ನಂಬಿಕೆ, ಕನಸಿನ ಸುತ್ತ ‘ಅನುಕ್ತ’ ಪಯಣ

7

ನಂಬಿಕೆ, ಕನಸಿನ ಸುತ್ತ ‘ಅನುಕ್ತ’ ಪಯಣ

Published:
Updated:
Deccan Herald

ತೊಟ್ಟಿಲಲ್ಲಿ ತೂಗುವ ಪುಟ್ಟ ಕಂದನಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕನಸಿನ ಲೋಕದಲ್ಲಿ ವಿಹರಿಸುತ್ತಾರೆ. ಬೆಳಗಿನ ಜಾವದಲ್ಲಿ ಬೀಳುವ ಕನಸು ನನಸಾಗುತ್ತದೆ ಎಂಬ ನಂಬಿಕೆ ಇದೆ. ಕನಸಿನ ಹಿಂದೆ ಒಂದು ಅರ್ಥವೂ ಇರುತ್ತದೆ ಎನ್ನುತ್ತಾರೆ ಕೆಲವರು. ಕನಸುಗಳು ಏಕೆ ಬೀಳುತ್ತವೆ ಎಂಬ ತಲೆಕೆಡಿಸಿಕೊಂಡವರು ಇದ್ದಾರೆ. ‘ಅನುಕ್ತ’ ಚಿತ್ರದಲ್ಲಿ ನಂಬಿಕೆ, ಕನಸಿನ ಸುತ್ತ ಕಥೆ ಹೆಣೆಯಲಾಗಿದೆ.

ಅಶ್ವಥ್‌ ಸ್ಯಾಮ್ಯುಯೆಲ್‌ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಇದು ಹೊಸ ಪತ್ತೇದಾರಿ ಸಸ್ಪೆನ್ಸ್‌, ಥ್ರಿಲ್ಲರ್ ಅನುಭವ ಕೊಡುತ್ತದೆ ಎನ್ನುತ್ತಾರೆ ನಿರ್ದೇಶಕರು.

‘ಕರಾವಳಿಯ ಧಾರ್ಮಿಕ ಆಚರಣೆಯಾದ ಭೂತಾರಾಧನೆಯ ಶಕ್ತಿ ಅನ್ಯಾಯ ನಡೆದಾಗ ನ್ಯಾಯ ದೊರೆಕಿಸಿಕೊಡುತ್ತದೆ. ನಂಬಿಕೆಯೊಂದು ಕನಸಿಗೆ ಹೇಗೆ ತಳಕು ಹಾಕಿಕೊಳ್ಳುತ್ತದೆ ಎನ್ನುವ ಬಗ್ಗೆ ಚಿತ್ರದಲ್ಲಿ ಹೇಳಲಾಗಿದೆ’ ಎಂದರು ಅಶ್ವಥ್‌ ಸ್ಯಾಮ್ಯುಯೆಲ್.

ಇ‍ಪ್ಪತ್ತೆಂಟು ದಿನಗಳ ಕಾಲ ಬೆಂಗಳೂರು ಮತ್ತು ಕರಾವಳಿ ಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಎರಡು ಪ್ರದೇಶಗಳಿಗೂ ಕಥೆ ಸಂಬಂಧಿಸಿದೆಯಂತೆ. ನೋಡುಗರಿಗೆ ರೋಚಕ ಅನುಭವ ನೀಡಲಿದೆ ಎನ್ನುವುದು ಚಿತ್ರತಂಡದ ಹೇಳಿಕೆ.

ಶ್ರೀಹರಿ ಬಂಗೇರ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ದೇಶಕರಿಗೆ ತುಳು ಭಾಷೆಯಲ್ಲಿ ಈ ಚಿತ್ರ ನಿರ್ಮಿಸುವ ಗುರಿ ಇತ್ತಂತೆ. ಆದರೆ, ಕಥೆಯ ಒಂದು ಎಳೆ ಕೇಳಿದ ನಿರ್ಮಾಪಕರು ಕನ್ನಡದಲ್ಲಿಯೇ ಈ ಸಿನಿಮಾ ಮಾಡಲು ನಿರ್ಧಾರ ಕೈಗೊಂಡರಂತೆ. ಸುದ್ದಿಗೋಷ್ಠಿಯಲ್ಲಿ ಇದನ್ನು ಅವರೇ ಬಹಿರಂಗಪಡಿಸಿದರು.

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ನೊಬಿನ್ ಪಾಲ್ ಸಂಗೀತ ಸಂಯೋಜಿಸಿದ್ದಾರೆ. ಮನೋಹರ್‌ ಜೋಷಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಇದೇ ಹದಿನೈದರಂದು ಚಿತ್ರದ ಟ್ರೇಲರ್‌ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ. ತಿಂಗಳಾಂತ್ಯಕ್ಕೆ ದುಬೈನಲ್ಲಿ ಆಡಿಯೊ ಬಿಡುಗಡೆ ಮಾಡಲು ನಿರ್ಧರಿಸಿದೆ.

ಕಾರ್ತಿಕ್ ಅತ್ತಾವರ್, ಸಂಗೀತಾ ಭಟ್, ಸಂಪತ್‌ರಾಜ್, ಅನು ಪ್ರಭಾಕರ್ ಮುಖರ್ಜಿ, ಕೆ.ಎಸ್‌. ಶ್ರೀಧರ್, ಉಷಾ ಭಂಡಾರಿ, ಚಿದಾನಂದ ಪೂಜಾರಿ, ಅನಿಲ್‌ ನೀನಾಸಂ ತಾರಾಗಣದಲ್ಲಿದ್ದಾರೆ. 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !