ಭಾನುವಾರ, ಆಗಸ್ಟ್ 25, 2019
20 °C

ಅಜಯ್‌ ಒಲ್ಲೆ ಎಂದ ಪಾತ್ರ ಹೃತಿಕ್‌ ಪಾಲಿಗೆ

Published:
Updated:
Prajavani

ನಟ ಅಮಿತಾಭ್‌ ಬಚ್ಚನ್‌  ದ್ವಿಪಾತ್ರದಲ್ಲಿ ಅಭಿನಯಿಸಿರುವ ‘ಸತ್ತೇ ಪೆ ಸತ್ತಾ’ ರಿಮೇಕ್‌ ಚಿತ್ರ ಈಗ ಹೆಚ್ಚು ಸುದ್ದಿಯಲ್ಲಿದೆ. ಈ ಚಿತ್ರದ ನಾಯಕನಾಗಿ ಹೃತಿಕ್‌ ರೋಶನ್‌ ಆಯ್ಕೆಯಾಗಿದ್ದಾರೆ. ಆದರೆ ಈ ಚಿತ್ರಕ್ಕೆ ಅವರು ಮೊದಲ ಆಯ್ಕೆಯಾಗಿರಲಿಲ್ಲ. ಅಜಯ್‌ ದೇವಗನ್‌ ಅವರು ಈ ಚಿತ್ರವನ್ನು ನಿರಾಕರಿಸಿದ್ದರಿಂದ ಅವಕಾಶ ಹೃತಿಕ್‌ ಪಾಲಾಗಿದೆ ಎಂದು ಬಾಲಿವುಡ್‌ನಲ್ಲಿ ಸುದ್ದಿ ಕೇಳಿಬರುತ್ತಿದೆ. 

ಅಜಯ್‌ ದೇವಗನ್‌, ಬಚ್ಚನ್‌ ಕುಟುಂಬದ ಜೊತೆ ತುಂಬ ಆತ್ಮೀಯರಾಗಿರುವುದರಿಂದ ಈ ಚಿತ್ರದ ರಿಮೇಕ್‌ನಲ್ಲಿ ನಟಿಸಲಾರೆ ಎಂದಿದ್ದಾರೆ. ‘ರಿಮೇಕ್‌ ವರ್ಷನ್‌ನ  ದ್ವಿಪಾತ್ರದಲ್ಲಿ ನಟಿಸಲು ಅಜಯ್‌ ಅವರನ್ನು ಕೇಳಿಕೊಳ್ಳಲಾಗಿತ್ತು. ಈ ಪಾತ್ರಕ್ಕೆ ಅಜಯ್‌ ಪರ್‌ಫೆಕ್ಟ್‌ ಆಗಿದ್ದರು. ಯಾವುದೇ ನಟನಿಗೆ ಈ ಪಾತ್ರಗಳು ಸವಾಲಿನದ್ದು. ಆದರೆ ಅಜಯ್‌ ಈ ಪಾತ್ರವನ್ನು ವೈಯಕ್ತಿಕ ಕಾರಣಗಳಿಂದ ನಿರಾಕರಿಸಿದರು’ ಎಂದು ಮೂಲಗಳು ತಿಳಿಸಿವೆ. 

ಅಮಿತಾಭ್‌ ಬಚ್ಚನ್‌ ಅಂದ್ರೆ ಅಜಯ್‌ ದೇವಗನ್‌ ಅವರಿಗೆ ತುಂಬಾ ಗೌರವ, ಪ್ರೀತಿ. ಅಭಿಷೇಕ್‌ ಬಚ್ಚನ್‌ ಅವರನ್ನು ತನ್ನ ತಮ್ಮನಂತೆ ಅಜಯ್‌ ಕಾಣುತ್ತಾರೆ. ಈ ರಿಮೇಕ್‌ ಚಿತ್ರದಲ್ಲಿ ನಟಿಸಿದರೆ ತಮ್ಮ ಸಂಬಂಧಕ್ಕೆ ಧಕ್ಕೆ ಅಗಬಹುದು ಎಂಬುದು ಅಜಯ್‌ ಯೋಚನೆಯಂತೆ.

ಇನ್ನೊಂದು ಮೂಲದ ಪ್ರಕಾರ ‘ಸತ್ತೇ ಪೆ ಸತ್ತಾ’ ಚಿತ್ರವನ್ನು ಸೊಹೈಲ್‌ ಖಾನ್‌ ಅವರು ರಿಮೇಕ್‌ ಮಾಡಲು ಇಷ್ಟಪಟ್ಟಿದ್ದರು. ಅದರಲ್ಲಿ ಸಹೋದರ ಸಲ್ಮಾನ್‌ ಮುಖ್ಯಪಾತ್ರದಲ್ಲಿ ನಟಿಸಬೇಕು ಎಂಬುದು ಅವರ ಆಸೆಯಾಗಿತ್ತಂತೆ. ಆದರೆ ಅವರು ಮೂರು– ನಾಲ್ಕು ಚಿತ್ರಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಇದು ಸಾಧ್ಯವಾಗಿರಲಿಲ್ಲ.

Post Comments (+)