ಶುಕ್ರವಾರ, ಅಕ್ಟೋಬರ್ 18, 2019
20 °C

‘ಕಬೀರ್ ಸಿಂಗ್‌’ಗೆ ಅರ್ಜುನ್‌ ಕಪೂರ್‌ ಮೊದಲ ಆಯ್ಕೆ

Published:
Updated:
Prajavani

ಈ ವರ್ಷದ ಬಾಲಿವುಡ್‌ ಬಿಗ್‌ ಹಿಟ್‌ ‘ಕಬೀರ್ ಸಿಂಗ್‌’ ಸಿನಿಮಾದ ನಾಯಕನ ಪಾತ್ರಕ್ಕೆ ಮೊದಲ ಆಯ್ಕೆ ಅರ್ಜುನ್ ಕಪೂರ್‌ ಆಗಿದ್ದರು ಎಂಬ ಹೊಸ ಸಂಗತಿ ಈಗ ಸದ್ದು ಮಾಡುತ್ತಿದೆ.

‘ಕಬೀರ್ ಸಿಂಗ್‌ ಸಿನಿಮಾದ ನಿರ್ಮಾಪಕರು ನನ್ನನ್ನು ಭೇಟಿಯಾಗಿ ಈ ಚಿತ್ರದಲ್ಲಿ ನಟಿಸುವಂತೆ ಕೇಳಿದ್ದರು. ಸ್ಕ್ರಿಪ್ಟ್ ಬಗ್ಗೆಯೂ ಚರ್ಚೆಯಾಗಿತ್ತು. ನಾನು ಕತೆಯನ್ನೂ ಓದಿದ್ದೆ. ಆದರೆ ಈ ಸಿನಿಮಾವನ್ನು ಒಪ್ಪಿಕೊಳ್ಳುವ ಬಗ್ಗೆ ಇನ್ನೂ ಚಿಂತನೆ ನಡೆಸಿದ್ದೆ. ಅಷ್ಟರಲ್ಲಾಗಲೇ ಸಿನಿಮಾ ತಂಡದಿಂದ ಶಾಹಿದ್ ಕಪೂರ್ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಪ್ರಕಟಣೆ ಹೊರಬಿತ್ತು. ನಾನು ಇದನ್ನು ಹೆಚ್ಚು ತಲೆಕೆಡಿಸಿಕೊಳ್ಳದೇ ಸುಮ್ಮನಾದೆ’ ಎಂದು ಅರ್ಜುನ್ ಕಪೂರ್ ಹೇಳಿದ್ದಾರೆ.

‘ನಿರ್ದೇಶಕ ಸಂದೀಪ್‌ ರೆಡ್ಡಿ ವಾಂಗಾ ಅವರು ಮೊದಲೇ ಶಾಹಿದ್ ಜೊತೆ ಮಾತನಾಡಿ ಒಪ್ಪಿಸಿದ್ದರು. ಅವರ ಮೊದಲ ಆಯ್ಕೆ ಶಾಹಿದ್ ಅವರೇ ಆಗಿತ್ತು. ಇಂತಹ ಸಂದರ್ಭದಲ್ಲಿ ನಾನು ಮಾತನಾಡುವುದು ಸರಿಯಲ್ಲ ಎನಿಸಿತು’ ಎಂದು ಅರ್ಜುನ್ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

‘ನಿರ್ಮಾಪಕರಾದ ಮುರದ್ ಖೇತನಿ ಹಾಗೂ ಅಶ್ವಿನಿ ವಾರ್ದೆ ಅವರಿಗೆ ನನ್ನನ್ನು ಈ ಸಿನಿಮಾಕ್ಕಾಗಿ ಆಯ್ಕೆ ಮಾಡುವ ಬಯಕೆ ಇತ್ತು. ಆದರೆ ನಿರ್ದೇಶಕರ ಆಯ್ಕೆಯನ್ನು ಗೌರವಿಸಿ ಅವರು ಸುಮ್ಮನಾದರು. ಒಂದು ರೀತಿಯ ಹುಚ್ಚುತನ ಇರುವಂತಹ ಪಾತ್ರ ಇದು. ಇದಕ್ಕೆ ಶಾಹಿದ್ ಸರಿಯಾದ ವ್ಯಕ್ತಿ ಎಂಬುದು ನಿರ್ದೇಶಕರ ಮನದಾಳ. ಅದು ಹಾಗೆಯೇ ಕೆಲಸ ಮಾಡಿದ್ದರಿಂದ ಸಿನಿಮಾ ಯಶಸ್ವಿಯಾಗಿದೆ. ನಾನು ಕೂಡ ಅವರ ಆಯ್ಕೆಯನ್ನು ಗೌರವಿಸುತ್ತೇನೆ’ ಎಂದು ಅರ್ಜುನ್ ಹೇಳಿದ್ದಾರೆ.

‘ಯಾವುದೇ ಸಿನಿಮಾ ಆಗಿರಲಿ ಅದು ನಿರ್ದೇಶಕನ ಆಯ್ಕೆಯಂತೆಯೇ ನಡೆಯಬೇಕು. ಸಿನಿಮಾದ ಗೆಲುವು, ಸೋಲು ಅವರ ಕೈಯಲ್ಲೇ ಇರುತ್ತದೆ. ಅವರಿಗೆ ಇರುವ ದೃಷ್ಟಿಕೋನವನ್ನು ನಟ, ನಟಿಯರು ಗೌರವಿಸಿದರಷ್ಟೇ ನಮ್ಮ ಸಿನಿ ಬದುಕು ಉತ್ತಮವಾಗಿರುತ್ತದೆ’ ಎಂದು ಅರ್ಜುನ್ ಹೇಳಿರುವುದು ಟ್ರೋಲ್ ಆಗಿದೆ. ಇದನ್ನು ಬಹುತೇಕ ಬಾಲಿವುಡ್ ನಟ, ನಟಿಯರು ಒಪ್ಪಿಕೊಂಡು ಟ್ವೀಟ್ ಮಾಡಿದ್ದಾರೆ. ಆಶುತೋಷ್‌ ಗೌರೀಕರ್‌ ಅವರ ‘ಪಾಣಿಪತ್‌’ ಸಿನಿಮಾದಲ್ಲಿ ಅರ್ಜುನ್ ನಟಿಸುತ್ತಿದ್ದಾರೆ.

Post Comments (+)