ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಿತಿ: ಬಜಾರಿನ ಒಡತಿ

Last Updated 24 ಜನವರಿ 2019, 19:31 IST
ಅಕ್ಷರ ಗಾತ್ರ

‘ಧೈರ್ಯಂ’ ಚಿತ್ರದ ಮೂಲಕ ಕನ್ನಡ ಹಿರಿತೆರೆಗೆ ಬಂದ ನಟಿ ಅದಿತಿ ಪ್ರಭುದೇವ ಈಗ ‘ಬಜಾರ್’ ಚಿತ್ರ ತೆರೆಗೆ ಬರುವುದನ್ನು ಕಾಯುತ್ತಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ‘ಬಜಾರ್’ ಅದಿತಿ ಅವರ ಎರಡನೆಯ ಸಿನಿಮಾ.

ಕಿರುತೆರೆಯ ಮೂಲಕ ಅಭಿನಯ ಲೋಕದಲ್ಲಿ ನೆಲೆ ಕಂಡುಕೊಂಡ ಅದಿತಿ ಪಾಲಿಗೆ ‘ನಿಯತ್ತಿನಿಂದ ಕೆಲಸ ಮಾಡು, ಎಲ್ಲವೂ ಒಳ್ಳೆಯದೇ ಆಗುತ್ತದೆ’ ಎಂಬುದು ನಿತ್ಯದ ಮಂತ್ರ. ‘ಬಜಾರ್’ ಸಿನಿಮಾ ಸೇರಿದಂತೆ ಮೂರ್ನಾಲ್ಕು ವಿಷಯಗಳ ಬಗ್ಗೆ ಅದಿತಿ ಅವರು ‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಸಿಕ್ಕಿದ್ದರು.

‘ಬಜಾರ್‌’ ಚಿತ್ರ ಒಂದೆರಡು ವಾರಗಳಲ್ಲಿ ಬಿಡುಗಡೆ ಕಾಣುವ ಹಂತದಲ್ಲಿದೆ. ‘ಈ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ಹೇಗೆ’ ಎಂದು ಕೇಳಿದಾಗ, ‘ಆಡಿಷನ್ ಮೂಲಕ’ ಎಂದು ಉತ್ತರಿಸಿದರು. ನಂತರ ತುಸು ವಿವರ ನೀಡಿದ ಅದಿತಿ, ‘ನಾನು ನಾಗಕನ್ನಿಕೆ ಧಾರಾವಾಹಿಯಲ್ಲಿ ನಟಿಸುತ್ತಿದೆ. ಆಗಲೂ ಹಿರಿತೆರೆಯಲ್ಲಿ ಅಭಿನಯಿಸುವ ಕನಸು ಇದ್ದೇ ಇತ್ತು. ಆದರೆ, ಕೆಲಸದ ಒತ್ತಡಗಳ ನಡುವೆ ಅದು ಸಾಧ್ಯವಾಗಿರಲಿಲ್ಲ. ನಿರ್ದೇಶಕ ಸುನಿ ಅವರು ಆಡಿಷನ್‌ಗೆ ನನ್ನನ್ನು ಕರೆದರು. ‘ಬಜಾರ್’ ಎಂಬ ಸಿನಿಮಾ ಮಾಡುತ್ತಿದ್ದೇವೆ. ಲುಕ್ ಟೆಸ್ಟ್‌ ಆಡಿಷನ್ ಕೊಡಿ ಎಂದು ಅವರೇ ಹೇಳಿದರು. ಆ ಮೂಲಕ ಚಿತ್ರಕ್ಕೆ ಆಯ್ಕೆಯಾದೆ’ ಎಂದು ನಕ್ಕರು ಅದಿತಿ.

‘ಬಜಾರ್‌’ನಲ್ಲಿ ಇವರಿಗೆ ಸಿಕ್ಕಿರುವ ಪಾತ್ರ ಹತ್ತು ಹಲವು ಭಾವನೆಗಳ ಮಿಶ್ರಣದಂತೆ ಇದೆ. ‘ಅವಳು (ಪಾತ್ರಕ್ಕೆ) ಬಯ್ಯುತ್ತಾಳೆ, ಅಳುತ್ತಾಳೆ, ನಗುತ್ತಾಳೆ, ದ್ವೇಷ ಮಾಡುತ್ತಾಳೆ, ಅಸೂಯೆಪಡುತ್ತಾಳೆ, ಪ್ರೀತಿಸುತ್ತಾಳೆ... ಹೀಗೆ ಮಿಶ್ರ ಗುಣಗಳ ಹೆಣ್ಣು ಆಕೆ. ಅವಳಲ್ಲಿ ಒಂದಿಷ್ಟು ಕರುಣೆ, ಜವಾಬ್ದಾರಿ, ತುಂಟತನಗಳೂ ಇರುತ್ತವೆ. ‍ಪ್ರತಿ ದೃಶ್ಯದಲ್ಲೂ ಒಂದೊಂದು ಸ್ವಭಾವವನ್ನು ಆಕೆ ವ್ಯಕ್ತಪಡಿಸುತ್ತಾಳೆ’ ಎಂಬ ವಿವರಣೆ ನೀಡಿದರು.

ಕನ್ನಡದ ಹಲವು ಚಿತ್ರಗಳಲ್ಲಿ ನಾಯಕಿಯ ಪಾತ್ರ ನಾಯಕನನ್ನು ಲವ್ ಮಾಡುವುದು, ಕೊನೆಯಲ್ಲಿ ಆತನನ್ನು ಮದುವೆ ಆಗುವುದು! ಆದರೆ, ‘ಬಜಾರ್ ಚಿತ್ರದಲ್ಲಿ ನಿಮಗೆ ಸಿಕ್ಕಿರುವ ಪಾತ್ರ ಅಂಥದ್ದೇನಾ’ ಎಂದು ತುಸು ಕಿರಿಕಿರಿ ಉಂಟುಮಾಡುವ ಪ್ರಶ್ನೆಯನ್ನು ಅವರ ಮುಂದೆ ಇರಿಸಿದಾಗ, ‘ನಾನು ಅದೃಷ್ಟವಂತೆ. ಸುನಿ ಅವರು ಬಹಳ ವಿಭಿನ್ನ ಮಾದರಿಯ ನಿರ್ದೇಶಕರು. ಅವರ ಸಿನಿಮಾಗಳಲ್ಲಿ ಎಲ್ಲ ಪಾತ್ರಗಳಿಗೂ ಪ್ರಾಮುಖ್ಯತೆ ಇರುತ್ತದೆ’ ಎಂದು ಉತ್ತರಿಸುವ ಮೂಲಕ, ತಮ್ಮದು ನಾಯಕನ ಸುತ್ತ ಸುತ್ತುವ ಪಾತ್ರ ಅಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದರು.

‘ನನಗೆ ಈವರೆಗೆ ಸಿಕ್ಕಿದ ಎಲ್ಲ ಪಾತ್ರಗಳೂ ಜನ ಗುರುತಿಸುವಂಥವೇ. ಧಾರಾವಾಹಿಗಳಲ್ಲಿ ಕೂಡ ನನಗೆ ಅಂಥ ಪಾತ್ರಗಳೇ ಸಿಕ್ಕಿವೆ. ನಾನು ಅಭಿನಯಿಸುತ್ತಿರುವ ತೋತಾಪುರಿ, ಸಿಂಗ ಸಿನಿಮಾಗಳಲ್ಲಿ ಕೂಡ ಅಭಿನಯಕ್ಕೆ ಹೆಚ್ಚು ಪ್ರಾಧಾನ್ಯತೆ ಇರುವ ಪಾತ್ರಗಳು ಸಿಕ್ಕಿವೆ’ ಎಂದರು ಅದಿತಿ.

‘ಯಾವ ಪಾತ್ರ ಕೊಟ್ಟರೂ ನಿಭಾಯಿಸಬಲ್ಲೆ’ ಎನ್ನುವ ವಿಶ್ವಾಸ ಅದಿತಿ ಅವರಲ್ಲಿದೆ. ಆದರೆ ಪೌರಾಣಿಕ ಪಾತ್ರಗಳನ್ನು, ಅಭಿನಯಕ್ಕೆ ಸವಾಲು ಅನಿಸುವಂಥ ಪಾತ್ರಗಳನ್ನು ನಿಭಾಯಿಸುವ ಆಸೆ ಅವರದ್ದು. ‘ಆಸೆಗೆ ತಕ್ಕಂತಹ ಪಾತ್ರ ತೋತಾಪುರಿ ಸಿನಿಮಾದಲ್ಲಿ ಇದೆ. ಆ ಪಾತ್ರಕ್ಕೆ ಸಂಬಂಧಿಸಿದ ತೀರಾ ಸಣ್ಣ ಸಣ್ಣ ವಿಷಯಗಳ ಬಗ್ಗೆಯೂ ಹೆಚ್ಚೆಚ್ಚು ಗಮನ ನೀಡಿ ಕೆಲಸ ಮಾಡಿದ್ದೇನೆ’ ಎಂದರು.

ಅದಿತಿ ಅವರು ಓದಿದ್ದು ಎಂಜಿನಿಯರಿಂಗ್ ಮತ್ತು ಎಂಬಿಎ. ಅವರು ಅಭಿನಯಕ್ಕೆ ಕಾಲಿರಿಸಿದ್ದೇ ಆಕಸ್ಮಿಕವಾಗಿ. ತೆರೆಯ ಮೇಲೆ ಕಾಣಿಸಿಕೊಳ್ಳುವ ವಿಚಾರದಲ್ಲಿ ಮನೆಯಲ್ಲಿ ಯಾರೂ ವಿರೋಧ ವ್ಯಕ್ತಪಡಿಸಲಿಲ್ಲ. ‘ಅಪ್ಪ– ಅಮ್ಮ ಬೇಡ ಅಂದಿದ್ದರೆ ನಾನು ಸಿನಿಮಾಕ್ಕೆ ಬರುತ್ತಲೇ ಇರಲಿಲ್ಲ’ ಎನ್ನುವುದು ಅವರ ಮಾತು. ‘ಬಜಾರ್’ ನಂತರ ಯಾವ ಸಿನಿಮಾ ಒಪ್ಪಿಕೊಳ್ಳಬೇಕು ಎಂಬ ಬಗ್ಗೆ ಅವರು ಇನ್ನಷ್ಟೇ ತೀರ್ಮಾನ ಮಾಡಬೇಕಿದೆ.

ತಮಗೆ ಇಷ್ಟವಾಗುವಂತಹ ಇನ್ನಷ್ಟು ಪಾತ್ರಗಳು ಮುಂದೆ ಸಿಗುತ್ತವೆ ಎಂಬ ಭರವಸೆ ಅವರಲ್ಲಿದೆ. ‘ಹೀರೊಗೆ ಒಬ್ಬಳು ಹೀರೊಯಿನ್ ಎಂಬಂತಹ ಪಾತ್ರಗಳು ಹೆಚ್ಚೆಚ್ಚು ಬರುತ್ತಿದ್ದವು. ಆದರೆ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ. ಹೊಸ ರೀತಿಯ ಕಥೆಗಳು ಬರುತ್ತಿವೆ. ಹೆಣ್ಣಿಗೆ ತೀರಾ ಡೈನಾಮಿಕ್ ಆದ (ಪೊಲೀಸ್ ಅಧಿಕಾರಿ, ತನಿಖಾಧಿಕಾರಿ ಇತ್ಯಾದಿ) ಪಾತ್ರಗಳನ್ನು ಕೊಟ್ಟರೆ ಜನ ನೋಡುವುದಿಲ್ಲ, ಕೆಲವು ಸಿದ್ಧ ಮಾದರಿಯ ಸಿನಿಮಾಗಳನ್ನು ಮಾತ್ರ ಜನ ಇಷ್ಟಪಡುತ್ತಾರೆ ಎಂಬ ತಪ್ಪು ಕಲ್ಪನೆ ದೂರವಾಗುವ ಕಾಲ ಕೂಡ ಬರುತ್ತಿದೆ’ ಎಂದರು.

ಕಿರುತೆರೆ, ಹಿರಿತೆರೆ ಎರಡೂ ಜೀವ
ಹಿರಿತೆರೆ ಹೆಚ್ಚು ಇಷ್ಟವೋ, ಕಿರುತೆರೆಯೋ ಎಂದು ಪ್ರಶ್ನಿಸಿದಾಗ, ‘ಅಭಿನಯವನ್ನು ನಾನು ಹೆಚ್ಚು ಇಷ್ಟಪಡುತ್ತೇನೆ. ನಾನು ಕಷ್ಟದಲ್ಲಿ ಇದ್ದಾಗ ನನಗೆ ಊಟ ಹಾಕಿದ್ದು, ಒಳ್ಳೆಯ ಹೆಸರು ತಂದುಕೊಟ್ಟಿದ್ದು, ಎಲ್ಲರೂ ಗುರುತಿಸುವಂತೆ ಮಾಡಿದ್ದು ಧಾರಾವಾಹಿ. ಕಿರುತೆರೆಯ ಕಾರಣದಿಂದಲೇ ನನಗೆ ಹಿರಿತೆರೆಯಲ್ಲಿ ಹೆಚ್ಚು ಐಡೆಂಟಿಟಿ ಸಿಕ್ಕಿತು. ಕಿರುತೆರೆ ಹಾಗೂ ಹಿರಿತೆರೆ ನನಗೆ ಜೀವ ಇದ್ದಂತೆ’ ಎಂದರು.

**

ಕೈಯಲ್ಲಿ ಇರುವ ಕೆಲಸವನ್ನು ನಿಯತ್ತಿನಿಂದ ಮಾಡಿದರೆ ಎಲ್ಲವೂ ಒಳ್ಳೆಯದೇ ಆಗುತ್ತದೆ. ಒಳ್ಳೆಯದಾಗುವ ಕಾಲ ಬರುವವರೆಗೆ ಕಾಯಬೇಕು
– ಅದಿತಿ ಪ್ರಭುದೇವ, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT