ಸೋಮವಾರ, ಡಿಸೆಂಬರ್ 5, 2022
26 °C

ಐಶ್ವರ್ಯ ರೈ ಬಚ್ಚನ್‌, ಮಗಳು ಆರಾಧ್ಯ ಬಚ್ಚನ್‌ಗೆ ಕೊರೊನಾ ವೈರಸ್‌ ಸೋಂಕು ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‍ನ ಹೆಸರಾಂತ ನಟ ಅಮಿತಾಭ್ ಬಚ್ಚನ್‍, ಅವರ ಪುತ್ರ ಅಭಿಷೇಕ್‍ ಅವರಿಗೆ ಕೋವಿಡ್‍ ದೃಢಪಟ್ಟ ಹಿಂದೆಯೇ ಸೊಸೆ ಐಶ್ವರ್ಯಾ ರೈ, ಮೊಮ್ಮಗಳು ಆರಾಧ್ಯಾಗೂ ಸೋಂಕು ತಗುಲಿದೆ.

ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್‍ ತೋಪೆ ಭಾನುವಾರ ಇದನ್ನು ಖಚಿತಪಡಿಸಿದ್ದಾರೆ. ಆದರೆ, ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ಅವರ ವರದಿ ನೆಗೆಟಿವ್ ಬಂದಿದೆ ಎಂದಿದ್ದಾರೆ.

ಇನ್ನೊಂದೆಡೆ, ನಟ ಅನುಪಮ್‍ ಖೇರ್ ಅವರ ತಾಯಿ ಮತ್ತು ಸಹೋದರ, ನಟಿ ರೇಖಾ ನಿವಾಸದ ಭದ್ರತಾ ಸಿಬ್ಬಂದಿಗೂ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ.

ಇದಕ್ಕೂ ಮೊದಲು ಮುಂಬೈನ ಮೇಯರ್ ಕಿಶೋರಿ ಪೆಂಡ್ನೆಕರ್ ಅವರು ಜಯಾ ಬಚ್ಚನ್, ಐಶ್ವರ್ಯಾ ರೈ ಅವರ ವರದಿ ನೆಗೆಟಿವ್‍ ಬಂದಿದೆ ಎಂದು ತಿಳಿಸಿದ್ದರು. ಅಮಿತಾಭ್‍ ಬಚ್ಚನ್‍ ಮತ್ತು ಅಭಿಷೇಕ್ ಈಗಾಗಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸ್ಥಳೀಯ ಪಾಲಿಕೆಯ ಅಧಿಕಾರಿಗಳು, ಬಚ್ಚನ್ ಅವರ ನಿವಾಸ ಜಲ್ಸಾವನ್ನು ಕಂಟೈನ್‍ಮೆಂಟ್ ಪ್ರದೇಶ ಎಂದು ಘೋಷಿಸಿದ್ದಾರೆ.

ಖೇರ್ ತಾಯಿ, ಸೋದರನಿಗೆ ಕೋವಿಡ್: ಬಾಲಿವುಡ್‌ ನಟ ಅನುಪಮ್‌ ಖೇರ್‌ ಅವರ ತಾಯಿ ದುಲ್ಹಾರಿ ಖೇರ್‌ ಮತ್ತು ಸಹೋದರ ರಾಜು ಖೇರ್ ಮತ್ತು ಅವರ ಕುಟುಂಬದ ಸದಸ್ಯರಿಗೆ ಸೋಂಕಿರುವುದು ದೃಢಪಟ್ಟಿದೆ. ಅನುಪಮ್ ಖೇರ್ ಅವರೇ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಈ ಕುರಿತ ಟ್ವೀಟ್‍ನಲ್ಲಿ ‘ತಾಯಿಗೆ ಸೋಂಕಿರುವುದು ದೃಢಪಟ್ಟಿದೆ, ಕೊಕಿಲಾಬೆನ್ ಆಸ್ಪತ್ರೆಗೆ ದಾಖಲಿಸಿದ್ದೇವೆ. ಅಣ್ಣ ಮತ್ತು ಅತ್ತಿಗೆಗೂ ಸೋಂಕಿರುವುದಾಗಿ ತಿಳಿದುಬಂದಿದೆ. ನನ್ನ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ’ ಎಂದು ತಿಳಿಸಿದ್ದಾರೆ.

ಭದ್ರತಾ ಸಿಬ್ಬಂದಿಗೆ ಸೋಂಕು: ಬಾಲಿವುಡ್‍ನ ಹಿರಿಯ ನಟಿ ರೇಖಾ ಅವರ ನಿವಾಸದ ಭದ್ರತಾ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಸಿಬ್ಬಂದಿಯನ್ನು ಬಾಂದ್ರಾ ಕೋವಿಡ್‌ ಆಸ್ಪತ್ರೆಗೆ ಸೇರಿಸಿದ್ದಾರೆ.

ರೇಖಾ ನಿವಾಸದ ಎಲ್ಲ ಸಿಬ್ಬಂದಿ ಜತೆಗೆ ನಿವಾಸದ ಪಕ್ಕದಲ್ಲಿರುವ ಜಾವೇದ್‌ ಅಖ್ತರ್ ನಿವಾಸದ ಎಲ್ಲ ಸಿಬ್ಬಂದಿಯನ್ನೂ ಕೋವಿಡ್‌–19 ಪರೀಕ್ಷೆಗೆ ಕರೆದೊಯ್ದಿದ್ದಾರೆ.  

ತಾವು ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್‍ ತಪಾಸಣೆಗೆ ಒಳಗಾಗಲಿರುವ ವಿಷಯವನ್ನು ರೇಖಾ ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿ ವಾಸಿಸುತ್ತಿದ್ದ ಜೋಪಡಿ ಸೀಲ್‌ಡೌನ್‌ ಆಗಿದೆ. ಆದರೆ, ರೇಖಾ ನಿವಾಸವನ್ನು ಸೀಲ್‌ಡೌನ್‌ ಮಾಡಿಲ್ಲ.

ಈ ಹಿಂದೆ ಕರಣ್‍ ಜೋಹರ್, ಬೋನಿ ಕಪೂರ್ ಮತ್ತು ನಟ ಅಮೀರ್ ಖಾನ್‍ ಅವರ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು