ಅರಬ್ಬಿ ತೀರದ ಸೈಕೋ

ಸೋಮವಾರ, ಮಾರ್ಚ್ 25, 2019
31 °C

ಅರಬ್ಬಿ ತೀರದ ಸೈಕೋ

Published:
Updated:
Prajavani

‘ಹಲವು ವರ್ಷದ ಬಳಿಕ ಮತ್ತೆ ಬಣ್ಣ ಹಚ್ಚಿದ್ದೇನೆ. ಈ ಸಿನಿಮಾ ನನಗೆ ಚಿತ್ರರಂಗದಲ್ಲಿ ದೊಡ್ಡ ಬ್ರೇಕ್‌ ನೀಡಲಿದೆ’ 

–ಹೀಗೆಂದು ಮಾತಿಗೆ ಶುರುವಿಟ್ಟುಕೊಂಡರು ನಿರ್ಮಾಪಕ ಕೃಷ್ಣೇಗೌಡ. ಅವರು ನಾಯಕ ನಟನಾಗಿ ನಟಿಸಿರುವ ‘ಅರಬ್ಬೀ ಕಡಲು ತೀರದಲ್ಲಿ’ ಚಿತ್ರ ಇದೇ ಶುಕ್ರವಾರ ತೆರೆಕಾಣುತ್ತಿದೆ.

ಅಂದಹಾಗೆ ಚಿತ್ರದಲ್ಲಿ ಅವರದು ಸೈಕೋ ಪಾತ್ರವಂತೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ನೈಜ ಘಟನೆ ಇಟ್ಟುಕೊಂಡು ಚಿತ್ರಕಥೆ ಹೊಸೆಯಲಾಗಿದೆಯಂತೆ. ಯಥಾವತ್ತಾಗಿ ಘಟನೆಯನ್ನು ದೃಶ್ಯರೂಪಕ್ಕಿಳಿಸಿಲ್ಲ. ಅದಕ್ಕೆ ಸಿನಿಮ್ಯಾಟಿಕ್‌ ಸ್ಪರ್ಶ ನೀಡಲಾಗಿದೆ ಎಂದು ಸ್ಪಷ್ಟನೆಯನ್ನೂ ನೀಡಿದರು.

ಇದೇ ವೇಳೆ ಚಿತ್ರದ ಟ್ರೇಲರ್‌ನಲ್ಲಿ ಶುಶ್ರೂಷಕರ ಬಗ್ಗೆ ಅವರು ಬಳಸಿರುವ ಭಾಷೆಯೂ ಚರ್ಚೆಗೆ ಗ್ರಾಸವಾಯಿತು. ಪಾತ್ರಕ್ಕೆ ತಕ್ಕಂತೆ ಆ ಮಾತು ಬರುತ್ತದೆ ಅಷ್ಟೇ ಎಂಬ ಸಮಜಾಯಿಷಿ ನೀಡಲು ಮುಂದಾದರು. ಕೊನೆಗೆ, ‘ನನಗೆ ಎಲ್ಲಾ ವೃತ್ತಿಗಳ ಬಗ್ಗೆಯೂ ಗೌರವವಿದೆ. ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಸಿನಿಮಾಕ್ಕೆ ಯು/ಎ ಪ್ರಮಾಣಪತ್ರ ನೀಡಿದೆ. ಯಾರೊಬ್ಬರನ್ನು ನೋಯಿಸುವ ಮನಸ್ಸಿಲ್ಲ. ಮತ್ತೊಮ್ಮೆ ಸಿನಿಮಾ ವೀಕ್ಷಿಸಿದ ಬಳಿಕ ಆ ಪದ ತೆಗೆಯುವ ಬಗ್ಗೆ ಚಿಂತಿಸುತ್ತೇನೆ’ ಎಂದು ವಿವರಿಸಿದರು.

ಮಾಡೆಲಿಂಗ್‌ ಛಾಯಾಗ್ರಹಣದಲ್ಲಿ ಬದುಕು ಕಟ್ಟಿಕೊಳ್ಳಲು ಯತ್ನಿಸುವ ಯುವಕನೊಬ್ಬನ ಕಥೆ ಇದು. ರೂಪದರ್ಶಿಯೊಬ್ಬಳ ಮೇಲೆ ಅವನಿಗೆ ಮನಸ್ಸಾಗುತ್ತದೆ. ಆಕೆಯನ್ನು ಮದುವೆಯಾಗಿ ಕೊಲೆ ಮಾಡುತ್ತಾನೆ. ಕೊನೆಗೆ, ಆತನ ಬದುಕಿನಲ್ಲಿ ಏನಾಗುತ್ತದೆ ಎನ್ನುವುದೇ ಕಥೆಯ ತಿರುಳು. 

ವಿ. ಉಮಾಕಾಂತ್‌ ನಿರ್ದೇಶನದ 16ನೇ ಸಿನಿಮಾ ಇದು. ಪ್ರೀತಿ, ಪ್ರೇಮ, ಹಾಸ್ಯ, ಕೌಟುಂಬಿಕ ಕಥನದ ಚಿತ್ರ ನಿರ್ದೇಶಿಸಿದ್ದ ಅವರು ಮೊದಲ ಬಾರಿಗೆ ಸಸ್ಪೆನ್ಸ್‌, ಥ್ರಿಲ್ಲರ್‌ ಜಾಡಿಗೆ ಹೊರಳಿದ್ದಾರೆ. ‘ಕೀಟ, ಕಪ್ಪೆ, ಹಾವು, ಹದ್ದಿನ ಆಹಾರದ ಸರಪಳಿಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದು ಪ್ರಕೃತಿ ಸಹಜ ಪ್ರಕ್ರಿಯೆ. ಈ ಸ್ವಭಾವ ಮನುಷ್ಯನಲ್ಲೂ ಇರುತ್ತದೆ. ಇದು ವಿಕೃತ ಸ್ವಭಾವ. ಚಿತ್ರದಲ್ಲಿ ಇದನ್ನೇ ಹೇಳಿದ್ದೇವೆ’ ಎಂದರು.

ವೈಷ್ಣವಿ ಮೆನನ್‌ ಈ ಚಿತ್ರದ ನಾಯಕಿ. ಏಕಕಾಲಕ್ಕೆ ಅವರು ನರ್ಸ್‌ ಮತ್ತು ಯುವ ಪರ್ತಕರ್ತೆಯಾಗಿ ಕಾಣಿಸಿಕೊಂಡಿದ್ದಾರಂತೆ. ಆದರೆ, ಅವರ ಪಾತ್ರವೇನು ಎನ್ನುವುದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು ಎಂದು ಕುತೂಹಲ ಮೂಡಿದರು.

ರಂಜಿತಾ ರಾವ್‌ ಈ ಚಿತ್ರದ ಮತ್ತೊಬ್ಬ ನಾಯಕಿ. ಇದರ ಮೂಲಕ ಅವರು ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ಎಂ.ಆರ್‌. ಸೀನು ಅವರ ಛಾಯಾಗ್ರಹಣವಿದೆ. ಎ.ಟಿ. ರವೀಶ್‌ ಸಂಗೀತ ಸಂಯೋಜಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !