ಶುಕ್ರವಾರ, ಆಗಸ್ಟ್ 23, 2019
21 °C

ಅಜಿತ್‌ ಡೊಭಾಲ್ ಪಾತ್ರದಲ್ಲಿ ಅಕ್ಷಯ್‌

Published:
Updated:
Prajavani

ಆ್ಯಕ್ಷನ್‌, ಥ್ರಿಲ್ಲರ್‌, ರೊಮ್ಯಾಂಟಿಕ್‌ ಹೀಗೆ ಎಲ್ಲಾ ರೀತಿಯ ಪಾತ್ರಗಳಿಗೂ ಒಗ್ಗುವ ಅಕ್ಷಯ್‌ ಕುಮಾರ್‌, ಈಗ ಮತ್ತೊಂದು ಹೊಸ ಪ್ರಯೋಗಕ್ಕೆ ಸಜ್ಜಾಗಿದ್ದಾರೆ.

ನೀರಜ್‌ ಪಾಂಡೆ ಹಾಗೂ ಅಕ್ಷಯ್‌ ಕುಮಾರ್‌ ಜೋಡಿ ಸಾಕಷ್ಟು ಹಿಟ್‌ ಸಿನಿಮಾಗಳನ್ನು ನೀಡಿದೆ. ನೀರಜ್‌ ನಿರ್ದೇಶಿಸಿ, ಅಕ್ಷಯ್‌ ನಟಿಸಿದ್ದ ‘ಸ್ಪೆಷಲ್‌ 26’, ‘ಬೇಬಿ’, ‘ರುಸ್ತಂ’, ‘ಟಾಯ್ಲೆಟ್‌–ಏಕ್‌ ಪ್ರೇಮ್‌ ಕಥಾ’ ಸಿನಿಮಾಗಳು ಬಾಲಿವುಡ್‌ನಲ್ಲಿ ಗುರುತು ಮೂಡಿಸಿವೆ.

ಈಗ ಈ ಜೋಡಿ, ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್‌ ಡೊಭಾಲ್‌ ಅವರ ಕುರಿತು ಸಿನಿಮಾ ಮಾಡಲು ಹೊರಟಿದೆ.

ಅಜಿತ್‌ ಡೊಭಾಲ್‌ ಅವರ ಜೀವನ ಕತೆಯನ್ನೇ ಆಧರಿಸಿ ಸಿನಿಮಾ ಚಿತ್ರಕಥೆ ಕೂಡ ಸಿದ್ಧಗೊಂಡಿದೆ. ಅಜಯ್‌ ದೇವಗನ್‌ ಅವರೊಂದಿಗೆ ‘ಚಾಣಕ್ಯ’ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ನೀರಜ್‌, ಬಳಿಕ ಈ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರಂತೆ.

ಹೊಸ ಸಿನಿಮಾಕ್ಕೆ ಅಕ್ಷಯ್‌ ಕುಮಾರ್‌ ಕೂಡ ಒಪ್ಪಿಕೊಂಡಿದ್ದು, ಶೂಟಿಂಗ್‌ ತಯಾರಿಗಾಗಿ ಸ್ವಲ್ಪ ಸಮಯ ಬೇಕಾಗಬಹುದು ಎಂದು ಚಿತ್ರತಂಡ ಹೇಳಿದೆ.

ಅಕ್ಷಯ್‌ ಕುಮಾರ್ ಹಾಗೂ ನೀರಜ್‌ ಪಾಂಡೆ ನಡುವೆ ಜಗಳ ಆಗಿದೆ ಎಂದು ಬಾಲಿವುಡ್‌ನಲ್ಲಿ ಗುಸುಗುಸು ಶುರುವಾಗಿತ್ತು. ಇದಕ್ಕೆ ಕಾರಣವೂ ಇದೆ.

ಹೋದ ವರ್ಷ ನೀರಜ್‌ ಪಾಂಡೆ ನಿರ್ದೇಶನದ ‘ಅಯ್ಯಾರಿ’ ಹಾಗೂ ಅಕ್ಷಯ್‌ ಅಭಿನಯದ ಸಿನಿಮಾ ‘ಪ್ಯಾಡ್‌ ಮ್ಯಾನ್‌’ ಎರಡೂ ಸಿನಿಮಾಗಳ ಬಿಡುಗಡೆ ದಿನಾಂಕ ಒಂದೇ ಆಗಿತ್ತು. ಈ ವಿಷಯದಲ್ಲಿ ಇಬ್ಬರು ಮುನಿಸಿಕೊಂಡಿದ್ದರಂತೆ. ಆದರೆ ಈಗ ಹೊಸ ಸಿನಿಮಾ ಒಪ್ಪಿಕೊಂಡಿರುವುದರಿಂದ ಇಬ್ಬರ ನಡುವೆ ಎಲ್ಲಾ ಸರಿಯಾಗಿದೆ. ಈ ರೀತಿಯ ಸಕಾರಾತ್ಮಕ ನಡೆ ಒಳ್ಳೆಯದು ಎಂಬ ಮಾತು ಕೇಳಿಬರುತ್ತಿದೆ.

Post Comments (+)