ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ‘ತನಿಖೆ’ ಬಿಡುಗಡೆ

Last Updated 17 ಡಿಸೆಂಬರ್ 2020, 7:08 IST
ಅಕ್ಷರ ಗಾತ್ರ

ಎರಡೂವರೆ ದಶಕಗಳ ಹಿಂದೆ ‘ತನಿಖೆ’ ಚಿತ್ರ ತೆರೆಕಂಡಿತ್ತು. ಈಗ ಅದೇ ಹೆಸರಿನ ಮತ್ತೊಂದು ‘ತನಿಖೆ’ ಇದೇ ಶುಕ್ರವಾರ ರಾಜ್ಯದಾದ್ಯಂತ ಸುಮಾರು 50 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಜಿ.ಎಸ್. ಕಲಿಗೌಡ ಈ ಚಿತ್ರದ ನಿರ್ದೇಶನ, ನಿರ್ಮಾಣದ ಜೊತೆಗೆ ಸಾಹಿತ್ಯ ಕೂಡ ರಚಿಸಿದ್ದಾರೆ. ಕನಕಪುರದಲ್ಲಿ ಕೆಲ ವರ್ಷಗಳ ಹಿಂದೆ ನಡೆದಿದ್ದ ನೈಜ ಘಟನೆ ಆಧರಿಸಿ ‘ತನಿಖೆ’ಗೆ ಕಥಾಹಂದರ ಹೆಣೆದಿರುವ ಕಲಿಗೌಡ, ಹಳ್ಳಿಯ ಆರು ಜನ ಸ್ನೇಹಿತರು ಹಾಗೂ ಯುವತಿಯೊಬ್ಬಳ ನಡುವೆ ನಡೆಯುವ ಘಟನೆಗಳ ಕಥೆಯನ್ನು ಪ್ರೇಕ್ಷಕರಿಗೆ ಹೇಳಲು ಹೊರಟಿದ್ದಾರೆ.

ಪ್ರೀತಿಯ ವಿಚಾರಕ್ಕೆ ಸ್ನೇಹಿತರಲ್ಲೇ ಮನಸ್ತಾಪ ಉಂಟಾಗುತ್ತದೆ. ಅದೇ ಸಮಯಕ್ಕೆ ಆ ಸ್ನೇಹಿತರಲ್ಲಿ ಒಬ್ಬನ ಕೊಲೆಯಾಗುತ್ತದೆ. ಈ ಕಾರಣಕ್ಕೆ ಉಳಿದ ಐವರು ಸ್ನೇಹಿತರು ಊರು ಬಿಡುತ್ತಾರೆ. ಆರಂಭದಿಂದಲೂ ಪ್ರೇಕ್ಷಕರ ಮನದಲ್ಲಿ ಮೂಡುವ ಎಲ್ಲ ಪ್ರಶ್ನೆಗಳಿಗೆ ಚಿತ್ರದ ಕ್ಲೈಮ್ಯಾ‌ಕ್ಸ್‌ನಲ್ಲಿ ಉತ್ತರ ಸಿಗಲಿದೆ.

ಈ ಚಿತ್ರದಲ್ಲಿ ನವೀನ್ ಸಜ್ಜು ಹಾಡಿರುವ ‘ಎಣ್ಣಿ ಹೊಡಿಯೋದ, ಹೆಂಡ್ತಿ ಬಿಡೋದ’ ಎಂಬ ಮಾಸ್ ಹಾಡು ಕೋವಿಡ್‌ ಲಾಕ್ ಡೌನ್ ಸಮಯದಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಆರ್.ಡಿ. ಅನಿಲ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಹೊಸ ಎಂಟ್ರಿ ಕೊಟ್ಟಿದ್ದಾರೆ. ಜತೆಗೆ ಈ ಚಿತಕ್ಕೆ ಬಂಡವಾಳವನ್ನೂ ಹೂಡಿದ್ದಾರೆ.

ಚಿತ್ರದ ನಾಯಕಿ ಚಂದನ ಅವರದು ಹೈಸ್ಕೂಲ್ ಹುಡುಗಿಯ ಪಾತ್ರ. ಸಂತೋಷ್, ವಿಜಯಕುಮಾರ್, ಮಚ್ ಮುನಿರಾಜು, ಗುಲ್‌ಷನ್, ನಿಖಿತ್, ರವಿ, ಕಲ್ಕೆರೆ ಗಂಗಾಧರ್, ಗೋಪಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮೈಸೂರು, ಪಾಂಡವಪುರ, ಕನಕಪುರ, ರಾಮನಗರ ಮತ್ತು ಚನ್ನಪಟ್ಟಣ ಸುತ್ತಮುತ್ತ ಚಿತ್ರೀಕರಣ ನಡೆದಿದೆ.

ಕ್ರಿಸ್ಟೋಫರ್ ಲೀ ಅವರ ಸಂಗೀತವಿರುವ ನಾಲ್ಕು ಹಾಡುಗಳಿಗೆ ಸಂತೋಷ್ ವೆಂಕಿ, ಚಿಂತನ್ ವಿಕಾಸ್, ನವೀನ್ ಸಜ್ಜು, ವಾಣಿ ಹರಿಕೃಷ್ಣ ದನಿಯಾಗಿದ್ದಾರೆ. ಶ್ಯಾಮ್ ಸಿಂಧನೂರು ಅವರ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT