ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟನಾಗಿ ನಾನು ಸ್ವಾರ್ಥಿ: ಅನಿಲ್ ಕಪೂರ್

Last Updated 28 ನವೆಂಬರ್ 2019, 19:30 IST
ಅಕ್ಷರ ಗಾತ್ರ

‘ಪಲ್ಲವಿ ಅನುಪಲ್ಲವಿ’ ಸಿನಿಮಾ ಬಿಡುಗಡೆಯಾಗಿ ಮೂವತ್ತೈದು ವರ್ಷಗಳಾದವು. ಮತ್ತೊಂದು ಕನ್ನಡ ಚಿತ್ರದಲ್ಲಿ ನೀವು ನಟಿಸುವುದು ಯಾವಾಗ –ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಪ್ರಶ್ನೆ ಸಭಿಕರಿಂದ ತೂರಿಬಂತು. ಪ್ರಶ್ನೆ ಎದುರುಗೊಂಡ ಅನಿಲ್ ಕಪೂರ್ ಮಂದಸ್ಮಿತರಾಗಿದ್ದರು. ‘ಪಲ್ಲವಿ ಅನುಪಲ್ಲವಿ’ ಈಗಲೂ ಅವರ ಪಾಲಿಗೆ ಪುಳಕ.

‘ಕೆಲವು ತಿಂಗಳ ಹಿಂದೆ ಬೆಂಗಳೂರಿಗೆ ಹೋಗಿದ್ದೆ. ವೇದಿಕೆ ಮೇಲೆ ಆ ಸಿನಿಮಾದ ಹಾಡು ಹಾಡಿದೆ. ಪ್ರೇಕ್ಷಕರೂ ದನಿಗೂಡಿಸಿದರು. ಇಳಯರಾಜಾ ಕೊಟ್ಟ ಸ್ವರಗಳು ಇವತ್ತಿಗೂ ಜನಪ್ರಿಯ. ಮತ್ತೊಂದು ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ ಕನ್ನಡದಲ್ಲಿ ಅಭಿನಯಿಸಲು ನನಗೇನೂ ಅಭ್ಯಂತರವಿಲ್ಲ’ ಎಂದು ಅನಿಲ್ ಪ್ರತಿಕ್ರಿಯಿಸಿದರು.

ಇಂಥ ಸಂವಾದಕ್ಕೆ ಅವರೊಬ್ಬರೇ ತೆರೆದುಕೊಳ್ಳಲಿಲ್ಲ. ಅವರ ಪಕ್ಕದಲ್ಲಿ ಹಿಂದಿ ಸಿನಿಮಾ ನಿರ್ದೇಶಕ ಅನೀಸ್ ಬಜ್ಮಿ ಕೂಡ ಇದ್ದರು. ಪ್ರಶ್ನೆಗಳನ್ನು ಹಾಕುತ್ತಾ, ಕಚಗುಳಿ ಇಡುತ್ತಿದ್ದವರು ನಟಿ ಟಿಸ್ಕಾ ಚೋಪ್ರಾ.

ನಾಲ್ಕು ದಶಕ ಮೀರಿದ ಅನುಭವ ಅನಿಲ್ ಕಪೂರ್ ಅವರದ್ದು. ‘ಕಪೂರ್’ ಎಂಬ ಟ್ಯಾಗ್ ಅವರಿಗೆ ಮೊದಲು ಮುಳುವಾಗಿತ್ತಂತೆ. ಪೃಥ್ವಿರಾಜ್‌ ಕಪೂರ್, ರಾಜ್‌ಕಪೂರ್, ಶಮ್ಮಿ ಕಪೂರ್, ಶಶಿಕಪೂರ್ ಹೀಗೆ ಎಲ್ಲರೂ ದಿಗ್ಗಜರೇ. ಈಗ ರಣಬೀರ್ ಕಪೂರ್ ಅದೇ ಖಾಂದಾನಿನ ಅಭಿನಯದ ವರಸೆ ಮುಂದುವರಿಸಿದ್ದಾರೆ. ‘ಆ ಕಪೂರ್‌ಗಳಿಗೆ ಆನುವಂಶೀಯವಾಗಿ ವಿಶೇಷ ಪ್ರತಿಭೆ ಇದೆ. ನಾನು ಅಷ್ಟು ದೊಡ್ಡವನಲ್ಲ. ಹೀಗಾಗಿ ಆ ಟ್ಯಾಗ್ ಕಳಚಿಕೊಳ್ಳಬೇಕಿತ್ತು. ಅದಕ್ಕೇ ಎಂ.ಎಸ್. ಸತ್ಯು, ಮಣಿರತ್ನಂ, ಬಾಪು ತರಹದ ನಿರ್ದೇಶಕರ ಎದುರು ನಾನು ನಿಂತೆ. ಮೊದ ಮೊದಲು ಕಮರ್ಷಿಯಲ್ ಅಲ್ಲದ ಸಿನಿಮಾಗಳನ್ನು ಆರಿಸಿಕೊಂಡೆ. ನಾನು ದೊಡ್ಡ ನಟ ಆಗಕೂಡದು; ಪಾತ್ರದ ಮೂಲಕ ಗುರುತಾಗಬೇಕು ಎನ್ನುವುದು ಸಂಕಲ್ಪ. ಅದರಲ್ಲಿ ಯಶಸ್ವಿಯಾದೆ. ಆಮೇಲೆ ಕಮರ್ಷಿಯಲ್ ಸಿನಿಮಾ ಕಡೆ ಹೊರಳಿದೆ. ಈಗ ಸ್ವಲ್ಪ ಫಿಲ್ಮಿ ಆಗೋಣ ಎಂದು ಹೆಜ್ಜೆ ಇಟ್ಟೆ. ಕೆ. ವಿಶ್ವನಾಥ್ ತರಹದ ನಿರ್ದೇಶಕರು ಈಶ್ವರ್ ಪಾತ್ರ ಕೊಟ್ಟರು. ಆ ಪಾತ್ರದಾಳಕ್ಕೆ ಇಳಿದು, ಆತ್ಮದ ರಸ ಹೀರಿಕೊಂಡೆ. ಜನ ನನ್ನನ್ನು ಸದಾ ಪಾತ್ರಗಳ ಹೆಸರಿನಿಂದಲೇ ಗುರುತಿಸೋದು. ಎಲ್ಲಿಯೂ ಅನಿಲ್ ಕಪೂರ್ ಅನ್ನುವುದಿಲ್ಲ. ‘ಅದೋ ನೋಡು ಈಶ್ವರ್, ಮುನ್ನ...’ ಎನ್ನುತ್ತಾರಲ್ಲ ಆಗ ತುಂಬಾ ಸಂತೋಷವಾಗುತ್ತೆ’ –ಇದು ಅನಿಲ್ ಕಪೂರ್ ತಮ್ಮ ವೃತ್ತಿಬದುಕನ್ನು ಚುಟುಕಾಗಿ ಕಟ್ಟಿಕೊಟ್ಟ ಬಗೆ.

‘ಜನಪ್ರಿಯರಾದ ಮೇಲೆ ನಾವು ನಟ– ನಟಿಯರು ಸೋಮಾರಿಗಳಾಗುತ್ತೇವೆ’ ಎಂದು ಅಮೀರ್ ಖಾನ್ ಹಿಂದೊಮ್ಮೆ ಆತ್ಮವಿಮರ್ಶೆ ಮಾಡಿಕೊಂಡಿದ್ದನ್ನು ಟಿಸ್ಕಾ ನೆನಪಿಸಿದರು. ಅದಕ್ಕೆ ಅನಿಲ್ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು: ‘ಅಮೀರ್ ಸೋಮಾರಿ ಅಲ್ಲವೇ ಅಲ್ಲ. ಹಾಗೆ ಹೇಳುವ ಮೂಲಕ ಅವರು ಉಳಿದವರನ್ನು ಸೋಮಾರಿಗಳಾಗಿಸಿ, ತಾವು ಇನ್ನೂ ಒಳ್ಳೆ ಕೆಲಸ ಮಾಡುತ್ತಾರೆ. ಅದು ಅವರ ತಂತ್ರ. ಒಮ್ಮೆ ವಿಮಾನದಲ್ಲಿ ಸಾಗುವಾಗ ಸಲ್ಮಾನ್ ಖಾನ್ ಏನೇನೋ ತರಿಸಿಕೊಂಡು ತಿನ್ನುತ್ತಾ ಕುಡಿಯುತ್ತಾ ಕೂತಿದ್ದರು. ಅದನ್ನು ನೋಡಿ ಪ್ರಭಾವಿತರಾಗಿ ನಾವೂ ಹಾಗೆ ಮಾಡಿದರೆ ಮುಗಿಯಿತು. ಅವರು ವರ್ಷದಲ್ಲಿ ಎಂದೋ ಒಮ್ಮೆ ಹಾಗೆ ಮಾಡಿರುತ್ತಾರೆ ಎಂಬ ಅರಿವು ನಮಗಿರಬೇಕು’ (ಕಣ್ಣು ಮಿಟುಕಿಸಿದರು).

ಅನಿಲ್ ತಮ್ಮನ್ನು ತಾವೇ ಸ್ವಾರ್ಥಿ ನಟ ಎಂದು ಹೇಳಿಕೊಳ್ಳುತ್ತಾರೆ. ಅವರು ನಡುರಾತ್ರಿ ಚಿತ್ರೀಕರಣ ನಡೆದ ಸಂದರ್ಭದಲ್ಲಿ ಟಿಸ್ಕಾ ಚೋಪ್ರಾ ಕೊಟ್ಟ ಅರ್ಧ ಬಿಸ್ಕತ್ತನ್ನು ನಿರಾಕರಿಸಿದ್ದವರು. ಕ್ಯಾಲೋರಿ ಹೆಚ್ಚಾದೀತೆಂಬ ಪ್ರಜ್ಞೆಯಿಂದ ಹಾಗೆ ಮಾಡಿದ್ದಲ್ಲವಂತೆ. ಚಿತ್ರೀಕರಣದಲ್ಲಿ ಮನಸ್ಸು ನೆಟ್ಟಿರುವಾಗ ಅದು ಅತ್ತಿತ್ತ ವಾಲಕೂಡದು ಎನ್ನುವ ಎಚ್ಚರವಷ್ಟೆ.

ಒಬ್ಬ ನಿರ್ದೇಶಕರನ್ನು ನಟ ತೃಪ್ತಿ ಪಡಿಸುವುದು ಹೇಗೆ ಎಂಬ ಇನ್ನೊಂದು ಪ್ರಶ್ನೆ. ‘ಒಂದಾದ ಮೇಲೆ ಒಂದರಂತೆ ಟೇಕ್ ಕೊಡುತ್ತಾ ಹೋಗಿ. ಇನ್ನೂ ಬೇಕಾ ಎಂದು ಪ್ರಶ್ನೆ ಹಾಕಿ. ನೀವು ಸುಸ್ತಾಗುತ್ತಿಲ್ಲ ಎನ್ನುವುದು ಅವರಿಗೆ ಗೊತ್ತಾದರೆ ಅವರೇ ಸುಮ್ಮನಾಗಿಬಿಡುತ್ತಾರೆ’ ಎನ್ನುತ್ತಾ ಅನಿಲ್ ಉತ್ತರಿಸಿದರು.

ಒಂದು ಹಾಡು ಬರಲಿ ಎಂಬ ಪ್ರೇಕ್ಷಕರ ಒತ್ತಾಯಕ್ಕೆ ಅವರು ಕೊನೆಗೂ ಮಣಿಯಲೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT