ಗುರುವಾರ , ನವೆಂಬರ್ 21, 2019
20 °C

ಸುಧಾಮೂರ್ತಿ ಪಾತ್ರದಲ್ಲಿ ಆಲಿಯಾ ಭಟ್‌?

Published:
Updated:
Prajavani

ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರ ಜೀವನ ಕತೆ ಆಧಾರಿತ ಚಿತ್ರದಲ್ಲಿ ಆಲಿಯಾ ಭಟ್ ನಟಿಸಲಿದ್ದಾರೆ ಎಂಬ ಸುದ್ದಿ ಈಗ ಬಾಲಿವುಡ್‌ನಲ್ಲಿ ಸದ್ದುಮಾಡುತ್ತಿದೆ.

‘ಸುಧಾಮೂರ್ತಿ ಅವರ ಜೀವನದ ಕತೆಯನ್ನು ಸಿನಿಮಾ ಮಾಡುವುದು ಖಚಿತವಾಗಿದೆ. ಇದಕ್ಕಾಗಿ ಪಾತ್ರಗಳ ಆಯ್ಕೆಯಲ್ಲಿ ತೊಡಗಿದ್ದೇನೆ’ ಎಂದು ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.

‘ಗಲ್ಲಿ ಬಾಯ್‌’ ಹಾಗೂ ‘ಹೈವೇ’ ಸಿನಿಮಾಗಳಲ್ಲಿ ಆಲಿಯಾ ಬೋಲ್ಡ್‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ ತಾವು, ಮಹಿಳಾ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಹಂಬಲ ಇರುವುದಾಗಿ ಹೇಳಿಕೊಂಡಿದ್ದರು. ಈ ಎಲ್ಲಾ ಕಾರಣದಿಂದಾಗಿ ನಿರ್ದೇಶಕಿ, ಆಲಿಯಾ ಭಟ್‌ ಕಡೆಗೆ ಒಲವು ಹೊಂದಿದ್ದಾರಂತೆ.

‘ಸುಧಾಮೂರ್ತಿ ಅವರ ಜೀವನ ಕತೆ ಆಧರಿಸಿದ ಸಿನಿಮಾದ ಸ್ಕ್ರಿಪ್ಟ್‌ ಕೂಡ ಸಿದ್ಧಗೊಂಡಿದೆ. ಪಾತ್ರಗಳ ಆಯ್ಕೆಯಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದೇನೆ. ಆಲಿಯಾ ಭಟ್ ಅವರೇ ನನ್ನ ಮೊದಲ ಆಯ್ಕೆ. ಡೇಟ್ಸ್ ಹೊಂದಾಣಿಕೆ ಬಗ್ಗೆ ಮಾತುಕತೆ ನಡೆಯುತ್ತಿದೆ’ ಎಂದು ಅಶ್ವಿನಿ ಹೇಳಿದ್ದಾರೆ.

‘ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರ ಜೀವನದ ಕಥೆಯನ್ನು ತೆರೆಯ ಮೇಲೆ ತರುವುದು ದೊಡ್ಡ ಕೆಲಸ. ಇದಕ್ಕಾಗಿ ನಾನು ಪೂರ್ಣಪ್ರಮಾಣದ ಶ್ರಮ ಹಾಕುತ್ತಿದ್ದೇನೆ. ಅವರ ಬದುಕಿನ ಜರ್ನಿ ಸಾಕಷ್ಟು ಜನರನ್ನು ಪ್ರೇರೇಪಿಸುವ ನಂಬಿಕೆ ನನಗಿದೆ’ ಎಂದು ಅಶ್ವಿನಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಿತೇಶ್ ತಿವಾರಿ ಹಾಗೂ ಮಹಾವೀರ್ ಜೈನ್‌ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಸದ್ಯಕ್ಕೆ ಅಶ್ವಿನಿ ಈಗ ಕಂಗನಾ ರಣೋಟ್ ಜೊತೆಗೆ ‘ಪಂಗಾ’ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಆಲಿಯಾ ಭಟ್‌ ‘ಸಡಕ್‌ 2’, ‘ತಖ್ತ್‌’, ‘ಬ್ರಹ್ಮಾಸ್ತ್ರ’ ಹಾಗೂ ಸಂಜಯ್‌ಲೀಲಾ ಬನ್ಸಾಲಿಯ ‘ಗಂಗೂಬಾಯಿ’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಪ್ರತಿಕ್ರಿಯಿಸಿ (+)