ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ‘ಅಕ್ಷಿ’ ಅತ್ಯುತ್ತಮ ಚಲನಚಿತ್ರ

Last Updated 25 ಅಕ್ಟೋಬರ್ 2021, 20:58 IST
ಅಕ್ಷರ ಗಾತ್ರ

ನವದೆಹಲಿ: 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಕನ್ನಡ ಭಾಷೆ ವಿಭಾಗದಲ್ಲಿ ಮನೋಜ್‌ ಕುಮಾರ್‌ ನಿರ್ದೇಶಕದ ‘ಅಕ್ಷಿ’ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದಿದೆ. ನಟ ರಕ್ಷಿತ್‌ ಶೆಟ್ಟಿ ನಟನೆಯ ‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿನ ಸಾಹಸ ನಿರ್ದೇಶನಕ್ಕಾಗಿ ವಿಕ್ರಮ್‌ ಮೋರ್‌ ಅವರಿಗೆ ಅತ್ಯುತ್ತಮ ಸಾಹಸ ನಿರ್ದೇಶನ ಪ್ರಶಸ್ತಿ ದೊರಕಿದೆ. ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಪ್ರಶಸ್ತಿ ಪ್ರದಾನಿಸಿದರು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ತಮ್ಮ ಸಂತಸ ಹಂಚಿಕೊಂಡ ಮನೋಜ್‌ ಕುಮಾರ್‌, ‘ಒಳ್ಳೆಯ ವಿಷಯಾಧಾರಿತ ಚಿತ್ರಕ್ಕೆ ಸಿಕ್ಕಿದ ಈ ಮನ್ನಣೆಯಿಂದಾಗಿ, ಇಂಥ ಸಿನಿಮಾಗಳನ್ನು ತೆರೆಯ ಮೇಲೆ ತರಲು ಪ್ರಯತ್ನಿಸುತ್ತಿರುವವರಿಗೆ ಮತ್ತಷ್ಟು ಪ್ರೋತ್ಸಾಹ ದೊರಕಿದಂತಾಗಿದೆ. ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರೂ ಈ ಚಿತ್ರದಲ್ಲೊಂದು ಹಾಡು ಹಾಡಿದ್ದಾರೆ. ಅದು ಅವರು ಕನ್ನಡದಲ್ಲಿ ಹಾಡಿದ ಕೊನೆಯ ಗೀತೆ. ಹೀಗಾಗಿ ಈ ಪ್ರಶಸ್ತಿಯನ್ನು ಇಡೀ ಚಿತ್ರತಂಡವು ಅವರಿಗೆ ಅರ್ಪಿಸುತ್ತಿದೆ. ನನ್ನ ತಂದೆ, ತಾಯಿ ಸುರಿಸಿದ ಬೆವರಿನ ಮಳೆಗೆ ಈ ಪ್ರಶಸ್ತಿ ಸಿಕ್ಕಿದೆ ಎಂದು ಅಂದುಕೊಳ್ಳುತ್ತೇನೆ. ಈ ಸಿನಿಮಾಗೆ ವರನಟ ಡಾ.ರಾಜ್‌ಕುಮಾರ್‌ ಅವರ ನೇತ್ರದಾನ ಪ್ರೇರಣೆ. ಈ ಪ್ರೇರಣೆಯೇ ನಮ್ಮನ್ನು ಇಲ್ಲಿಯವರೆಗೂ ಕರೆತಂದಿದೆ’ ಎಂದರು.

‘ಸಿನಿಮಾವನ್ನು ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸುತ್ತೇವೆ. ಪ್ರಾಮಾಣಿಕವಾದ ಪ್ರಯತ್ನಕ್ಕೆ ಯಶಸ್ಸಿಗೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಪರಿಶ್ರಮಕ್ಕೆ ತಕ್ಕ ಫಲ ‘ಅಕ್ಷಿ’ ಎನ್ನುವುದಕ್ಕೆ ಇದು ಸಾಕ್ಷಿ. ಈ ಸಿನಿಮಾ ಕೇವಲ ಕನ್ನಡಕ್ಕಷ್ಟೇ ಸೀಮಿತ ಅಲ್ಲ. ಒಟಿಟಿಯಲ್ಲೂ ಬಿಡುಗಡೆ ಮಾಡುವ ಚಿಂತನೆ ಇದೆ’ ಎಂದರು ಅಕ್ಷಿ ಸಿನಿಮಾದ ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್‌.

ಸತತ ಎರಡನೇ ಬಾರಿಗೆ ರಾಷ್ಟ್ರಪ್ರಶಸ್ತಿ ಪಡೆದ ಸಂಭ್ರಮದಲ್ಲಿ ಮಾತನಾಡಿದ ವಿಕ್ರಮ್‌ ಮೋರ್‌, ‘ಕೆ.ಜಿ.ಎಫ್‌ ಹಾಗೂ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿನ ಸಾಹಸ ದೃಶ್ಯಗಳು ಎರಡೂ ಒಂದಕ್ಕಿಂತ ಒಂದು ವಿಭಿನ್ನ. ಈ ಎರಡೂ ಚಿತ್ರಕ್ಕಾಗಿ ನಾನೂ ಭಿನ್ನವಾಗಿ ಸಾಹಸ ನಿರ್ದೇಶನ ಮಾಡಬೇಕಾಗಿ ಬಂತು. ಕೆ.ಜಿ.ಎಫ್‌ ಮಾಸ್‌ಕಮರ್ಷಿಯಲ್‌ ಸಿನಿಮಾ ಹಾಗೂ ಇಲ್ಲಿನ ಸಾಹಸ ದೃಶ್ಯಗಳು ಹಿಂಸಾತ್ಮಕವಾಗಿತ್ತು. ಅವನೇಶ್ರೀಮನ್ನಾರಾಯಣ ಕಥೆಯೇ ಬೇರೆ. ಇಲ್ಲಿ ಬಹಳ ಸರಳವಾದ ಸಾಹಸದೃಶ್ಯಗಳಿದ್ದವು.ಇಂಥ ಚಿತ್ರಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ದೊರಕಿರುವುದೇ ನನ್ನ ಅದೃಷ್ಟ’ ಎಂದರು.

ಪಿ.ಆರ್‌.ರಾಮದಾಸ್‌ ನಾಯ್ಡು ಅವರು ಬರೆದ ‘ಕನ್ನಡ ಸಿನಿಮಾ: ಜಾಗತಿಕ ಸಿನಿಮಾ; ವಿಕಾಸ,ಪ್ರೇರಣೆ, ಪ್ರಭಾವ’ ಕೃತಿಗೆ ಸಿನಿಮಾ ಕುರಿತ ಉತ್ತಮ ಕೃತಿ(ವಿಶೇಷ ಮನ್ನಣೆ) ಪ್ರಶಸ್ತಿ ದೊರೆತಿದೆ. ಅಮೋಘವರ್ಷಜೆ.ಎಸ್‌. ನಿರ್ಮಿಸಿರುವ ‘ವೈಲ್ಡ್‌ ಕರ್ನಾಟಕ’ವು ಅತ್ಯುತ್ತಮ ಎಕ್ಸ್‌ಪ್ಲೊರೇಷನ್‌ ಚಿತ್ರ ಪ್ರಶಸ್ತಿ ದೊರಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT