ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏ.8ರಂದು ಜನಾಶೀರ್ವಾದ ಯಾತ್ರೆಯ ಸಮಾರೋಪ

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಾದ್ಯಂತ ಕಾಂಗ್ರೆಸ್ ನಡೆಸಿದ ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭ ಏಪ್ರಿಲ್ 8ರಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿದ್ದು, ಐದು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ತಿಳಿಸಿದರು.

‘ಉತ್ತರ ಕರ್ನಾಟಕ, ಕರಾವಳಿ, ಮೈಸೂರು ಭಾಗದಲ್ಲಿ ಯಾತ್ರೆ ಮುಗಿದಿದೆ. ಗ್ರ್ಯಾಂಡ್ ಫಿನಾಲೆ ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ. ಸಚಿವರು, ಶಾಸಕರು, ಬಿಬಿಎಂಪಿ ಸದಸ್ಯರಿಗೆ ಸಮಾವೇಶ ಸಿದ್ಧತೆ ಜವಾಬ್ದಾರಿ ವಹಿಸಲಾಗಿದೆ’ ಎಂದು ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಅವರು ಹೇಳಿದರು.

ಅದಕ್ಕೂ ಮುನ್ನ ಏ.3ರಂದು ದೆಹಲಿಯಿಂದ ಹುಬ್ಬಳ್ಳಿಗೆ ಬರಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಶಿವಮೊಗ್ಗದಲ್ಲಿ ರೋಡ್ ಶೋ ನಡೆಸು
ವರು. ನಂತರ ಹೊನ್ನಾಳಿ, ಹರಿಹರದಲ್ಲೂ ರೋಡ್ ಶೋ ನಡೆಸಿ ದಾವಣಗೆರೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು ಎಂದು ವಿವರಿಸಿದರು.

ಏ.4ರಂದು ಆ ಭಾಗದ ಬ್ಲಾಕ್ ಅಧ್ಯಕ್ಷರು, ಜಿಲ್ಲಾಧ್ಯಕ್ಷರ ಸಭೆ ನಡೆಸುವರು. ಬಳಿಕ ಹೊಳಲ್ಕೆರೆಗೆ ತೆರಳಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು. ನಂತರ ತುಮಕೂರಿನಲ್ಲಿ ರೋಡ್ ಶೋ ನಡೆಸಲಿದ್ದು, ಸಿದ್ಧಗಂಗಾ ಶ್ರೀಗಳನ್ನು ಭೇಟಿ ಮಾಡುವ ಚಿಂತನೆ ಇದೆ. ಈ ಬಗ್ಗೆ ಮಠದೊಂದಿಗೆ ಮಾತನಾಡಿ, ಸಮಯ ನಿಗದಿ ಮಾಡಲಾಗುವುದು. ಅದೇ ದಿನ ಕುಣಿಗಲ್‌‌‌ನಲ್ಲಿ ರೋಡ್ ಶೋ ನಡೆಸಿ, ಮಾಗಡಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿರುವ ರಾಹುಲ್‌ ದೆಹಲಿಗೆ ತೆರಳಲಿದ್ದಾರೆ. ಏ.7ರಂದು ಮತ್ತೆ ಬರುವ ಅವರು, ಮುಳಬಾಗಿಲು, ಕೆಜಿಎಫ್, ಬಂಗಾರಪೇಟೆಯಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಬಿಜೆಪಿಗೆ ಆತಂಕ: ಕಾಂಗ್ರೆಸ್ ನಾಯಕರು ಮಠ, ಮಸೀದಿಗಳಿಗೆ ಭೇಟಿ ನೀಡುತ್ತಿರುವುದನ್ನು ನೋಡಿ ಬಿಜೆಪಿಗೆ ಆತಂಕ ಶುರುವಾಗಿದೆ. ಹೀಗಾಗಿಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಠಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಪರಮೇಶ್ವರ ಹೇಳಿದರು.

‘ಮಠ, ಮಂದಿರಗಳ ಜೊತೆಗೆ ನಾವು ಜನರ ಮುಂದೆಯೂ ಹೋಗುತ್ತಿದ್ದೇವೆ. ಆದರೆ, ಬಿಜೆಪಿ ನಾಯಕರು ಜನರ ಮುಂದೆ ಹೋಗುವ ಬದಲು ಬರೀ ಮಠಗಳನ್ನು ಸುತ್ತುತ್ತಿದ್ದಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT