ಗುರುವಾರ , ಸೆಪ್ಟೆಂಬರ್ 23, 2021
27 °C

ಚಂದನವನದಲಿ ಅಮ್ಮನ ದನಿ

ಬಿ.ಎಂ. ಹನೀಫ್‌ Updated:

ಅಕ್ಷರ ಗಾತ್ರ : | |

Prajavani

ಲೆ ಬನಾನ್‍ನ ಅನುಭಾವಿ ಕವಿ ಖಲೀಲ್ ಗಿಬ್ರಾನ್ ಅವರ ಪ್ರಸಿದ್ಧ ಮಾತೊಂದಿದೆ. ‘ನನ್ನಮ್ಮ ನೂರಾರು ಕವಿತೆಗಳನ್ನು ಬಾಳಿದಳು. ಆದರೆ, ಒಂದನ್ನೂ ಬರೆಯಲಿಲ್ಲ...’ ಅಮ್ಮನ ಕುರಿತು ಜಗತ್ತಿನ ಹಲವು ಕವಿಗಳ ಹೇಳಿಕೆಗಿಂತ ತುಂಬ ಭಿನ್ನವಾದ ಈ ನುಡಿಗಟ್ಟು ಜಗತ್ತಿನ ಬಹುತೇಕ ಅಮ್ಮಂದಿರಿಗೂ ಅನ್ವಯವಾಗುವಂತಿದೆ. ಗಂಧದ ಕೊರಡು ತೇಯ್ದಂತೆ ಅಮ್ಮಂದಿರ ಬದುಕು. ಬಹಳಷ್ಟು ಮಕ್ಕಳು ಅಮ್ಮನ ಸೇವೆಯನ್ನು ಪ್ರಜ್ಞಾಪೂರ್ವಕವಾಗಿ ಗುರುತಿಸುವುದೇ ಇಲ್ಲ. ‘ಆಕೆಯಿರುವುದೇ ಮಕ್ಕಳ ಸೇವೆ ಮಾಡಲು’ ಎಂಬುದು ಬಹುತೇಕ ಮಕ್ಕಳ ಉದಾಸೀನ ಧೋರಣೆ. ಅಮ್ಮ ಎಂಬ ಎರಡಕ್ಷರದ ಪದಕ್ಕೆ ಜಗತ್ತಿನ ಯಾವ ಭಾಷೆಯಲ್ಲೂ ಇನ್ನೊಂದು ಸಂವಾದಿ ಪದವಿಲ್ಲ. ಅಮ್ಮನಿಗೆ ಅಮ್ಮನೇ ಸಾಟಿ ಎನ್ನುವುದು ಅವರಿಗೆ ಗೊತ್ತಾಗುವುದಿಲ್ಲ. ಅಮ್ಮನನ್ನು ಕಳೆದುಕೊಂಡ ಮೇಲೆ ಅದು ಗೊತ್ತಾಗುವವರೇ ಹೆಚ್ಚು.

ಕನ್ನಡ ಚಿತ್ರರಂಗದ ಕಥೆಗಾರರು ಮತ್ತು ನಿರ್ದೇಶಕರು ಪದೇ ಪದೇ ಬಳಸುವ ಶಬ್ದ– ಮದರ್ ಸೆಂಟಿಮೆಂಟ್. ಕನ್ನಡದ ಸಾವಿರಾರು ಚಿತ್ರಗಳಲ್ಲಿ ತ್ಯಾಗಮಯಿ ಅಮ್ಮಂದಿರ ಪಾತ್ರಗಳು ಬಂದುಹೋಗಿವೆ. ಒಂದು ಕಾಲದ ಹೀರೊಯಿನ್‍ಗಳೆಲ್ಲ ಅಮ್ಮಂದಿರ ಪಾತ್ರಕ್ಕೆ ಪ್ರಮೋಟ್ ಆದವರೇ. ಇವರಲ್ಲಿ ಕೆಲವು ಅಮ್ಮಂದಿರಂತೂ ನೂರು ವರ್ಷಗಳ ಬಳಿಕವೂ ನೆನಪಿಟ್ಟುಕೊಳ್ಳುವಂತೆ ಚಿತ್ರರಸಿಕರ ಮನಃಪಟಲದಲ್ಲಿ ಉಳಿದುಕೊಂಡಿದ್ದಾರೆ.

ಈ ಅಮ್ಮಂದಿರ ಪಾತ್ರಗಳನ್ನು ಎಷ್ಟು ಕಾಲವಾದರೂ ಮರೆಯದಂತೆ ಮಾಡಿರುವುದು ಆಯಾ ಚಿತ್ರಗಳಲ್ಲಿ ಬರುವ ಅಮ್ಮನ ಕುರಿತ ಹಾಡುಗಳು. ಕನ್ನಡ ಸಿನಿಮಾಗಳಲ್ಲಿ ಅಮ್ಮನ ತ್ಯಾಗ, ಬಲಿದಾನ, ತಾಕಲಾಟ, ಸೊಸೆಯ ಜೊತೆಗಿನ ತಿಕ್ಕಾಟ, ಮಕ್ಕಳ ಜೊತೆಗಿನ ಅನುಬಂಧ, ಸ್ವಂತದ ಹರುಷ, ನೋವುಗಳನ್ನೆಲ್ಲ ಮೊಗೆದು ಕೊಟ್ಟ ಹಾಡುಗಳು ನೂರಾರಿವೆ. ಅವುಗಳಲ್ಲಿ ಸದಾಕಾಲ ಪ್ರೇಕ್ಷಕರನ್ನು ಕಾಡಿದ, ಕಾಡುತ್ತಿರುವ ಕೆಲವು ಹಾಡುಗಳ ನೆನಪುಗಳನ್ನಷ್ಟೇ ಇಲ್ಲಿ ಸ್ಮರಿಸಲಾಗಿದೆ.

ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆಯ ನಿಟ್ಟಿನಲ್ಲಿ ಹೊಸ ದಾಖಲೆ ಬರೆದ ಹಾಡು ‘ತುತ್ತಾ...? ಮುತ್ತಾ...?’ ಚಿತ್ರದ ಹಾಡು.

‘ಮುತ್ತು ಕೊಡೋಳು ಬಂದಾಗ, ತುತ್ತು ಕೊಟ್ಟೋಳ ಮರೀಬೇಡ
ಆಟೊ ಲಾರಿ ಹಿಂದೆ ಬರೆದೋನೆ, ತತ್ವಜ್ಞಾನಿ ಅಂತ ತಿಳೀಬೇಡ
ತಾಯಿ ಇಲ್ಲದೆ ಮಗಳಿಲ್ಲ, ಮಡದಿ ಇಲ್ಲದೆ ಬಾಳಿಲ್ಲ....’

ಎನ್ನುವ ಈ ಹಾಡು ಗೀತ ರಚನೆಕಾರ, ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಈಗಲೂ ಕಾಡುತ್ತಿರುವ ಹಾಡು. ‘ಅಮ್ಮ ಮತ್ತು ಹೆಂಡತಿ ನಡುವಣ ಪ್ರೀತಿ ಹಂಚಿಕೊಳ್ಳುವ ತಾಕಲಾಟದ ಕಥೆ ಅದು. ಆಟೊರಿಕ್ಷಾ ಒಂದರ ಹಿಂದೆ ನಾನು ನೋಡಿದ ಮೊದಲ ಸಾಲೇ ಈ ಹಾಡು ಬರೆಯಲು ಪ್ರೇರಣೆ. ನಮ್ಮಪ್ಪ ಯಾವಾಗಲೂ ಹೇಳೋರು- ಅಮ್ಮ ಮತ್ತು ಹೆಂಡತಿ ಇಬ್ಬರೂ ಗಂಡಸಿಗೆ ಹೇಳೋ ಒಂದು ಡೈಲಾಗು... ನಿಂದೆಲ್ಲ ಕಂಡಿದ್ದೀನಿ ಕಣಯ್ಯಾ- ಅಂತ! ಅಪ್ಪ ಹೇಳಿದ ಈ ಮಾತು ನನ್ನ ತಲೆಯಲ್ಲಿತ್ತು, ಹಾಡಿನ ಮುಂದಿನ ಸಾಲುಗಳಲ್ಲಿ ಅದೇ ಬಂದಿದೆ.

‘ಇಬ್ಬರೂ ಕಂಡಿಹರು, ಈ ಗಂಡಿನ ಬೆತ್ತಲೆಯ
ಇಬ್ಬರೂ ಬೆಳಗುವರು, ಈ ಹೃದಯದ ಕತ್ತಲೆಯ’

ಎನ್ನುವ ಹಾಡಿನ ಸಾಲಂತೂ ನನಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಎಲ್ಲೇ ಹೋದರೂ ಜನ ಈ ಹಾಡನ್ನು ನೆನಪಿಸಿಕೊಳ್ಳುವವರು’ ಎನ್ನುತ್ತಾ ಹಂಸಲೇಖ ಹಳೆಯ ನೆನಪಿಗೆ ಜಾರಿದರು.

ಈ ಚಿತ್ರದ ಹೀರೊ ರಮೇಶ್ ಅರವಿಂದ್ ಅವರಂತೂ ಈ ಹಾಡಿನ ಬಗ್ಗೆ ಮಾತನಾಡುವಾಗ ಭಾವಪರವಶರಾಗುತ್ತಾರೆ. ‘ತುತ್ತಾ...? ಮುತ್ತಾ...? ಹಾಡಿನ ಬಗ್ಗೆ ಈಗಲೂ ಎಷ್ಟೊಂದು ಜನ ಮಾತಾಡ್ತಾರೆ! ನಿನ್ನೆ ಕೂಡಾ ತುಮಕೂರಿನಲ್ಲಿ ಒಬ್ಬರು ತುಂಬ ಭಾವುಕರಾಗಿ ಆ ಹಾಡಿನ ಅಭಿನಯದ ಬಗ್ಗೆ ಹೇಳ್ತಾ, ಇದು ನಮ್ಮ ಜೀವನದ ರಾಷ್ಟ್ರಗೀತೆ ಸಾರ್ ಅಂದರು. ಅತ್ತೆ- ಸೊಸೆ ವೈಮನಸ್ಯ, ವಾಗ್ವಾದ ಬಹುತೇಕ ಮನೆಗಳ ಕಥೆ. ಆದರೆ, ಹೀಗೆ ಇಬ್ಬರ ಮಧ್ಯೆ ಸಿಕ್ಕಿಕೊಳ್ಳುವ ಗಂಡಸರಿಗೆ ಬಾಯಿ ಬಿಟ್ಟು ಏನನ್ನೂ ಹೇಳಲಾಗುವುದಿಲ್ಲ. ಇಬ್ಬರಲ್ಲಿ ಯಾರನ್ನು ಬೈದರೂ ಕಷ್ಟ. ನನಗೆ ಬಹಳ ಮಂದಿ ಹೇಳಿದ್ದು- ಹೆಂಡತಿ ಮತ್ತು ಅಮ್ಮ ಇಬ್ಬರನ್ನೂ ಕರೆದುಕೊಂಡು ಹೋಗಿ ಈ ಸಿನಿಮಾ ತೋರಿಸಿದ್ದೇನೆ ಸಾರ್. ನಾವು ಡೈರೆಕ್ಟಾಗಿ ಹೇಳಲು ಆಗದ್ದನ್ನು ನೀವು ಸಿನಿಮಾದ ಮೂಲಕ ಅದ್ಭುತವಾಗಿ ತೋರಿಸಿದ್ದೀರಿ- ಅಂತ.

‘ಈ ಹಾಡಿನ ಒಂದು ವಿಶೇಷವೆಂದರೆ ಇಲ್ಲಿ ಬರುವ ಅತ್ತೆ ಮತ್ತು ಸೊಸೆ ಇಬ್ಬರೂ ಅಮ್ಮಂದಿರೇ. ಬಹಳ ಫಿಲಾಸಫಿಕಲ್ ಮತ್ತು ಎಲ್ಲರನ್ನೂ ತಲುಪಿರುವ ಹಾಡಿದು’ ಎನ್ನುವುದು ರಮೇಶ್ ಮನತುಂಬಿದ ಮಾತು.

ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆಯಿಂದ ಮನೆಮಾತಾದ ಇನ್ನೊಂದು ಅಮ್ಮನ ಹಾಡು ‘ಜೋಗಿ’ ಚಿತ್ರದ ‘ಬೇಡುವೆನು ವರವನ್ನು, ಕೊಡೆತಾಯಿ ಜನ್ಮವನು, ಕಡೆತನಕ ಮರೆಯಲ್ಲ ಜೋಗಿ...’ ನಿರ್ದೇಶಕ ಪ್ರೇಮ್ ಸ್ವತಃ ಬರೆದಿರುವ, ಗುರುಕಿರಣ್ ಸಂಗೀತದ ಈ ಹಾಡು, ಎಳೆಮಕ್ಕಳ ಬಾಯಲ್ಲೂ ನಲಿದಾಡುತ್ತಿತ್ತು.

‘ಮೈಸೂರಿಗೆ ಹೋಗ್ತಾ ಕಾರಲ್ಲಿ ಈ ಹಾಡು ಬರೆದೆ ಸಾರ್. ನನ್ನದೊಂದು ಸ್ವಭಾವ. ಹಾಡಿನ ಸಾಲುಗಳನ್ನು ಗುಣುಗುತ್ತಾ ಓಡಾಡುವುದು. ಈ ಸಾಲುಗಳು ನನ್ನ ಮನಸ್ಸಿನಲ್ಲಿ ಮೊದಲೇ ಮೂಡಿದ್ದವು. ನನಗೆ ಸಂಗೀತ ಜ್ಞಾನ ಇಲ್ಲ. ನನ್ನದೇನಿದ್ದರೂ ಎಮೋಷನಲ್ ಫೀಲ್ ಅಷ್ಟೆ. ಆದರೆ, ಒಂದು ಚರಣದ ದಾಟಿ ಮನಸ್ಸಿಗೆ ಬಂದದ್ದನ್ನು ಹಾಗೇ ನೆನಪಿಟ್ಟುಕೊಳ್ಳುವೆ. ಗುರುಕಿರಣ್ ಸಾರ್ ಇದಕ್ಕೆ ಜೀವ ಕೊಟ್ಟರು’ ಎಂದು ‘ಜೋಗಿ’ಯ ಪ್ಲ್ಯಾಷ್‍ಬ್ಯಾಕ್‍ ಅನ್ನು ನೆನಪಿಸಿಕೊಂಡರು ಪ್ರೇಮ್.

ಪ್ರೇಮ್ ಸ್ವತಃ ಈ ಹಾಡನ್ನು ಹಾಡಿದ್ದಾರೆ. ಅವರು ಯಾವುದೇ ಹಾಡನ್ನು ರೆಕಾರ್ಡ್ ಮಾಡುವಾಗ ಸಂಗೀತ ನಿರ್ದೇಶಕರು ಅಲ್ಲಿರಬಾರದು ಎನ್ನುವುದು ಕಂಡಿಷನ್.

‘ಅವರಿದ್ದರೆ ನನಗೆ ಹಾಡೋಕಾಗಲ್ಲ ಸಾರ್. ಭಯವಾಗುತ್ತೆ. ಅವತ್ತು ಗುರೂಜಿ ಅವರೂ ಹೊರಗೆ ಹೋದರು. ನಾನು ಆರಾಮವಾಗಿ ಹಾಡಿದೆ’ ಎಂದು ನಕ್ಕರು ಪ್ರೇಮ್.

ಈ ಹಾಡಿನಲ್ಲಿ ಶಿವರಾಜ್‍ಕುಮಾರ್ ನಟಿಸಿದ ದೃಶ್ಯಗಳು ಯಶವಂತಪುರದ ಮೈಸೂರು ಲ್ಯಾಂಪ್ ಆವರಣದಲ್ಲಿ ಶೂಟಿಂಗ್ ಆದರೆ, ತಾಯಿಯ ಪಾತ್ರಧಾರಿ ಆರುಂಧತಿ ನಾಗ್ ಅಭಿನಯದ ದೃಶ್ಯಗಳು ಚನ್ನಪಟ್ಟಣದ ಮಾದೇಶ್ವರ ದೇವಸ್ಥಾನದ ಬಳಿ ಶೂಟಿಂಗ್ ಆದದ್ದು. ಜೋರು ಮಳೆ, ಮೈನಡುಗಿಸುವ ಚಳಿಯಲ್ಲಿ ಆರುಂಧತಿಯವರು ಕಾಲುನೋವನ್ನೂ ಮರೆತು ಮೈತುಂಬಿ ಅಭಿನಯಿಸಿದ್ದನ್ನು ಪ್ರೇಮ್ ಈಗಲೂ ನೆನಪಿಟ್ಟುಕೊಂಡಿದ್ದಾರೆ. ಹಾಡಿನ ಸಾಹಿತ್ಯ ಅತ್ಯಂತ ಸರಳವಾಗಿದ್ದರೂ ಶೂಟಿಂಗ್ ಮಾಡಲಾದ ದೃಶ್ಯಗಳ ಹೊಂದಾಣಿಕೆ ಈ ಹಾಡನ್ನು ಸೂಪರ್‌ ಹಿಟ್ ಮಾಡಿತು.

ಪುನೀತ್ ರಾಜ್‍ಕುಮಾರ್ ಅಭಿನಯದ ‘ವಂಶಿ’ ಚಿತ್ರದಲ್ಲಿ ಡಾ.ರಾಜ್‍ಕುಮಾರ್ ಅವರು ಹಾಡಿದ ‘ತಾಯೀ ತಾಯೀ, ಲಾಲಿ ಹಾಡೊ ಭೂಮಿ ತಾಯಿಗೆ, ಹೆತ್ತ ತಾಯಿಗೆ’ ಅನ್ನುವ ಹಾಡು ಕನ್ನಡ ಸಿನಿಪ್ರೇಕ್ಷಕರ ಜನಮಾನಸದಲ್ಲಿ ಇವತ್ತಿಗೂ ನೆಲೆ ನಿಂತಿರುವ ಹಾಡು. ಈ ಹಾಡಿನ ವಿಶೇಷ ಎಂದರೆ ಈ ಹಾಡು 1992ರಲ್ಲಿ ‘ಹೂವು ಹಣ್ಣು’ ಚಿತ್ರದಲ್ಲಿ ಬಂದಿತ್ತು. ಅದೇ ಹಾಡನ್ನು 16 ವರ್ಷಗಳ ಬಳಿಕ ‘ವಂಶಿ’ ಚಿತ್ರಕ್ಕೆ ಮತ್ತೆ ಅಳವಡಿಸಲಾಗಿದೆ. ತಾಯಿಯೇ ಮಗನನ್ನು ಸಾಯಿಸುವ ಹೃದಯವಿದ್ರಾವಕ ಕಥೆಯಿರುವ ಚಿತ್ರವಿದು. ಲಕ್ಷ್ಮಿ ಅಭಿನಯ ಈ ಚಿತ್ರದ ಮೇರುಬಿಂದು.

‘ಹೂವು ಹಣ್ಣು’ ಚಿತ್ರದ ಸಂಗೀತದ ಕಾಪಿರೈಟ್ಸ್ ಇದ್ದುದು ಲಹರಿ ವೇಲು ಅವರ ಬಳಿ. ‘ಪಾರ್ವತಮ್ಮ ಅವರು ಮನೆಗೇ ಕರೆಸಿದ್ರು. ಈ ಹಾಡು ವಂಶಿ ಚಿತ್ರಕ್ಕೆ ಕೊಡಬೇಕು ವೇಲೂ.. ಅಂತ ಕೇಳಿದ್ರು. ತುಂಬ ಸಂತೋಷದಿಂದ ಉಚಿತವಾಗಿ ಕೊಟ್ಟೆ ಸಾರ್. ಹೀಗೆ ಒಂದು ಹಾಡು ಎಷ್ಟೋ ವರ್ಷಗಳ ಬಳಿಕ ಇನ್ನೊಂದು ರೂಪದಲ್ಲಿ ಪುನರ್ಜನ್ಮ ಪಡೆದು ಜನಪ್ರಿಯವಾದದ್ದು ನನಗಂತೂ ಅಚ್ಚರಿಯ ಸಂಗತಿ’ ಎನ್ನುತ್ತಾರೆ ವೇಲು.

ಜನಪ್ರಿಯತೆಯ ಪಟ್ಟಿಯಲ್ಲಿ ಮಿಂಚುವ ಇನ್ನೊಂದು ಹಾಡು ರವಿಚಂದ್ರನ್, ಮಧೂ ಅಭಿನಯದ ‘ಅಣ್ಣಯ್ಯ’ ಚಿತ್ರದ ‘ಅಮ್ಮಾ... ಊರೇನೇ ಅಂದರೂ, ನೀ ನನ್ನಾ ದೇವರೂ...’ ಅರುಣಾ ಇರಾನಿ ತಾಯಿಯ ಪಾತ್ರ ಮಾಡಿದ ಈ ರಿಮೇಕ್ ಚಿತ್ರದಲ್ಲಿ ನಾಟಕೀಯ ಕಥೆಯೇ ಜೀವಾಳ. ಆದರೆ, ‘ಅಮ್ಮಯ್ಯ ಅಮ್ಮಯ್ಯ ಬಾರೇ’ ಎನ್ನುವ ಹಾಡು ಚಿತ್ರಕಥೆಯಿಂದ ಹೊರತಾಗಿಯೂ ಹೆಚ್ಚು ಜನಮನ್ನಣೆ ಗಳಿಸಿತು.

ಅಮ್ಮನ ಕುರಿತ ಜನಪ್ರಿಯ ಚಿತ್ರಗೀತೆಗಳ ಪಟ್ಟಿ ಅತ್ಯಂತ ಸುದೀರ್ಘವಾಗಿದೆ. ಇವುಗಳನ್ನು ಟಾಪ್‍ಟೆನ್ ಶ್ರೇಣಿಯಲ್ಲಿ ಹೊಂದಿಸುವುದು ಕಷ್ಟ.

ವಿಷ್ಣುವರ್ಧನ್ ಅಭಿನಯದ ‘ಅಮ್ಮಾ ಎನ್ನಲು, ಕೋಟಿ ಪುಣ್ಯವೋ, ಅವಳಾ ತ್ಯಾಗಕೆ ಸಾಟಿ ಇಲ್ಲವೋ’ ಎನ್ನುವ ಹಾಡು; ‘ಈ ಜೀವ ನಿನಗಾಗಿ’ ಚಿತ್ರದ ‘ಅಮ್ಮಾ ಅಮ್ಮಾ ಎನ್ನುವ ಮಾತು, ಬಂತೂ ಎಲ್ಲಿಂದ’ ಎನ್ನುವ ಬೇಬಿ ಶಾಲಿನಿ ಅಭಿನಯದ ಹಾಡು; ಮಕ್ಕಳ ಧ್ವನಿಯಲ್ಲಿ ಹಾಡಿ ಮನೆಮಾತಾಗಿರುವ ಗಾಯಕಿ ಬಿ.ಆರ್. ಛಾಯಾ ಅವರು ಹಾಡಿದ ‘ಸಾಂಗ್ಲಿಯಾನ’ ಚಿತ್ರದ ‘ಪ್ರೀತಿಯಿಂದ ಪಪ್ಪಿಕೊಟ್ಟ ಮಮ್ಮಿ’ ಹಾಡು; ನಾಗೇಂದ್ರ ಪ್ರಸಾದ್ ಸಾಹಿತ್ಯದ ‘ಎಕ್ಸ್‌ಕ್ಯೂಸ್ ಮಿ’ ಚಿತ್ರದ "ಬ್ರಹ್ಮ ವಿಷ್ಣು ಶಿವ ಎದೆಹಾಲು ಕುಡಿದರು, ಅಮ್ಮ ನೀನೇ ದೈವ ಅಂತ ಕಾಲು ಮುಗಿದರು’ (ಸಂಗೀತ: ಆರ್.ಪಿ. ಪಟ್ನಾಯಕ್) ಹಾಡು; ‘ನೀ ಬರೆದ ಕಾದಂಬರಿ’ ಚಿತ್ರದ ‘ನೀ ಮೀಟಿದ ನೆನಪೆಲ್ಲವೂ...’ ಹಾಡು; ‘ಕಲಿಯುಗ ಭೀಮ’ ಚಿತ್ರದ ಹಂಸಲೇಖ ರಚನೆ ಮತ್ತು ಸಂಗೀತದ ‘ಕೈತುತ್ತು ಕೊಟ್ಟೋಳೆ, ಐ ಲವ್ ಯು ಮದರ್ ಇಂಡಿಯಾ’ ಹಾಡು; ವಿನೋದ್‍ರಾಜ್ ಅಭಿನಯದ ‘ಡ್ಯಾನ್ಸ್ ರಾಜಾ ಡ್ಯಾನ್ಸ್’ ಚಿತ್ರದ ‘ಅಮ್ಮಾ ಅಮ್ಮಾ ನಿನ್ನ ಪ್ರೇಮಕೆ...’ ಎನ್ನುವ ಹಾಡು; ‘ಮೌರ್ಯ’ ಚಿತ್ರದ ‘ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ... ಅಮ್ಮಾ ಅಮ್ಮಾ ಐ ಲವ್ ಯೂ...’ ಎನ್ನುವ ಹಾಡು- ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಅಮ್ಮನ ಹಾಡಿನ ಸಾಲಿನಲ್ಲಿ ಕನ್ನಡದ ಹೆಮ್ಮೆಯ ಚಿತ್ರಸಾಹಿತಿ ಚಿ.ಉದಯಶಂಕರ್ ಅವರನ್ನು ಬಿಟ್ಟುಬಿಡುವುದು ಸಾಧ್ಯವೇ ಇಲ್ಲ. ಎಷ್ಟೊಂದು ಅಮ್ಮನ ಹಾಡುಗಳು ಅವರ ಲೇಖನಿಯಿಂದ ಮೂಡಿಬಂದಿವೆ!

‘ಯಾರಿವನು’ ಚಿತ್ರದ ಪುನೀತ್ ರಾಜ್‍ಕುಮಾರ್ ಹಾಡಿದ ‘ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ’; ‘ತಾಯಿಯ ಮಡಿಲು’ ಚಿತ್ರದ ‘ಅಮ್ಮಾ ನೀನು ನಕ್ಕರೆ, ನಮ್ಮ ಬಾಳು ಸಕ್ಕರೆ’ ಹಾಡು; ಅಂಬರೀಷ್- ಅಂಬಿಕಾ ಕಣ್ಣಮುಂದೆ ಬರುವ ‘ಚಕ್ರವ್ಯೂಹ’ ಚಿತ್ರದ ‘ನಿಜ ಹೇಳುವೆನು ಅಮ್ಮ ನಿನ್ನ ಕಂಡರೆ ಪ್ರೀತಿ’ ಎಂದಿಗೂ ನೆನಪಿರುವ ಹಾಡುಗಳು. ‘ಕೆರಳಿದ ಸಿಂಹ’ ಚಿತ್ರದ ಪಿಬಿಎಸ್ ಮತ್ತು ಡಾ.ರಾಜ್ ಇಬ್ಬರೂ ಹಾಡಿರುವ ‘ಅಮ್ಮಾ ನೀನು ನಮಗಾಗಿ, ಸಾವಿರ ವರ್ಷ ಸುಖವಾಗಿ’ ಮತ್ತು ‘ಕಳ್ಳ ಕುಳ್ಳ’ ಚಿತ್ರದ ‘ಅಮ್ಮಾ ಎಂದರೆ, ಏನೋ ಹರುಷವು, ನಮ್ಮ ಪಾಲಿಗೆ ಅವಳೇ ದೈವವು’ ಅಂತೂ ಚಿ.ಉದಯಶಂಕರ್ ಸಾರ್ವಕಾಲಿಕ ದಾಖಲೆಯ ಹಾಡುಗಳು.

ಇವೆಲ್ಲ ಇತ್ತೀಚಿನ ಮಾತಾಯಿತು. ಇನ್ನೂ ಹಿಂದಕ್ಕೆ ಹೋದರೆ ಈಗಲೂ ಕಿವಿಯಲ್ಲಿ ಗಾಢವಾಗಿ ಕೇಳಿಸುವ ಹಾಡೊಂದಿದೆ. 1969ರಲ್ಲಿ ಸಿನಿಸಂಗೀತಪ್ರಿಯರನ್ನು ಗಾಢವಾಗಿ ತಟ್ಟಿದ ಹಾಡದು. ಆ ವರ್ಷ ಪುಟ್ಟಣ್ಣ ಕಣಗಾಲ್ ಅವರು ಮೂರು ಚಿತ್ರಗಳನ್ನು ತೆರೆಗಿತ್ತರು. ‘ಮಲ್ಲಮ್ಮನ ಪವಾಡ’, ‘ಗೆಜ್ಜೆಪೂಜೆ’ ಮತ್ತು ‘ಕಪ್ಪುಬಿಳುಪು’.

ಮೊದಲ ಎರಡು ಚಿತ್ರಗಳು ಈಗಲೂ ಜನರ ನೆನಪಿನಲ್ಲಿವೆ. ಆದರೆ, ‘ಕಪ್ಪು ಬಿಳುಪು’ ಚಿತ್ರದಲ್ಲಿ ಪಿ. ಸುಶೀಲಾ ಅವರು ಹಾಡಿರುವ ‘ಅಮ್ಮಾ ನಿನ್ನಾ ತೋಳಿನಲ್ಲಿ ಕಂದಾ ನಾನು’ ಎನ್ನುವ ಹಾಡು ನನ್ನ ಪ್ರಕಾರ, ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಹಾಡು! ಅಂದಹಾಗೆ ಆ ಹಾಡಿಗೆ ಈಗ ಐವತ್ತು ವರ್ಷಗಳಾದವು! 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು