ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆ್ಯಂಗ್ರಿ ಯಂಗ್‌ ಮ್ಯಾನ್‌’ಗೆ ಅತ್ಯುನ್ನತ ಗೌರವ

Last Updated 24 ಸೆಪ್ಟೆಂಬರ್ 2019, 20:05 IST
ಅಕ್ಷರ ಗಾತ್ರ

ನವದೆಹಲಿ: ‘ನಟನಿಗೆ ಇರಬೇಕಾದ ದೇಹಭಾಷೆ ನಿನ್ನಲ್ಲಿ ಇಲ್ಲ, ನಿನ್ನ ಧ್ವನಿ ಚೆನ್ನಾಗಿದೆ. ನಟನಾಗುವ ಕನಸು ಬಿಟ್ಟು ಆಕಾಶವಾಣಿಯಲ್ಲಿ ಕೆಲಸಕ್ಕೆ ಪ್ರಯತ್ನಿಸು, ಯಶಸ್ವಿಯಾಗುತ್ತಿಯಾ...’

ಚಿತ್ರನಟನಾಗಬೇಕೆಂದು ಹುಟ್ಟೂರನ್ನು ಬಿಟ್ಟು ಮುಂಬೈಗೆ ಬಂದಿದ್ದ ಅಮಿತಾಭ್‌ ಬಚ್ಚನ್‌ ಅವರಿಗೆ ಆ ಕಾಲದ ಪ್ರಸಿದ್ಧ ನಿರ್ದೇಶಕರೊಬ್ಬರು ಇಂಥ ಸಲಹೆ ನೀಡಿದ್ದರಂತೆ. ಅದನ್ನು ಅವರೇ ಹೇಳಿಕೊಂಡಿದ್ದರು. ಆ ಸಲಹೆಯನ್ನು ಕಸದಬುಟ್ಟಿಗೆಸೆದ ಅಮಿತಾಭ್‌, ಮುಂಬೈಯಲ್ಲೇ ಉಳಿ ದರು. ಹಲವು ರಾತ್ರಿಗಳನ್ನು ಮುಂಬೈಯ ಚೌಪಾಟಿಯಲ್ಲಿ, ರೈಲ್ವೆ ನಿಲ್ದಾಣದಲ್ಲಿ ಕಳೆದಿದ್ದ ಅವರಿಗೆ, 1969ರಲ್ಲಿ ಅವಕಾಶವೊಂದು ಒದಗಿಬಂದಿತ್ತು. ಆ ವರ್ಷ ‘ಸಾತ್‌ ಹಿಂದೂಸ್ತಾನಿ’ ಸಿನಿಮಾದ ಮೂಲಕ ಅವರು ಬೆಳ್ಳಿತೆರೆ ಪ್ರವೇಶಿಸಿದರು.

ಆದರೆ ಆ ಸಿನಿಮಾ ಅವರಿಗೆ ಖ್ಯಾತಿಯನ್ನು ತಂದುಕೊಡಲಿಲ್ಲ. ಬದಲಿಗೆ ಒಂದಷ್ಟು ಅವಕಾಶಗಳನ್ನು ಸೃಷ್ಟಿಸಿ ಕೊಟ್ಟಿತು.

1973ರಲ್ಲಿ ಪ್ರಕಾಶ್‌ ಮೆಹ್ರಾ ನಿರ್ದೇಶನದ ‘ಝಂಜೀರ್‌’ ಸಿನಿಮಾದಲ್ಲಿ ಅಮಿತಾಭ್ ಅವರಿಗೆ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ಲಭಿಸಿತು. ಬಚ್ಚನ್‌ ಅವರ ಸಿನಿಮಾ ಪ್ರಯಾಣದ ದಿಕ್ಕನೇ ಬದಲಿಸಿದ ಸಿನಿಮಾ ಅದಾಗಿತ್ತು. ಎರಡೂ ಕೈಗಳಿಂದ ಇದನ್ನು ಬಾಚಿಕೊಂಡ ಅಮಿತಾಭ್‌, ದಿನಬೆಳಗಾಗುವುದರೊಳಗೆ ಮನೆಮಾತಾದರು. ಚಿತ್ರೋದ್ಯಮದಲ್ಲಿ ಅವರಿಗೆ ಸ್ಟಾರ್‌ಗಿರಿಯನ್ನು ತಂದಿತ್ತ ಸಿನಿಮಾ ಅದು. ಈ ಚಿತ್ರದ ನಂತರ ಅವರಿಗೆ ‘ಆ್ಯಂಗ್ರಿ ಯಂಗ್‌ ಮ್ಯಾನ್‌’ ಎಂಬ ಬಿರುದೂ ಅಂಟಿಕೊಂಡಿತು. ಆ ನಂತರ ಬಚ್ಚನ್‌ ಅವರ ಜೀವನ ಹಾಗೂ ಹಿಂದಿ ಸಿನಿಮಾದ ಇತಿಹಾಸ ಒಂದನ್ನೊಂದು ಬಿಟ್ಟಿರಲಾಗದ ಮಟ್ಟಿಗೆ ಬೆಸೆದುಕೊಂಡವು.

1970ರ ದಶಕದ ಆರಂಭದಲ್ಲಿ ಹಿಂದಿ ಚಿತ್ರೋದ್ಯಮವನ್ನು ನಟ ರಾಜೇಶ್‌ ಖನ್ನಾ ಆಳುತ್ತಿದ್ದರು. ಝಂಜೀರ್‌ ಚಿತ್ರವು ಅಮಿತಾಭ್‌ ಅವರನ್ನೂ ಖನ್ನಾ ಅವರ ಪಕ್ಕಕ್ಕೆ ತಂದು ನಿಲ್ಲಿಸಿತು. ಮಜಬೂರ್‌, ದೀವಾರ್‌, ಶೋಲೆ, ತ್ರಿಶೂಲ್‌, ಡಾನ್‌, ಕಾಲಾ ಪತ್ಥರ್‌, ಶಕ್ತಿ ಮುಂತಾದ ಸಾಲುಸಾಲು ಹಿಟ್ ಸಿನಿಮಾಗಳು ಬಂದವು. ಇವೆಲ್ಲವೂ ಅಮಿತಾಭ್‌ ಅವರ ಆ್ಯಂಗ್ರಿ ಯಂಗ್‌ ಮ್ಯಾನ್‌ ವರ್ಚಸ್ಸನ್ನು ಗಟ್ಟಿಗೊಳಿಸುತ್ತಾ ಸಾಗಿದವು. ಒಂದರ್ಥದಲ್ಲಿ ಆ ಕಾಲದಲ್ಲಿ ಬಂದ ಸಿನಿಮಾಗಳಲ್ಲಿ ‘ಆಕ್ರೋಶ’ವೇ ಸ್ಥಾಯಿಯಾಗಿ ಕಾಣಿಸುವಂತಿತ್ತು.

ನಮ್ಮಲ್ಲಿ ಸಿನಿಮಾಕ್ಕೂ ರಾಜಕೀಯಕ್ಕೂ ಬಿಡಿಸಲಾಗದ ನಂಟು. ಅಮಿತಾಭ್‌ ಅವರೂ ಒಂದು ಹಂತದಲ್ಲಿ ಈ ರಾಜಕೀಯದ ಸೆಳೆತಕ್ಕೆ ಸಿಕ್ಕರು, ಸಂಸದರೂ ಆದರು. ಆದರೆ ರಾಜಕೀಯ ಅವರ ಕೈ ಹಿಡಿಯಲಿಲ್ಲ. ಕೆಲವೇ ವರ್ಷಗಳಲ್ಲಿ ಆ ಸಿಕ್ಕಿನಿಂದ ಬಿಡಿಸಿಕೊಂಡು ಮರಳಿ ಬೆಳ್ಳಿ ಪರದೆಯತ್ತ ಮುಖಮಾಡಿದರು. ಆದರೆ, ಅವರ ಎರಡನೇ ಇನಿಂಗ್ಸ್‌ ಅಷ್ಟು ಸುಲಲಿತವಾಗಿರಲಿಲ್ಲ. ತಾವಾಗಿಯೇ ಆರಂಭಿಸಿದ ಉದ್ಯಮವೂ ಯಶಸ್ವಿಯಾಗಲಿಲ್ಲ. ಬಾಲಿವುಡ್‌ನಲ್ಲಿ ಅಮಿತಾಭ್‌ ಯುಗ ಮುಗಿದೇ ಹೋಯಿತು ಎಂಬ ಹಂತವೂ ಬಂತು. ಆಗ ಅವರ ಕೈಹಿಡಿದದ್ದು ಟಿ.ವಿ. ಕಾರ್ಯಕ್ರಮ ‘ಕೌನ್‌ ಬನೇಗ ಕರೋಡ್‌ಪತಿ’. ಜನಪ್ರಿಯತೆಯನ್ನು ಪುನಃ ತಂದುಕೊಡುವುದರ ಜೊತೆಗೆ ಅವರ ಆರ್ಥಿಕ ಸಂಕಷ್ಟವನ್ನೂ ಈ ಕಾರ್ಯಕ್ರಮ ದೂರ ಮಾಡಿತು. ಟಿ.ವಿಯ ಮೂಲಕ ಮನೆಮನೆಯನ್ನು ಪ್ರವೇಶಿಸಿದ ಅಮಿತಾಭ್‌ ಇದರ ಜೊತೆಯಲ್ಲೇ ಜೊತೆಯಲ್ಲೇ ಬೆಳ್ಳಿ ಪರದೆಯಲ್ಲೂ ಕೆಲಸ ಆರಂಭಿಸಿದರು.

ಈ ಬಾರಿ ಅವರು ‘ಆ್ಯಂಗ್ರಿ ಯಂಗ್‌ ಮ್ಯಾನ್‌’ ಇಮೇಜ್‌ ಅನ್ನು ಬಿಚ್ಚಿಟ್ಟು ಹೊಸ ರೂಪದಲ್ಲಿ ಕಾಣಿಸಿಕೊಂಡರು. ಮೊಹಬ್ಬತೇಂ, ಕಭಿ ಖುಷಿ ಕಭಿ ಗಮ್‌, ಬ್ಲ್ಯಾಕ್‌, ಸರ್ಕಾರ್‌ನಂಥ ಸಿನಿಮಾಗಳು ಅವರ ನಟನೆಯ ಪ್ರೌಢಿಮೆಯನ್ನು ಪ್ರದರ್ಶಿದವು. ಈಗ 67ರ ವಯಸ್ಸಿನಲ್ಲೂ ಅವರು ಬಿಡುವಿಲ್ಲದ ನಟ. ಐದು ದಶಕಗಳ ಕಾಲ ಸಿನಿಪ್ರಿಯರನ್ನು ರಂಜಿಸಿದ ಈ ನಟನ ಮುಡಿಗೆ ಈಗ ಫಾಲ್ಕೆ ಪ್ರಶಸ್ತಿಯ ಗರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT