ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ಇದ್ದೂ ಬದುಕು ಕಳೆದುಕೊಂಡವರ ಕಥೆ ‘ಆಂಗಿಕಂ

Last Updated 13 ಜೂನ್ 2019, 19:30 IST
ಅಕ್ಷರ ಗಾತ್ರ

ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ನಡುವೆ ಒಂಟಿ ಮನೆ. ಆ ಮನೆಯ ಒಡೆಯನಿಗೆ ನೂರಾರು ಕನಸುಗಳು. ಚೆಲುವೆಯನ್ನು ವರಿಸಿ ಮುದ್ದಾದ ಮಕ್ಕಳನ್ನು ಪಡೆದು, ಸುಖ ಸಂಸಾರ ಸಾಗಿಸುವ ತವಕ. ಆತ ಅಂದುಕೊಂಡಂತೆಯೇ ಮದುವೆ ಆಯಿತು, ಮಗನೂ ಹುಟ್ಟಿದ. ಆಗ ಆ ದಂಪತಿಯ ಖುಷಿಗೆ ಪಾರವೇ ಇರಲಿಲ್ಲ.

ದಿನಗಳು ಕಳೆಯುತ್ತಿದ್ದಂತೆ ಮಗನ ದೈಹಿಕ ಬೆಳವಣಿಗೆಯಲ್ಲಿ ಯಾವುದೇ ಬದಲಾವಣೆಗಳು ಕಂಡುಬರಲಿಲ್ಲ. ಕೇಳಿಸಿಕೊಳ್ಳಲು, ಮಾತನಾಡಲು ಸಾಧ್ಯವಾಗದ ಮಗನ ಸ್ಥಿತಿ ಕಂಡ ಆ ದಂಪತಿಗೆ ಆಕಾಶವೇ ಕಳಚಿ ಬಿದ್ದಂತಹ ಭಾವ. ಕಾಲ ಕಳೆದಂತೆ ಮತ್ತೊಂದು ಮಗುವೂ ಆಯ್ತು. ಅವನ ಮೇಲೆ ಭರವಸೆ ಇಟ್ಟ ದಂಪತಿಗೆ ನಿರಾಸೆ ಕಾದಿತ್ತು. ಆ ಮಗುವಿನ ಬೆಳವಣಿಗೆಯಲ್ಲೂ ಮತ್ತದೇ ಸಮಸ್ಯೆ. ಮಾತಿಲ್ಲ, ಕಥೆಯಿಲ್ಲ, ಭಾವ ಬಂಧವಿಲ್ಲ. ಜೀವವಿದ್ದೂ ನಿರ್ಜೀವಿಯಂತೆ.

‘ಎಂಡೋಸಲ್ಫಾನ್’ ಕ್ರಿಮಿನಾಶಕದ ಬಳುವಳಿಯಾಗಿ ಜನಿಸಿದವರೇ ಈ ಮಕ್ಕಳು. ಇಂತಹಮಕ್ಕಳ ಬದುಕು, ಬವಣೆಯನ್ನೇ ಆಧಾರವಾಗಿ ಇಟ್ಟುಕೊಂಡು ‘ಆಂಗಿಕಂ’ ಎಂಬ ಚಿತ್ರ ತೆರೆಗೆ ಬರುತ್ತಿದೆ.‘ಮಜಾಭಾರತ’ ಖ್ಯಾತಿಯ ಜಿ.ಚಂದ್ರಪ್ರಭಾ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಹೊಣೆಯನ್ನೂ ಹೊತ್ತಿದ್ದಾರೆ. ಅವರದ್ದೇ ‘ಎಂಡೋಸಲ್ಫಾನ್ ಮಹಾಮಾರಿ’ ಕೃತಿಯನ್ನು ಆಧರಿಸಿ ಈ ಚಿತ್ರವನ್ನು ತೆರೆಯ ಮೇಲೆ ತರುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಸಾವಿರಾರು ಮಕ್ಕಳು ಸಿಗುತ್ತಾರೆ. ನಡೆಯಲೂ ಆಗದ, ತೆವಳಲೂ ಆಗದ ಈ ಮಕ್ಕಳು ಶೂನ್ಯ ದೃಷ್ಟಿಯನ್ನು ಬೀರಿ ಕುಳಿತ ಅಲ್ಲಿನ ನೋಟಗಳು ಹೃದಯವನ್ನು ಹಿಂಡುತ್ತವೆ. 30 ದಾಟಿದರೂ ಹಸುಗೂಸುಗಳಂತೆ ಅಮ್ಮನನ್ನು ಆತುಕೊಂಡವರು, ಉಸಿರು ಎಳೆದುಕೊಳ್ಳಲಾಗದೆ ಏದುಸಿರು ಬಿಡುವವರು... ಎಂಡೋಸಲ್ಫಾನ್‌ ಮಾಡಿದ ಕಿತಾಪತಿಗೆ ಸಾಕ್ಷ್ಯ ನುಡಿಯುತ್ತಾ ಜೀವ ಹಿಡಿದಿದ್ದಾರೆ.

ಗೇರು ಮರದ ಕ್ರಿಮಿಕೀಟಗಳನ್ನು ನಾಶಪಡಿಸಲು ಈ ದ್ರಾವಣವನ್ನು ಹೆಲಿಕಾಪ್ಟರ್‌ಗಳ ಮೂಲಕ ಸಿಂಪಡಿಸಿದ್ದರಿಂದ ಪಶ್ಚಿಮ ಘಟ್ಟಗಳ ಈ ಅಸಾಮಾನ್ಯವಾದ ಪರಿಸರದ ಬಟ್ಟಲಿನಲ್ಲಿ ಸಾವಿರಾರು ಮಕ್ಕಳು ಜನ್ಮಜಾತವಾಗಿ ಅಂಗವೈಕಲ್ಯಕ್ಕೆ ಈಡಾದರೆ, ಅನೇಕರು ಚರ್ಮವ್ಯಾಧಿ, ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೆ ತುತ್ತಾಗಿ ಜೀವ ಬಿಟ್ಟಿದ್ದಾರೆ.

‘1980ರಿಂದ 2000ನೇ ಇಸವಿವರೆಗೆ ದಕ್ಷಿಣ ಕನ್ನಡ ಭಾಗದಲ್ಲಿ ಎಂಡೋಸಲ್ಫಾನ್ ಕ್ರಿಮಿನಾಶಕವನ್ನು ಸಿಂಪಡಿಸಲಾಗಿದೆ. ಆಗ ಆ ಭಾಗದ ಪರಿಸರ ವಿಷಮಯವಾಗಿದ್ದು, ಸಾವಿರಾರು ಮಕ್ಕಳು ಹಾಗೂ ವಯಸ್ಕರ ಮೇಲೆ ದುಷ್ಪರಿಣಾಮ ಬೀರಿದೆ. ಸಾವಿರಾರು ಕುಟುಂಬಗಳು ನಿರ್ಗತಿಕವಾಗಿವೆ. ಈ ಮಕ್ಕಳ ದಿನನಿತ್ಯದ ಬದುಕು ಹೇಗಿರುತ್ತದೆ, ಯಾವ ರೀತಿಯ ದಾರುಣ ಸ್ಥಿತಿ ಅನುಭವಿಸುತ್ತಿದ್ದಾರೆ ಎಂಬುದನ್ನು ಸಿನಿಮಾದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ’ ಎಂದು ಚಂದ್ರಪ್ರಭಾ ವಿವರಿಸುತ್ತಾರೆ.

‘ಎಂಡೋಸಲ್ಫಾನ್ ಪೀಡಿತ ಮಕ್ಕಳ ಕೈ, ಕಾಲುಗಳು ಸ್ವಾಧೀನದಲ್ಲಿ ಇರುವುದಿಲ್ಲ. ಬೌದ್ಧಿಕ ಬೆಳವಣಿಗೆಯಂತೂ ಮೊದಲೇ ಇಲ್ಲ. ಕುಳಿತಲ್ಲೇ ಊಟ, ತಿಂಡಿ ಕೊಡಬೇಕು. ಬಹಿರ್ದೆಸೆ, ಸ್ನಾನ ಹೀಗೆ... ದೈನಂದಿನ ಚಟುವಟಿಕೆಗಳಿಗಾಗಿ ಪರಾವಲಂಬನೆ ತಪ್ಪಿದ್ದಲ್ಲ. ಈ ಮಕ್ಕಳಿಗೆ ಜೀವವಿದೆ, ಆದರೆ ಬದುಕಿಲ್ಲ. ಇವರನ್ನು ನೋಡಿಕೊಳ್ಳುವ ಪೋಷಕರು ಕಣ್ಮುಚ್ಚಿದರೆ ಇವರಿಗೆ ದಿಕ್ಕು ಯಾರು’ ಎಂದು ಪ್ರಶ್ನಿಸುತ್ತಾರೆ.

ಎಂಡೋಸಲ್ಫಾನ್‌ ಕೀಟನಾಶಕ ಜಗತ್ತಿನ ಜೀವಜಾಲವನ್ನು ಕತ್ತರಿಸಿದ ಒಂದು ರೂಪಕ. ಈಗ ಸಂಪೂರ್ಣವಾಗಿ ನಿಷೇಧಗೊಂಡಿದೆ ನಿಜ. ಆದರೆ, ಈ ಮಾರಿಗೆ ಕೇರಳ ಹಾಗೂ ರಾಜ್ಯದ ಗಡಿ ಭಾಗದ ಬಡ ಜನರು, ಕೈ ಕಾಲೇಕೆ ಇಡೀ ದೇಹವನ್ನೇ ಕಳೆದುಕೊಂಡಿದ್ದಾರೆ. ಹಾಸನ, ಚಿಕ್ಕಮಗಳೂರಿನ ಸೀಮೆಯಲ್ಲಿ ಎಂಡೋಸಲ್ಫಾನ್‌ಗೆ ಕರೆಯೋದು ‘ಕೇರಳ ಔಷಧಿ’ ಎಂದು. ರೈತರು ಕೇರಳ ಔಷಧಿ ಹೊಡೆದರೆ ಶುಂಠಿ, ಆಲೂಗಡ್ಡೆ ಮುಂತಾದ ಬೆಳೆಗಳನ್ನು ಉಳಿಸಿಕೊಳ್ಳಬಹುದೆಂದು ತಂದು ಹೊಡೆಯುತ್ತಾರೆ. ಎಂಡೋಸಲ್ಫಾನ್‌ನ ಎಡವಟ್ಟುಗಳ ಬಗೆಗೆ ಎಲ್ಲೆಡೆ ಅರಿವು ಮೂಡಿಸುವ ಇರಾದೆ ನಿರ್ದೇಶಕರದ್ದು.

ಎಂಡೋಸಲ್ಫಾನ್ ಪೀಡಿತ ಮಕ್ಕಳಿಗೆ ಸರ್ಕಾರವು ಒಂದಷ್ಟು ಸವಲತ್ತು ನೀಡಿದ್ದರೂ ಅದು ಯಾವುದಕ್ಕೂ ಸಾಲದು. ಈ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಅವರು ಆಗ್ರಹಿಸುತ್ತಾರೆ.

ಈ ಚಿತ್ರದ ಮೂಹೂರ್ತ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಪಾಲ್ಗೊಂಡು ಶುಭ ಹಾರೈಸಿದ್ದಾರೆ. ಧರ್ಮಸ್ಥಳ, ಮುಡಾರ, ಮಂಗಳೂರು, ಕೋಲಾರ, ಮಂಡ್ಯ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.

ಈ ಚಿತ್ರದಲ್ಲಿ ಒಟ್ಟು 25 ಕಲಾವಿದರು ಅಭಿನಯಿಸಿದ್ದಾರೆ. ಈ ಪೈಕಿ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾದ ‘ಮಜಾಭಾರತ’ ಕಾಮಿಡಿ ಶೋ ಕಲಾವಿದರೇ ಹೆಚ್ಚಾಗಿದ್ದಾರೆ. ಈ ಶೋನ ನಿರೂಪಕರಾಗಿದ್ದ ನಿರಂಜನ್ ದೇಶಪಾಂಡೆ, ಕಲಾವಿದೆ ಭಾಗ್ಯಶ್ರೀ, ಅತೀಷಾ, ಆರಾಧನಾ, ಸೌರವ್, ಜಿನಪ್ರಸಾದ್, ಆದಿತ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮೈಸೂರಿನ ವಿಸ್ಮಯ ಕ್ರಿಯೇಷನ್ಸ್ ಬ್ಯಾನರ್‌ ಅಡಿಯಲ್ಲಿ ಹಾಲತಿ ಲೋಕೇಶ್ ಅವರು ಬಂಡವಾಳ ಹೂಡಿದ್ದಾರೆ. ಜಿನ ಪ್ರಸಾದ್ ಧರ್ಮಸ್ಥಳ ಅವರು ಸಹ ನಿರ್ಮಾಪಕರು. ಸಂಗೀತ ಅತೀಶ್‌ ಜೈನ್ ಅವರದು. ನಾಗರಾಜ್ ಮೂರ್ತಿ ಛಾಯಾಗ್ರಹಣ, ನಿಂಗರಾಜು ಎಣ್ಣೆಹೊಳೆಕೊಪ್ಪಲು ಸಹ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರೀಕರಣೋತ್ತರ ಕೆಲಸಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT