ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಟ್ಲಾಂಟಕ್ಕೆ ಮತ್ತೆ ಹೊರಟ ಅಮೃತಮತಿ

Last Updated 19 ಜನವರಿ 2021, 11:39 IST
ಅಕ್ಷರ ಗಾತ್ರ

ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಚಿತ್ರವು ಅಮೆರಿಕದ ಅಟ್ಲಾಂಟದಲ್ಲಿ ನಡೆಯುವ ‘ಅಟ್ಲಾಂಟ ಪ್ರಶಸ್ತಿ ಅರ್ಹತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ದ ಸ್ಪರ್ಧಾ ಕಣಕ್ಕೆ ಆಯ್ಕೆಯಾಗಿದೆ.

ಅಟ್ಲಾಂಟದಲ್ಲಿ2020ರ ಜುಲೈ 29ರಿಂದ ಆಗಸ್ಟ್‌ 12ರವರೆಗೆ ಆನ್‌ಲೈನ್‌ ಮೂಲಕ ನಡೆದಿದ್ದ ‘ಅಟ್ಲಾಂಟ ಸ್ಪರ್ಧಾತ್ಮಕ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲೂ ಪ್ರದರ್ಶನ ಕಂಡಿತ್ತು.

ಈ ಚಿತ್ರ ಈಗಾಗಲೇ 5 ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು, ನೋಯ್ಡಾದ ನಾಲ್ಕನೇ ಭಾರತೀಯ ವಿಶ್ವ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಈ ಚಲನಚಿತ್ರೋತ್ಸವದಲ್ಲಿ ಅಮೃತಮತಿ ಪಾತ್ರಧಾರಿ ನಟಿ ಹರಿಪ್ರಿಯಾ ಅವರಿಗೆ ಶ್ರೇಷ್ಠನಟಿ ಪ್ರಶಸ್ತಿ ಸಂದಿತ್ತು.

ಈ ಚಿತ್ರವನ್ನು ಮಾರ್ಚ್‌ ಮೊದಲ ವಾರದಲ್ಲಿ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

ಮುಂಬೈ ಮೂಲದ ಸಿಎಆರ್‌ಯು ಎಂಟರ್‌ಪ್ರೈಸಸ್‌ ಸಂಸ್ಥೆಯ ಈ ಚಿತ್ರದ ಪ್ರದರ್ಶನದ ಹಕ್ಕುಗಳನ್ನು ಪಡೆದಿದೆ. ಚಿತ್ರಮಂದಿರ ಮತ್ತು ಒಟಿಟಿಯಲ್ಲೂ ಈ ಚಿತ್ರ ಬಿಡುಗಡೆ ಮಾಡುವ ಹೊಣೆಯನ್ನು ಸಂಸ್ಥೆ ಹೊತ್ತುಕೊಂಡಿದೆ. ಇಂಚರ ಪುಟ್ಟಣ್ಣ ಪ್ರೊಡಕ್ಷನ್‌ ಸಂಸ್ಥೆಯಡಿ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

13ನೇ ಶತಮಾನದ ಕನ್ನಡ ಕವಿ ಜನ್ನನಿಂದ ರಚಿತವಾದ ‘ಯಶೋಧರ ಚರಿತೆ’ ಕಾವ್ಯವನ್ನು ಈ ಚಿತ್ರ ಆಧರಿಸಿದೆ. ಈ ಕಾವ್ಯದಲ್ಲಿ ಬರುವಅಮೃತಮತಿಪ್ರಸಂಗವನ್ನು ಮರುಸೃಷ್ಟಿಸಿ, ಮರು ವ್ಯಾಖ್ಯಾನಕ್ಕೆ ಒಳಪಡಿಸಿದ್ದಾರೆ ಬರಗೂರು. ಚಿತ್ರಕಥೆ, ಸಂಭಾಷಣೆ ಹೊಸೆಯುವ ಜತೆಗೆ ಎರಡು ಗೀತೆಗಳನ್ನು ರಚಿಸಿದ್ದಾರೆ.

ಯಶೋಧರನ ಪಾತ್ರದಲ್ಲಿ ನಟ ಕಿಶೋರ್‌ ಹಾಗೂ ಅಷ್ಟಾವಂಕನಾಗಿ ತಿಲಕ್‌ ನಟಿಸಿದ್ದಾರೆ. ಹಿರಿಯ ನಟ ಸುಂದರ್‌ ರಾಜ್‌, ಪ್ರಮೀಳಾ ಜೋಷಾಯ್‌, ಸುಪ್ರಿಯಾ ರಾವ್‌, ವತ್ಸಲಾ ಮೋಹನ್‌, ಅಂಬರೀಷ್ ಸಾರಂಗಿ, ಭೂಮಿಕಾ ಲಕ್ಷ್ಮಿನಾರಾಯಣ ತಾರಾಗಣವಿದೆ. ಛಾಯಾಗ್ರಹಣ ನಾಗರಾಜು ಆದವಾನಿ, ಸಂಗೀತ ನಿರ್ದೇಶನ ಶಮಿತಾ ಮಲ್ನಾಡ್‌, ಸಂಕಲನ ಸುರೇಶ್‌ ಅರಸು ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT