ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದ ಎಂಟ್ರಿಗೆ ನಟಿ ಅಮೂಲ್ಯ ಇಂಗಿತ

Last Updated 9 ಫೆಬ್ರುವರಿ 2019, 12:37 IST
ಅಕ್ಷರ ಗಾತ್ರ

ಬೆಂಗಳೂರು:ಬಾಲನಟಿಯಾಗಿ ಚಂದನವನ ಪ್ರವೇಶಿಸಿದ ಅಮೂಲ್ಯ ‘ಚೆಲುವಿನ ಚಿತ್ತಾರ’ ಚಿತ್ರದ ಮೂಲಕ ನಟಿಯಾಗಿ ಗುರುತಿಸಿಕೊಂಡರು. ‘ನಾನೂ.. ನನ್ನ ಕನಸು' ಚಿತ್ರದಲ್ಲಿ ಪ್ರಕಾಶ್‌ ರೈ ಅವರ ಮುದ್ದಿನ ಮಗಳ ಪಾತ್ರದಲ್ಲಿ ನಟಿಸಿ ಸೈ ಅನಿಸಿಕೊಂಡರು. ‘ಶ್ರಾವಣಿ ಸುಬ್ರಮಣ್ಯ’, ‘ಗಜಕೇಸರಿ’ಯಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದರು. ಬಳಿಕ ಅವರು ನಟಿಸಿದ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಈ ನಡುವೆಯೇ ಜಗದೀಶ್‌ ಅವರನ್ನು ಮದುವೆಯಾಗಿ ರಾಜಕೀಯ ಕುಟುಂಬದ ಸೊಸೆಯೂ ಆದರು. ಇದೆಲ್ಲಾ ಹಳೆಯ ಸುದ್ದಿ.

ಅಮೂಲ್ಯ ಅವರ ಮಾವ ರಾಜಕಾರಣಿ ಎನ್ನುವುದು ಎಲ್ಲರಿಗೂ ಗೊತ್ತು. ಜೊತೆಗೆ, ಬಿಬಿಎಂಪಿಯಲ್ಲಿ ಪಳಗಿದವರು. ಹಾಗಾಗಿ, ಅಮೂಲ್ಯ ಕೂಡ ರಾಜಕೀಯ ರಂಗ ಪ್ರವೇಶಿಸುತ್ತಾರೆ ಎಂಬ ಮಾತುಗಳು ಅವರ ಮದುವೆಯ ಆರಂಭದ ದಿನಗಳಲ್ಲಿ ಕೇಳಿಬಂದಿದ್ದವು. ಇತ್ತೀಚೆಗೆ ಪತಿ ಜಗದೀಶ್‌ ಅವರ ಹುಟ್ಟುಹಬ್ಬದ ವೇಳೆ ಈ ನಟಿಮಣಿ ಹೇಳಿರುವ ಮಾತುಗಳು ಆಕೆಯ ರಾಜಕೀಯ ರಂಗದ ಪ್ರವೇಶಕ್ಕೆ ಪುಷ್ಟಿ ನೀಡಿವೆ.

‘ರಾಜಕೀಯ ಕುರಿತು ನಾನು ತುಂಬಾ ಬೇಗ ಮಾತನಾಡುತ್ತಿದ್ದೇನೆ. ನಾನು ರಾಜಕೀಯ ಕುಟುಂಬಕ್ಕೆ ಸೇರಿರುವುದೇ ಇದಕ್ಕೆ ಮೂಲ ಕಾರಣ. ಒಂದು ರಾಜಕೀಯ ಪಕ್ಷದಿಂದ ಆಫರ್ ಬಂದಿದೆ. ನಾನಿನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ನಮ್ಮ ಮಾವ ಹಾಗೂ ಕುಟುಂಬದ ಸದಸ್ಯರ ಬಳಿ ಈ ಬಗ್ಗೆ ಚರ್ಚಿಸುತ್ತೇನೆ. ಅವರ ತೀರ್ಮಾನದಂತೆ ಮುಂದಿನ ಹೆಜ್ಜೆ ಇಡುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.

ಸಾಮಾಜಿಕ ಕೆಲಸದಲ್ಲೂ ನನಗೆ ಆಸಕ್ತಿ ಇದೆ. ರಾಜಕೀಯ ಕುಟುಂಬಕ್ಕೆ ಸೇರಿದ್ದೇನೆ ಎನ್ನುವ ಕಾರಣಕ್ಕೆ ಈ ಕೆಲಸ ಮಾಡುತ್ತಿಲ್ಲ. ತೆರೆಯ ಹಿಂದೆ ಮತ್ತು ಮುಂದೆ ಬಹಳಷ್ಟು ಕೆಲಸ ಮಾಡಿದ್ದೇವೆ. ಹಾಗಾಗಿ ಸಾಮಾಜಿಕ ಕೆಲಸ ಮಾಡುವುದು ನನಗೆ ಹೊಸದಲ್ಲ’ ಎಂದು ಹೇಳಿದ್ದಾರೆ.

ಮತ್ತೆ ನಟನೆಗೆ ಅಮೂಲ್ಯ

ಮದುವೆಯಾದ ಬಳಿಕ ಅಮೂಲ್ಯ ನಟನೆಗೆ ಬ್ರೇಕ್ ನೀಡಿದ್ದರು. ಮತ್ತೆ ಅವರು ಆ್ಯಕ್ಟಿಂಗ್‌ಗೆ ಮರಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ತಮಿಳಿನ ‘ವೇದಾಲಂ’ ಚಿತ್ರ ಕನ್ನಡದಲ್ಲಿ ರೀಮೇಕ್‌ ಆಗುತ್ತಿದೆಯಂತೆ. ಇದರಲ್ಲಿ ‘ಚಾಲೆಂಜಿಂಗ್‌ ಸ್ಟಾರ್’ ದರ್ಶನ್‌ಗೆ ತಂಗಿ ಪಾತ್ರದಲ್ಲಿ ನಟಿಸಲು ಅಮೂಲ್ಯಗೆ ಆಫರ್ ನೀಡಲಾಗಿದೆ ಎನ್ನುತ್ತವೆ ಬಲ್ಲ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT