಎಂ. ಚೇತನ್‌ ಆರ್ಥಿಕ ಇಂಧನ ಒದಗಿಸಿದ್ದಾರೆ. ಶ್ರೀ, ಅಭಿ ತಾರಾಗಣದಲ್ಲಿದ್ದಾರೆ. 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !