ಶನಿವಾರ, ಜುಲೈ 31, 2021
28 °C

ಅಣ್ಣಾವ್ರ ನೆನಪುಗಳು.. | ‘ಆಕಸ್ಮಿಕ‘ವೇ ಸುಂದರ ನೆನಪು..

ಟಿ.ಎಸ್‌. ನಾಗಾಭರಣ Updated:

ಅಕ್ಷರ ಗಾತ್ರ : | |

‘ಆಕಸ್ಮಿಕ’ ಸಿನಿಮಾಕ್ಕೆ 27 ವರ್ಷ ತುಂಬಿದೆ. ಆಕಸ್ಮಿಕ ಕಾದಂಬರಿ ಕತೃ ತರಾಸು ಅವರ ಜನ್ಮಶತಮಾನೋತ್ಸವ ವರ್ಷ ಇದು. ಇಂದು ವರನಟ ರಾಜ್‌ಕುಮಾರ್ ಅವರ‌ ಹುಟ್ಟುಹಬ್ಬ. ಎರಡೂವರೆ ದಶಕಗಳ ಹಿಂದೆ ಅಣ್ಣಾವ್ರ ಜತೆಗೆ ಒಡನಾಡಿದ ನೆನಪುಗಳು ಮನದಲ್ಲಿ ಈಗಲೂ ಹಸಿರಾಗಿವೆ..

‘ಅಣ್ಣಾವ್ರು’ ಮತ್ತು ‘ಆಕಸ್ಮಿಕ’ ನನಗೆ ಒದಗಿಬಂದಿದ್ದು ಎರಡೂ ‘ಆಕಸ್ಮಿಕ’. ಇಡೀ ಸಿನಿಮಾ ಒಂದು ಆಕಸ್ಮಿಕ ಎನ್ನಿ. ನಾನು ‘ಆಕಸ್ಮಿಕ‘ ಸಿನಿಮಾ ಕಥೆ ಹೇಳಲು ಹೋಗಿದ್ದು ಶಿವರಾಜ್‌ ಕುಮಾರ್‌ ಅವರಿಗೆ. ಅದಕ್ಕೆ ಒಪ್ಪಿಗೆ ನೀಡಬೇಕಾಗಿದ್ದಿದ್ದು ರಾಜ್‌ಕುಮಾರ್‌ ಹಾಗೂ ವರದರಾಜ್‌ ಅವರು. ಇಡೀ ಕತೆ ಕೇಳಿದ ಮೇಲೆ ‘ಇದು ಅಣ್ಣಾವ್ರಿಗೆ ಸೂಕ್ತ. ಹಾಗಾಗಿ ಅಣ್ಣಾವ್ರೆ ಮಾಡ್ಲಿ’ ಎಂಬ ಅಭಿಪ್ರಾಯ ಬಂತು. ನನಗೆ ದಿಗ್ಭ್ರಮೆಯಯಿತು. ಆ ಪಾತ್ರವನ್ನು ಅಣ್ಣಾವ್ರಿಗೆ ಸಮೀಕರಣ ಮಾಡಲು ನನಗೆ ಒಂದು ತಿಂಗಳು ಬೇಕಾಯಿತು. ನನ್ನ ಬಾಳಿನ ಅದ್ಭುತ ಆಕಸ್ಮಿಕ ಅದುವೇ.

ಈ ಸಿನಿಮಾದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಈಗ ಅಘೋಷಿತ ನಾಡಗೀತೆಯಾಗಿದೆ. ಸಿನಿಮಾದ ಪ್ರತಿ ಹಾಡಿಗೂ, ಪ್ರತಿ ಸೀನ್‌ಗೂ ಅದರದ್ದೇ ಇತಿಹಾಸವಿದೆ. ಆ ಇಡೀ ಹಾಡಿನಲ್ಲಿ ಅಣ್ಣಾವ್ರು ತೊಡಗಿಸಿಕೊಂಡಿದ್ದ ರೀತಿ, ಅವರ ಬದ್ಧತೆ, ತನ್ಮಯತೆ, ಮಾನವೀಯತೆ.. ಓಹ್‌.. ಆ ನೆನಪೇ ಅದ್ಭುತ. ಅವರು ನಿಜಕ್ಕೂ ನಿರ್ದೇಶಕನ ನಟ. ಇಂಥ ಮೇರು ನಟ ಚಿತ್ರೀಕರಣದಲ್ಲಿ ಒಂದು ಬಾರಿಯೂ ‘ಈ ಡೈಲಾಗ್‌ ಯಾಕೆ? ಈ ಸೀನ್‌ ಯಾಕೆ?’ ಎಂದು ಕೇಳಲಿಲ್ಲ. ನಿರ್ದೇಶಕ ಹೇಳೊದನ್ನ ಮಾಡುವುದಕ್ಕೆ ಅವರು ತಯಾರು. ಆಕಸ್ಮಾತ್‌ ಆ್ಯಕ್ಷನ್‌ ಕಟ್‌ ಹೇಳಲು ನಾನು 2–3 ಸೆಕೆಂಡ್‌ ತೆಗೆದುಕೊಂಡರೂ, ತಕ್ಷಣ ಇನ್ನೊಂದು ‘ಟೇಕ್‌ ಬೇಕಾ‘ ಎಂದು ಕೇಳುತ್ತಿದ್ದರು. ಅಷ್ಟೊಂದು ನಿಗರ್ವಿ.


ಅನುಗ್ರಹ ಪ್ರಕಾಶನ:  ಟಿ.ಎಸ್.ನಾಗಭರಣ

ಕುಟುಂಬ ಸಮೇತ ನೋಡುವಂತೆ ಸಿನಿಮಾ ತೆಗೆಯಬೇಕೆಂದು ಬಯಸುತ್ತಿದ್ದರು ಅಣ್ಣಾವ್ರು. ‘ಮಕ್ಕಳು ನೋಡುತ್ತಾರೆ, ಅವರಿಗೆ ನೋವಾಗಬಾರದು, ಹೆಣ್ಣುಮಕ್ಕಳು ನೋಡುತ್ತಾರೆ, ಅವರಿಗೆ ಮುಜುಗರ ಆಗಬಾರದು’ ಎಂದು ಹೇಳುತ್ತಿದ್ದರು. ಮನರಂಜನೆ ಮಾಧ್ಯಮ ಸಮಾಜವನ್ನು ಪರಿವರ್ತಿಸಬಹುದು ಎಂದಾದರೆ ಅದು ಅಣ್ಣಾವ್ರರಂತಹವರಿಂದ ಸಾಧ್ಯವಾಗಿತ್ತು. ಅವರ ಸಿನಿಮಾದಲ್ಲಿ ಪ್ರೀತಿ, ಸಮಾಜ, ಸಂಬಂಧ, ಚಿಂತನೆ, ಮಾನವೀಯ ಗುಣಗಳೇ ಮುಖ್ಯವಾಗುತ್ತಿತ್ತು. ಅವರ ಆ ಗುಣದಿಂದಲೇ ‘ಆಕಸ್ಮಿಕ’ದಂತಹ ಸಿನಿಮಾಗಳು ಮೂಡಿಬರಲು ಕಾರಣವಾಯಿತು.

(ನಿರೂಪಣೆ: ಸುಮನಾ ಕೆ.)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು