ಹೀರೊ ಆದಾಗ ವಯಸ್ಸು 32.. ವಿಜಯ್‌ ಸೇತುಪತಿ ಮನದಾಳದ ಮಾತು

7

ಹೀರೊ ಆದಾಗ ವಯಸ್ಸು 32.. ವಿಜಯ್‌ ಸೇತುಪತಿ ಮನದಾಳದ ಮಾತು

Published:
Updated:
Deccan Herald

ಜಯ್ ಸೇತುಪತಿ ಈಗ ತನ್ನದೇ ಮಾರುಕಟ್ಟೆ ಇರುವ ನಾಯಕ. ಮಿಡ್ ಲೆವೆಲ್ ನಾಯಕ. ತನ್ನ ಸ್ಥಾನವನ್ನು ತಾನೇ ಕಟ್ಟುಕೊಂಡಿದ್ದಾನೆ.’- ಹೀಗೊಂದು ಅಭಿಪ್ರಾಯವನ್ನು ತಮಿಳು ಸಿನಿಮಾ ವಿಶ್ಲೇಷಕ ಶ್ರೀಧರ್ ಪಿಳ್ಳೈ ವರ್ಷಗಳ ಹಿಂದೆ ತೇಲಿಬಿಟ್ಟರು. 

ತಮಿಳುನಾಡಿನ ವಿರುಧುನಗರ ಜಿಲ್ಲೆಯ ರಾಜಪಾಳ್ಯಂನಲ್ಲಿ ಬೆಳೆದ ವಿಜಯ್ ಸೇತುಪತಿ ‘ನಮ್ಮವರ್’ ಸಿನಿಮಾ ಚಿತ್ರೀಕರಣ ನೋಡಲು ಸ್ನೇಹಿತರ ಜತೆಗೆ ಹೋದಾಗ 16ನೇ ವಯಸ್ಸು. ಕಮಲ ಹಾಸನ್ ಆ ಸಿನಿಮಾದ ನಾಯಕ. ಅವರ ಜೊತೆ ಹಿನ್ನೆಲೆಯ ನಟರಲ್ಲಿ ಒಬ್ಬರಾಗಲು ನಾ ಮುಂದು ತಾ ಮುಂದು ಎಂದು ನಿಂತವರಲ್ಲಿ ವಿಜಯ್ ಕೂಡ ಒಬ್ಬರು. ‘ನೀನು ಕುಳ್ಳಗಿದ್ದೀಯ… ಬೇಡ ಹೋಗು’ ಎಂದು ಸೆಟ್‌ನಲ್ಲಿ ಒಬ್ಬರು ತಿರಸ್ಕರಿಸಿದರು.

ಅಲ್ಲಿಂದಾಚೆಗೆ ಸಿನಿಮಾ ಬಗೆಗೆ ತಲೆಕೆಡಿಸಿಕೊಳ್ಳದೆ ಬಿ.ಕಾಂ ಓದುವಾಗಲೇ ವಿಜಯ್ ಸೀದಾ ಆಡಿಟರ್ ಕಚೇರಿಯಲ್ಲಿ ಲೆಕ್ಕಿಗನ ಕೆಲಸಕ್ಕೆ ಸೇರಿಕೊಂಡರು. ಜವಳಿ ಅಂಗಡಿಯಲ್ಲೂ ಕೆಲಸ ಮಾಡಿದರು. ಟೆಲಿಫೋನ್ ಬೂತ್ ನೋಡಿಕೊಳ್ಳುವ ಕೆಲಸ ಮಾಡಿದ ದಿನಗಳೂ ಇವೆ. ಇವೆಲ್ಲ ಅರೆಕಾಲಿಕ ಕೆಲಸಗಳಿಂದ ಪಾಕೆಟ್ ಮನಿ ಹೊಂದಿಸಿಕೊಳ್ಳಲಾಯಿತಷ್ಟೆ. ಕಾಲೇಜು ಓದು ಮುಗಿದ ಮೇಲೆ ಸಿಮೆಂಟ್ ಡೀಲರ್‌ಷಿಪ್ ಅಂಗಡಿಯಲ್ಲಿ ಲೆಕ್ಕಿಗನಾಗಿ ಸೇರಿಕೊಂಡರು. ತಿಂಗಳಿಗೆ 3,500 ರೂಪಾಯಿ ಸಂಬಳ. ಬೆಳಿಗ್ಗೆ 9ರಿಂದ ರಾತ್ರಿ 7.30ರವರೆಗೆ ಅಲ್ಲಿ ದುಡಿದು, ಆಮೇಲೆ 8ರಿಂದ ಮಧ್ಯರಾತ್ರಿಯವರೆಗೆ ಟೆಲಿಫೋನ್ ಬೂತ್ ನೋಡಿಕೊಳ್ಳುತ್ತಿದ್ದರು. ಈ ಹೆಚ್ಚುವರಿ ಕೆಲಸದಿಂದ ತಿಂಗಳಿಗೆ 1200 ರೂಪಾಯಿ ಸಿಗುತ್ತಿತ್ತು.

ನವೆಂಬರ್ 2000ದಲ್ಲಿ ದುಬೈನಲ್ಲಿ 12 ಸಾವಿರ ರೂಪಾಯಿ ಸಂಬಳದ ಕೆಲಸ ಸಿಕ್ಕಿತು. ಹೋಗದೇ ವಿಧಿಯಿರಲಿಲ್ಲ. 2003ರಲ್ಲಿ ಜೆಸ್ಸಿ ಎಂಬ ಹುಡುಗಿಯನ್ನು ಪ್ರೀತಿಸಿ ಮದುವೆಯೂ ಆದರು. ಆಗ ಅವರ ವಯಸ್ಸಿನ್ನೂ 24. ಸಹೋದರ ತೆಗೆದ ಫೋಟೊಗಳನ್ನು ನೋಡಿ, ‘ನಾನೂ ಹೀರೊ ಆಗಬಹುದಲ್ಲವೇ’ ಎಂಬ ಹುಳು ಮನದಲ್ಲಿ ರೆಕ್ಕೆ ಬಡಿಯಿತು. ‘ಕೂತು-ಪಿ-ಪಟ್ಟಾರೈ’ ಎಂಬ ಚೆನ್ನೈನ ರಂಗತಂಡದಲ್ಲಿ ಅಭಿನಯ ಕಲಿಯಲೆಂದು ದುಬೈನಿಂದ ವಿಮಾನ ಹತ್ತಿಬಿಟ್ಟರು.

ಇಲ್ಲಿ ಅಭಿನಯದ ಕೋರ್ಸ್ ಬಂದ್ ಆಗಿತ್ತು. ಲೆಕ್ಕಿಗನ ಕೆಲಸ ಖಾಲಿ ಇತ್ತು. ವಿಜಯ್ ಸೇತುಪತಿ ಅದಕ್ಕೇ ಸೇರಿಕೊಂಡರು. ಅಲ್ಲಿ ಸಂಬಳ ಕಡಿಮೆ ಇದ್ದರೂ ನಟರನ್ನು ನೋಡಿಯೇ ಕಲಿಯಬಹುದಲ್ಲ ಎಂದುಕೊಂಡು ಸುಮ್ಮನಾದರು. ಮನೆಯಲ್ಲೂ ಸಂಬಳ ಕಡಿಮೆ ಎಂದು ಹೇಳಲಿಲ್ಲ. ಐವತ್ತು ಹಳ್ಳಿಗಳಲ್ಲಿ ಸುನಾಮಿ ಕುರಿತು ನಾಟಕ ಆಡಿದಾಗ ಅವರಿಗೂ ಅವಕಾಶ ಸಿಕ್ಕಿತು.

ಪುದುಪೆಟ್ಟೈ, ಡಿಶ್ಯುಂ, ಎಂ. ಕುಮಾರನ್/ಸನ್ ಆಫ್ ಮಹಾಲಕ್ಷ್ಮೀ, ಲೀ, ನಾನು ಮಹಾನ್ ಅಲ್ಲ ತರಹದ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳು ಸಿಕ್ಕವು. ಸನ್ ಟಿ.ವಿ.ಯಲ್ಲಿ ಪ್ರಸಾರವಾದ ‘ಪೆಣ್’ ಎಂಬ ಧಾರಾವಾಹಿಯ ಪ್ರಮುಖ ಪಾತ್ರ ಹುಡುಕಿಕೊಂಡು ಬಂತು. ಆ ಕಾಲಘಟ್ಟದಲ್ಲೇ ಕಾರ್ತಿಕ್ ಸುಬ್ಬರಾಜ್ ನಿರ್ದೇಶಕ ಆಗುವ ಕನಸು ಕಾಣುತ್ತಾ, ಕಿರುಚಿತ್ರಗಳನ್ನು ತೆಗೆಯುತ್ತಿದ್ದರು. ಅವರ ಪ್ರಯೋಗದ ಭಾಗವಾಗಿ ಅಭಿನಯಿಸಲು ವಿಜಯ್ ಮುಂದಾದದ್ದು ಬದುಕಿನ ದೊಡ್ಡ ತಿರುವು.

ಮೊದಲ ಶಾಟ್ ಚಿತ್ರೀಕರಿಸಿದ ನಂತರ ಕಾರ್ತಿಕ್ ಸುಬ್ಬರಾಜ್, ‘ನೀನು ದೊಡ್ಡ ನಟ ಆಗುವುದರಲ್ಲಿ ಅನುಮಾನವೇ ಇಲ್ಲ’ ಎಂದು ಭವಿಷ್ಯ ನುಡಿದರು. ‘ಪಿಜ್ಜಾ’ ಸಿನಿಮಾ ನಿರ್ದೇಶಿಸಲು ಹೊರಟಾಗ ಕಾರ್ತಿಕ್ ಸುಬ್ಬರಾಜ್ ಎರಡನೇ ಯೋಚನೆಯೇ ಇಲ್ಲದೆ ವಿಜಯ್ ಸೇತುಪತಿ ಅವರನ್ನೇ ಹೀರೊ ಮಾಡಿದರು. ಅಷ್ಟು ಹೊತ್ತಿಗೆ ವಿಜಯ್‌ ಅವರಿಗೆ ವಯಸ್ಸು 32 ತುಂಬಿತ್ತು. ಸಿನಿಮಾ ತೆರೆಗೆ ಬರುವಷ್ಟರಲ್ಲಿ ಇನ್ನೂ ಎರಡು ವರ್ಷದಷ್ಟು ಹಳಬರಾಗಿದ್ದರು.

ಹದಿನಾರನೇ ವಯಸ್ಸಿನಲ್ಲಿ ತಿರಸ್ಕಾರ ಎದುರಿಸಿ, ಆಮೇಲೆ ವರ್ಷಗಟ್ಟಲೆ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡು ಬಂದಿದ್ದ ವಿಜಯ್ ಸೇತುಪತಿ ನಿಧ ನಿಧಾನವಾಗಿ ತಮ್ಮ ಮಾರುಕಟ್ಟೆಯನ್ನು ಕಂಡು ಕೊಂಡರು. 13 ಕೋಟಿ ರೂಪಾಯಿ ಬಜೆಟ್‌ನ ಸಿನಿಮಾ ಮಾಡಿದರೆ, ವಿಜಯ್ ಅಭಿನಯ ಅದರ ದುಪ್ಪಟ್ಟನ್ನು ತಂದು ಕೊಡಬಲ್ಲದು ಎಂಬ ಲೆಕ್ಕಾಚಾರ ಶುರುವಾಯಿತು. ಖುದ್ದು ಲೆಕ್ಕಿಗ ಆಗಿದ್ದ ವಿಜಯ್, ಹದವರಿತ ನಟನಾಗಿ
ಬದಲಾದರು.

ಕಳೆದ ವರ್ಷ ತೆರೆಕಂಡ ‘ವಿಕ್ರಂ ವೇದ’ ತಮಿಳು ಸಿನಿಮಾ ನಟನಾಗಿ ಅವರಿಗೆ ಇನ್ನೊಂದು ದೊಡ್ಡ ಜಿಗಿತ. ಈಗ ನಿರ್ದೇಶಕ ಮಣಿರತ್ನಂ ‘ಚೆಕ್ಕ ಚಿವಂತ ವಾನಂ’ ಸಿನಿಮಾದ ಪ್ರಮುಖ ಪಾತ್ರ ಕೊಟ್ಟಿದ್ದು, ಅದಕ್ಕೂ ಪ್ರಶಂಸೆಗಳ ಸುರಿಮಳೆ.  ‘ದಿವಿನಾದ ಸೋಫಾ ಮೇಲೆ ಕುಳಿತು ಕಣ್ಮುಚ್ಚಿದರೆ, ನನ್ನ ಬದುಕೇ ಎಷ್ಟು ಸಿನಿಮೀಯವಾಗಿದೆ ಎನಿಸುತ್ತದೆ’ ಎನ್ನುವ ವಿಜಯ್ ಸೇತುಪತಿಯ ನಶೆ ಬೆರೆತ ನೋಟದಲ್ಲಿ ಹಾದುಬಂದ ಕಷ್ಟಗಳೆಲ್ಲ ಇಡುಕಿರಿದಿವೆ.‌

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !