ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ.25ರಂದು ಅಂದವಾದ ತೆರೆಗೆ

Last Updated 14 ಅಕ್ಟೋಬರ್ 2019, 21:07 IST
ಅಕ್ಷರ ಗಾತ್ರ

ಸಿನಿ ರಸಿಕರಿಗೆ ಪ್ರೇಮಪಾಠ ಹೇಳಲು ಮತ್ತೊಂದುಮುದ್ದಾದ ಪ್ರೇಮಕಹಾನಿಯ ಚಿತ್ರ ‘ಅಂದವಾದ’ ತೆರೆಗೆ ಬರಲು ಸಜ್ಜಾಗಿದೆ. ಇದೇ 25ರಂದು ತೆರೆಕಾಣಲಿದೆ.

ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು, ಪ್ರೇಮಕಥೆಗೆ ಪೂರಕವಾಗಿ ಮಲೆನಾಡಿನ ಮುಂಗಾರು ಮಳೆ ಮತ್ತು ಮಂಜಿನ ವಾತಾವರಣದಲ್ಲಿ ಸುಂದರ ತಾಣಗಳ ನಡುವೆ ಚಿತ್ರೀಸಿರುವ ದೃಶ್ಯಗಳು ಮತ್ತು ಹಾಡುಗಳು ಸಿನಿ ರಸಿಕರ ಗಮನ ಸೆಳೆಯುವಂತಿವೆ.

‌ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ನೊಗ ಹೊತ್ತು ‘ಅಂದವಾದ’ ಚಿತ್ರ ನಿರ್ಮಿಸಿರುವ ಸಂಭ್ರಮದಲ್ಲೇ ಯುವ ನಿರ್ದೇಶಕ ಚಲ ಸುದ್ದಿಗೋಷ್ಠಿಗೆ ಚಿತ್ರತಂಡದೊಂದಿಗೆ ಹಾಜರಾಗಿದ್ದರು.

ತುಂಬಾ ಹಸಿದ ಹುಡುಗನೊಬ್ಬನಿಗೆ ಕೊನೆಯ ಊಟವಾಗಿ ಕಾಫಿ ಸಿಕ್ಕಂತೆ ಈ ಸಿನಿಮಾವನ್ನು ತುಂಬಾ ಕಷ್ಟಪಟ್ಟು ಮಾಡಿದ್ದೇವೆ. ಮುಂದೆ ಎಷ್ಟು ಚಿತ್ರಗಳನ್ನು ಮಾಡುತ್ತೀವೋ ಇಲ್ಲವೋ ಅದು ಗೊತ್ತಿಲ್ಲ. ಆದರೆ, ಈಗ ಮಾಡಿರುವ ಈ ಸಿನಿಮಾ ಸಾಕಷ್ಟು ತೃಪ್ತಿ ಮತ್ತು ಖುಷಿ ನೀಡಿದೆ ಎಂದು ಚಲ ಮಾತು ವಿಸ್ತರಿಸಿದರು.

ಚಿತ್ರದ ಶೇ 90 ಭಾಗವನ್ನು ರಾಜ್ಯದಲ್ಲೇ ಚಿತ್ರೀಕರಿಸಲಾಗಿದೆ. ಸಕಲೇಶಪುರ ಮತ್ತು ಕೊಡಚಾದ್ರಿಯಲ್ಲಿ ಇದುವರೆಗೂ ಯಾರೂ ತಲುಪದೇ ಇದ್ದ ಸುಂದರ ಜಾಗಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಪ್ರೇಮಕಥೆಯ ಜತೆಗೆ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಈ ಚಿತ್ರದ ಮೂಲಕ ನೀಡುತ್ತಿದ್ದೇವೆ ಎಂದರು.

ಮಳೆಗಾಲ, ಮಂಜಿನ ಸುಂದರ ವಾತಾವರಣದ ಸೊಬಗನ್ನು ಈ ಚಿತ್ರದಲ್ಲಿ ಕಾಣಲಿದ್ದೀರಿ. ಚಿತ್ರವನ್ನು ನಿರ್ದೇಶಕರು ಹೇಳಿದ ಸಮಯಕ್ಕೆ ಪೂರ್ಣಗೊಳಿಸಿದ್ದಾರೆ. ಚಿತ್ರದಲ್ಲಿನ ಪಾತ್ರಗಳಿಗೂ ಮತ್ತು ಚಿತ್ರೀಕರಣ ಮಾಡಿರುವ ಮಳೆ, ಮಂಜಿಗೂ ತುಂಬಾ ಕನೆಕ್ಟ್‌ ಆಗಲಿದೆ. ನಾನೊಬ್ಬಳು ಪರಿಸರ ಪ್ರೇಮಿಯಾಗಿ ಈ ಚಿತ್ರವನ್ನು ತುಂಬಾ ಖುಷಿಯಿಂದ ನಿರ್ಮಿಸಿದ್ದೇನೆ ಎಂಬ ಮಾತು ಸೇರಿಸಿದರು ನಿರ್ಮಾಪಕಿ ಡಿ.ಆರ್‌.ಮಧು.

ಸಂಗೀತ ನಿರ್ದೇಶಕವಿಕ್ರಮ್ ವರ್ಮನ್, ‘ಇದು ನನಗಂತೂ ತುಂಬಾ ವಿಶೇಷ ಚಿತ್ರ. ಚಿತ್ರದಲ್ಲಿ ಒಂಬತ್ತು ಹಾಡುಗಳಿವೆ.ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ಹೃದಯ ಶಿವ ಅವರ ಗೀತ ಸಾಹಿತ್ಯ ಎಲ್ಲರಿಗೂ ಇಷ್ಟವಾಗಲಿದೆ.ಚಿತ್ರದ ಹಾಡುಗಳನ್ನು ತಮಿಳುನಾಡಿನಲ್ಲೂ ಸಂಗೀತಪ್ರಿಯರು ಇಷ್ಟಪಟ್ಟಿದ್ದಾರೆ’ ಎಂದರು.

‘ಚಲ ಅವರ ಜತೆಗೆ ಪ್ರೊಡಕ್ಷನ್‌ ವಿಭಾಗದ ಸಹಾಯಕನಾಗಿ ಕೆಲಸ ಮಾಡುತ್ತಿದ್ದವನು ನಾನು. ಈ ಚಿತ್ರದ ಕಥೆಯ ನಾಯಕನ ಪಾತ್ರಕ್ಕೆನಾನೇ ಸೂಕ್ತ ಆಯ್ಕೆಯೆಂದು ನನಗೆ ನಾಯಕ ನಟನಾಗಿ ಅಭಿನಯಿಸುವ ಅವಕಾಶ ನೀಡಿದ್ದಾರೆ. ನಿಜಕ್ಕೂ ನಾನು ಅದೃಷ್ಟವಂತ. ಇಷ್ಟೊಂದು ಗುಣಮಟ್ಟದ ಚಿತ್ರದಲ್ಲಿ ನಾನು ನಾಯಕನಾಗುತ್ತೇನೆಂದು ನಿರೀಕ್ಷಿಸಿ‌ರಲಿಲ್ಲ. ಚಿತ್ರದಲ್ಲಿ ನನ್ನದು ಮುಗ್ಧ ಯುವಕನ ಪಾತ್ರ. ಈ ಪಾತ್ರಕ್ಕಾಗಿ ಹತ್ತು ಕೆ.ಜಿ. ತೂಕ ಇಳಿಸಿಕೊಂಡು, ಅಭಿನಯಿಸಿದ್ದೇನೆ. ಪಾತ್ರಕ್ಕಾಗಿ ಸಾಕಷ್ಟು ರಿಹರ್ಸಲ್‌ ನಡೆಸಿದ್ದೇವೆ ಎಂದರು ನಾಯಕ ನಟ ಜೈ.

ಇಡೀ ದಕ್ಷಿಣ ಭಾರತದಲ್ಲೇ ಯಾವ ಚಿತ್ರದಲ್ಲೂ ಹೇಳಿರದಂತಹ ಸಂದೇಶವನ್ನು ಈ ಚಿತ್ರದಲ್ಲಿ ನಿರ್ದೇಶಕರು ಹೇಳಿದ್ದಾರೆ. ಸಮಾಜದಲ್ಲಿ ನಿತ್ಯ ನಡೆಯುವ ನೈಜ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು, ಅದರಲ್ಲೂ ಮಾಧ್ಯಮಗಳು ಸಮಾಜದ ಎದುರು ತೆರೆದಿಡುವ ಘಟನೆಗಳ ತುಣುಕುಗಳ ಜತೆಗೆ ಒಂದು ಮುದ್ದಾದ ಪ್ರೇಮಕಥೆಯನ್ನು ತೆರೆಯ ಮೇಲೆ ತೋರಿಸಿದ್ದಾರೆ ಎಂದರು.

ನಾಯಕಿ ಅನುಷಾ ರಂಗನಾಥ್, ‘ಚಿತ್ರದಲ್ಲಿ ನಾನು ಮುಗ್ಧೆ ಹೌದೊ ಅಲ್ಲವೋ ಎನ್ನುವುದು ಗೊತ್ತಿಲ್ಲ. ಆದರೆ, ನಾಯಕನಿಗೆ ಸದಾ ಸುಳ್ಳು ಹೇಳಿ ನಂಬಿಸಿ ಆಟ ಆಡಿಸುವಂತಹ ಹುಡುಗಿ. ಯಾಕಾಗಿ ಸುಳ್ಳು ಹೇಳುತ್ತೇನೆ ಮತ್ತು ಮುಗ್ಧ ನಾಯಕನ್ನು ಯಾಕೆ ಆಟ ಆಡಿಸುತ್ತೀನಿ ಎನ್ನುವುದನ್ನು ತೆರೆಯ ಮೇಲೆಯೇ ನೋಡಬೇಕು’ ಎಂದರು.

ಸಿನಿಮಾದ ಟೈಟಲ್‌ ಎಷ್ಟು ಚೆನ್ನಾಗಿದೆಯೋ ಅಷ್ಟೇ ಅಂದವಾದ ಮತ್ತು ಬೆಚ್ಚಗಿನ ಪ್ರೇಮಕಥೆಯ ಸಿನಿಮಾ ಇದು ಎಂದುನಿರ್ದೇಶಕ ಸಿಂಪಲ್‌ ಸುನಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮಧುಶ್ರೀ ಗೋಲ್ಡ್ ಫ್ರೇಮ್ಸ್ ಲಾಂಛನದಲ್ಲಿ ಈ ಚಿತ್ರವನ್ನು ಡಿ.ಆರ್. ಮಧು ಜಿ. ರಾಜ್ ನಿರ್ಮಿಸುತ್ತಿದ್ದಾರೆ.

ಗುರುಕಿರಣ್ ಹಿನ್ನೆಲೆ ಸಂಗೀತ, ಹರೀಶ್ ಎನ್. ಸೊಂಡೇಕೊಪ್ಪ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಮುರಳಿ ನೃತ್ಯ ನಿರ್ದೇಶನ, ಮೋಹನ್ ಬಿ. ಕೆರೆ ಕಲಾ ನಿರ್ದೇಶನವಿದೆ. ಹರೀಶ್ ರೈ, ಕೆ.ಎಸ್. ಶ್ರೀಧರ್, ಕೆ.ವಿ. ಮಂಜಯ್ಯ, ರೇಖಾ ಸಾಗರ್, ರೋಜಾ, ಮಂಗಳೂರು ಮೀನಾನಾಥ್ ತಾರಾಬಳಗವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT