ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಂತ್ರದಲ್ಲಿ ಸಂಬಂಧಗಳ ಹುಡುಕಾಟ

Last Updated 17 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಇದು ತಂತ್ರಜ್ಞಾನ ಯುಗ. ಇಂದು ಯಂತ್ರಗಳು ಕೂಡ ಮಾನವನ ಬದುಕಿನ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ. ಆದರೆ ಮನುಷ್ಯ ಸಂಬಂಧಗಳು ಮಾತ್ರ ಅರ್ಥ ಕಳೆದುಕೊಳ್ಳುತ್ತಿವೆ. ಇಂತಹ ಭಾವನಾತ್ಮಕ
ಕಥಾವಸ್ತುವನ್ನು ಹೊಂದಿರುವ ಮಲಯಾಳ ಚಿತ್ರ 'ಆ್ಯಂಡ್ರಾಯ್ಡ್ ಕುಂಞಪ್ಪನ್ ವರ್ಷನ್ 5.25' ಗಮನ ಸೆಳೆಯುತ್ತದೆ.

ರತೀಶ್ ಬಾಲಕೃಷ್ಣ ಪೊದುವಾಳ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು ವೃದ್ಧಾಪ್ಯದಲ್ಲಿ ಒಬ್ಬಂಟಿಯಾಗುವ ವ್ಯಕ್ತಿಯೊಬ್ಬರು ರೊಬೊಟ್ ಜೊತೆ ಬದುಕುವ ಅನಿವಾರ್ಯತೆಯನ್ನು ಮಾರ್ಮಿಕವಾಗಿ ತೆರೆದಿಡುತ್ತದೆ.

ನವಿರು ಹಾಸ್ಯದ ಜೊತೆ ಬದುಕಿನ ವಾಸ್ತವವನ್ನು ಈ ಚಿತ್ರವು ಪ್ರೇಕ್ಷಕರ ಮುಂದಿಡುತ್ತದೆ. ಜೊತೆಗೆ ಚಿಂತನೆಯ ಒರೆಗೆ ಹಚ್ಚುತ್ತದೆ. ವೃದ್ಧ ಭಾಸ್ಕರ ಪೊದುವಾಳ್ ಗ್ರಾಮವೊಂದರಲ್ಲಿ ಪುತ್ರನ ಜೊತೆ ವಾಸವಿರುತ್ತಾರೆ. ತನ್ನನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂಬ ಕಾರಣಕ್ಕೆ ಮಗನನ್ನು ತನ್ನ ಬಳಿಯೇ ಇರಿಸಿಕೊಳ್ಳುತ್ತಾರೆ. ಎಂಜಿನಿಯರಿಂಗ್ ಶಿಕ್ಷಣ ಪಡೆದ ಪುತ್ರನಿಗೆ ಮಾತ್ರ ಕೆಲಸಕ್ಕೆ ಹೋಗಬೇಕೆಂಬ ಅತೀವ ಹಂಬಲ. ಆತನ ಆಸೆಗೆ ತಂದೆ ಸದಾ ತಣ್ಣೀರೆರಚುತ್ತಾರೆ. ಕೊನೆಗೆ ರಷ್ಯಾದ ಕಂಪನಿಯೊಂದರಲ್ಲಿ ಕೆಲಸಕ್ಕೆ ತೆರಳಲು ಆತ ನಿರ್ಧರಿಸುತ್ತಾನೆ.

ತಂದೆಯನ್ನು ನೋಡಿಕೊಳ್ಳಲು ಮಹಿಳೆ ಒಬ್ಬರನ್ನು ನೇಮಿಸಿ ಆತ ತೆರಳುತ್ತಾನೆ. ಆದರೆ ಮುಂಗೋಪಿಯಾದ ಭಾಸ್ಕರ ಪೊದುವಾಳ್ ಮಾತ್ರ ಕೆಲಸಗಾರರ ಜೊತೆ ಹೊಂದಿಕೊಳ್ಳುವುದಿಲ್ಲ. ಈ ನಡೆಯಿಂದ ಬೇಸತ್ತ ಮಗ ಕೊನೆಗೆ ತಾನು ಕೆಲಸ ಮಾಡುವ ಕಂಪನಿ ನಿರ್ಮಿಸಿದ ರೊಬೊಟ್ ಅನ್ನು ತಂದೆಯ ಸಹಾಯಕ್ಕಾಗಿ ಮನೆಗೆ ತರುತ್ತಾನೆ. ಮನೆಗೆಲಸ ಮಾಡುವ ಈ ರೊಬೊಟ್ ಬಂದ ನಂತರ ಭಾಸ್ಕರ್ ಪೊದುವಾಳ್ ಜೀವನದಲ್ಲಿ ನಡೆಯುವ ಘಟನಾವಳಿಗಳೇ ಈ ಚಿತ್ರದ ಕಥಾಹಂದರ.

ರೊಬೊಟ್ ಜೊತೆ ಬದುಕುವ ಭಾಸ್ಕರ ಪೊದುವಾಳ್, ಅದು ಯಂತ್ರ ಎಂಬುದನ್ನೇ ಮರೆತು ತನ್ನ ದುಃಖಗಳನ್ನು ಹೇಳಿಕೊಳ್ಳುವ, ಅದನ್ನು ಭಾವನಾತ್ಮವಾಗಿ ಕಾಣುವ ರಂಗಗಳು ಮನಸ್ಸಿಗೆ ನಾಟುತ್ತವೆ.

ವೃದ್ಧಾಪ್ಯದಲ್ಲಿ ಮಕ್ಕಳ ಆಶ್ರಯಕ್ಕೆ ಹಪಹಪಿಸುವವರ ಯಾತನೆಯನ್ನು ಈ ಚಿತ್ರದಲ್ಲಿ ನಿರ್ದೇಶಕರು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ಭಾಸ್ಕರ ಪೊದುವಾಳ್ ಕಥೆಯ ಜೊತೆಗೆ ಅದೇ ಸ್ಥಿತಿಯಲ್ಲಿರುವ ಊರಿನ ಇತರ ಜನರ ಬದುಕಿನ ಮೇಲೂ ಚಿತ್ರವು ಬೆಳಕು ಚೆಲ್ಲುತ್ತದೆ.

ಯಂತ್ರಗಳು ಮಾನವನ ಬದುಕನ್ನು ಸರಳಗೊಳಿಸಿದರೂ ಸಂಬಂಧಗಳಿಗೆ ಬೆಲೆಕಟ್ಟಲಾಗದು ಎಂಬ ಸಂದೇಶವನ್ನೂ ಈ ಚಿತ್ರ ನೀಡುತ್ತದೆ. ವೃದ್ಧನ ಪಾತ್ರದಲ್ಲಿ ನಟಿಸಿರುವ ಸೂರಜ್ ವೆಂಞರಮೂಡು ಅನನ್ಯ ಅಭಿನಯ ನೀಡಿದ್ದಾರೆ. ಸೌಬಿನ್ ಶಾಹಿರ್, ಶೈಜು ಕುರುಪ್ಪ್, ಕೆಂಡಿ ಜಿರ್ಡೊ ಮತ್ತಿತರರು ಮುಖ್ಯ ಭೂಮಿಕೆಯಲ್ಲಿ‌ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT