12 ಗಂಟೆಯಲ್ಲಿ 50 ಲಕ್ಷ ಜನ ನೋಡಿದರು!

7

12 ಗಂಟೆಯಲ್ಲಿ 50 ಲಕ್ಷ ಜನ ನೋಡಿದರು!

Published:
Updated:
Deccan Herald

ಬೆಂಕಿ ಕೆಂಡ ಗಂಟಲಲ್ಲಿ ಇಳಿದರೆ ಹೇಗಿರುತ್ತೆ ಗೊತ್ತಾ?

ಮಚ್ಚೆಗಳುಳ್ಳ ಹುಲಿ ಮುಖದ ಮೇಲೆ ಗರ್ಜಿಸಿದರೆ ಹೇಗಿರುತ್ತೆ ಗೊತ್ತಾ?

ಮರಳು ತುಫಾನು ಕಿವಿಯ ಬಳಿ ಆರ್ಭಟಿಸಿದರೆ ಹೇಗಿರುತ್ತೆ ಗೊತ್ತಾ?

ಜೂನಿಯರ್ ಎನ್‌ಟಿಆರ್ ನಾಯಕನಟನಾಗಿ ಅಭಿನಯಿಸಿರುವ ಮತ್ತು ಮಾತಿನ ಮಾಂತ್ರಿಕ ತ್ರಿವಿಕ್ರಮ್‌ ನಿರ್ದೇಶನದಲ್ಲಿ ಮೂಡಿ ಬಂದ ‘ಅರವಿಂದ ಸಮೇತ ವೀರ ರಾಘವ’ ಚಿತ್ರದ ಟೀಸರ್‌ನಲ್ಲಿ ಆರ್ಭಟಿಸಿದ ಚಿತ್ರದ ಸಂಭಾಷಣೆಯ ತುಣುಕುಗಳಿವು. ತಮ್ಮ ಚತುರ ಸಂಭಾಷಣೆಯ ಮೂಲಕವೇ ಪ್ರೇಕ್ಷಕರ ಮನ ಗೆಲ್ಲುವ ಕಲೆಯನ್ನು ಕರಗತ ಮಾಡಿಕೊಂಡಿರುವ ತ್ರಿವಿಕ್ರಮ್‌ ಚಿತ್ರದಲ್ಲಿ ನಾಯಕನನ್ನು ಈ ಪರಿಯಾಗಿ ವರ್ಣಿಸಿದ್ದಾರೆ. 

ತ್ರಿವಿಕ್ರಮ್‌ ಮತ್ತು ಎನ್‌ಟಿಆರ್ ಜೋಡಿ ಇದೇ ಮೊದಲ ಬಾರಿಗೆ ಈ ಚಿತ್ರದ ಮೂಲಕ ಬರುತ್ತಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆಗಳು ಗರಿಗೆದರಿವೆ. ಆಗಸ್ಟ್‌ನಲ್ಲಿ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಕೇವಲ 1 ಗಂಟೆಯಲ್ಲಿ 15 ಲಕ್ಷ ಜನ ನೋಡಿ ಮೆಚ್ಚಿಕೊಂಡಿದ್ದು ದಾಖಲೆಯಾಗಿತ್ತು. ಈಚೆಗೆ ಬಿಡುಗಡೆಯಾದ ಚಿತ್ರದ ಟ್ರೈಲರ್ ಕೂಡ ಇದೇ ರೀತಿಯ ಮನ್ನಣೆ ಗಳಿಸಿದ್ದು ಕೇವಲ 12 ಗಂಟೆಯಲ್ಲಿ 50 ಲಕ್ಷ ಜನ ವೀಕ್ಷಿಸಿ ಮತ್ತೊಂದು ದಾಖಲೆ ನಿರ್ಮಾಣವಾಗಿದೆ. 

ಆಂಧ್ರಪ್ರದೇಶದ ರಾಯಲಸೀಮೆ ಪ್ರಾಂತ್ಯದ ಫ್ಯಾಕ್ಷನಿಸಂ ಕಥೆಯನ್ನಾಧರಿಸಿದ ಈ ಚಿತ್ರ ಇದೇ ದಸಾರಗೆ ತೆರೆಗೆ ಅಪ್ಪಳಿಸಲಿದೆ. ಸದಾ ದ್ವೇಷ–ವೈಷಮ್ಯಗಳಿಂದ ತತ್ತರಿಸುತ್ತಿರುವ ಈ ಭಾಗದವರ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವುದಷ್ಟೇ ಅಲ್ಲದೇ, ಅದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನೂ ಚಿತ್ರದಲ್ಲಿ ತ್ರಿವಿಕ್ರಮ್‌ ಮಾಡಿದಂತಿದೆ.

‘ತೊಡೆತಟ್ಟಿ ಜಗಳಕ್ಕೆ ನಿಲ್ಲುವವನಿಗಿಂತ, ಜಗಳವಾಗದಂತೆ ತಡೆಯುವವನೇ ನನ್ನ ದೃಷ್ಟಿಯಲ್ಲಿ ದೊಡ್ಡವನು’ ಎಂದು ಹೇಳುವ ಚಿತ್ರದ ನಾಯಕಿ ಪೂಜಾ ಹೆಗ್ಡೆ ಅವರ ಡೈಲಾಗ್‌ಗಳು ಚಿತ್ರದ ಒಟ್ಟಾರೆ ಸಾರವನ್ನೇ ಪ್ರತಿಬಿಂಬಿಸುತ್ತಿವೆ.

‘ಮೂವತ್ತು ವರ್ಷಗಳ ಹಿಂದೆ ನಿಮ್ಮ ತಾತ ಕತ್ತಿ ಎತ್ತಿದ್ದು ಅನಿವಾರ್ಯ. ಅದೇ ಕತ್ತಿಯನ್ನ ನಿಮ್ಮ ಅಪ್ಪನೂ ಹಿಡಿದನೆಂದರೆ ಅದು ವಾರಸತ್ವ. ಅದೇ ಕತ್ತಿಯನ್ನು ನೀನೂ ಝಳಪಿಸಿದರೆ ನಿನ್ನ ಗುಣವಾಗುತ್ತದೆ’ ಎಂದು ವೀರ ರಾಘವ (ಚಿತ್ರದ ನಾಯಕನ ಪಾತ್ರ) ಅಜ್ಜಿ ಹೇಳುವ ಡೈಲಾಗ್‌ಗಳು ಟ್ರೈಲರ್‌ಗೆ ಮುಕುಟಪ್ರಾಯವಾಗಿವೆ.

‘ನೂರು ಅಡಿ ಅಗೆದರೆ ನೀರು ಸಿಗುತ್ತದೆ ಎಂದು ಗೊತ್ತಿದ್ದರೂ 99 ಅಡಿವರೆಗೆ ಅಗೆದು ಸುಮ್ಮನಾಗುವವರಿಗೆ ಏನೆನ್ನುತ್ತಾರೆ. ನೂರು ಅಡಿಗಳು ಒಂದು ಅಡಿಗೆ ಸಮಾನವಾಗುತ್ತವೆ’ ಎಂದು ಎನ್‌ಟಿಆರ್ ಹೇಳಿದ ಡೈಲಾಗ್‌ ಅವರ ಅಭಿಮಾನಿಗಳು ಮತ್ತು ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಇರುವ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ. 

ಹೀಗೆ ಟ್ರೈಲರ್‌ನ ಪ್ರತಿಯೊಂದು ಮಾತುಗಳು ವೀಕ್ಷಕನನ್ನು ರೊಮಾಂಚನಗೊಳಿಸುತ್ತವೆ. ಚಿತ್ರ ಮೂಡಿಬಂದಿರುವ ರೀತಿಯೂ ಗಮನ ಸೆಳೆಯುತ್ತಿದೆ. ಟಾಲಿವುಡ್‌ನ ಹಾಸ್ಯನಟ ಸುನೀಲ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ನಟ ಜಗಪತಿಬಾಬು ಅವರು ಮತ್ತೊಮ್ಮೆ ಖಳನ ಖದರ್ ಹೇಗಿರುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಥಮನ್‌ ಎಸ್‌.ಎಸ್ ಅವರು ಸುಶ್ರಾವ್ಯವಾದ ಸಂಗೀತ ನೀಡಿದ್ದು, ಹಾಸಿನಿ ಆ್ಯಂಡ್ ಹಾರಿಕಾ ಬ್ಯಾನರ್‌ನಲ್ಲಿ ಎಸ್‌.ರಾಧಕೃಷ್ಣ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರ ಇದೇ 11ಕ್ಕೆ ಬಿಡುಗಡೆಯಾಗಲಿದೆ.

Tags: 

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 1

  Frustrated
 • 8

  Angry

Comments:

0 comments

Write the first review for this !