ಭಾನುವಾರ, ಡಿಸೆಂಬರ್ 8, 2019
21 °C

ಸಂಕೀರ್ಣ ಪಾತ್ರಕ್ಕೆ ಜೀವ ತುಂಬಿದ ಪ್ರಜ್ವಲ್

Published:
Updated:
Prajavani

ಅದು ‘ಅರ್ಜುನ್‌ ಗೌಡ’ ಚಿತ್ರದ ಟೀಸರ್‌ ಬಿಡುಗಡೆ ಸಮಾರಂಭ. ನಾಯಕ ನಟ ಪ್ರಜ್ವಲ್‌ ದೇವರಾಜ್ ಉತ್ಸಾಹದಿಂದಲೇ ವೇದಿಕೆ ಏರಿದ್ದರು. ಸಂಕೀರ್ಣ ಪಾತ್ರವೊಂದಕ್ಕೆ ಜೀವ ತುಂಬಿದ ಖುಷಿ ಅವರ ಮೊಗದಲ್ಲಿತ್ತು.

ಸಿನಿಮಾದಲ್ಲಿ ಅವರು ಮೂರು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರಂತೆ. ರೊಮ್ಯಾಂಟಿಕ್‌ ಆ್ಯಕ್ಷನ್‌ ಚಿತ್ರ ಇದು. ಸಾಮಾನ್ಯ ಮನುಷ್ಯ ನಾರ್ಮಲ್ ಆಗಿರಬಾರದು. ಬೇರೆ ತರಹವೇ ಇರಬೇಕು ಎಂಬುದೇ ಚಿತ್ರದ ಹೂರಣ.

‘ನನ್ನದು ಒಂಥರಾ ಜಗಮೊಂಡನ ಪಾತ್ರ. ಯಾವುದೇ ಕೆಲಸ ಮಾಡಿದರೂ ಸರಿಯಾಗಿಯೇ ಮಾಡುತ್ತೇನೆ. ಯಾರಿಗೂ ಕೇರ್ ಮಾಡದ ಹುಡುಗ’ ಎಂದು ನಕ್ಕರು ಪ್ರಜ್ವಲ್. 

‘ಕಿಕ್‌ ಬಾಕ್ಸಿಂಗ್‌ ತರಬೇತಿ ಪಡೆಯುತ್ತಿರುತ್ತೇನೆ. ಅಮ್ಮನಿಗೆ ತೊಂದರೆಯಾದಾಗ ಅವರಿಗೆ ಸಹಾಯ ಮಾಡುತ್ತೇನೆ’ ಎಂದು ತಮ್ಮ ಪಾತ್ರ ಕುರಿತು ವಿವರಿಸಿದರು.

ನಿರ್ದೇಶಕ ಶಂಕರ್‌, ‘ಬೆಂಗಳೂರು, ಮಂಗಳೂರು, ಊಟಿ, ಚಿಕ್ಕಮಗಳೂರು, ಮೈಸೂರಿನ ಸುತ್ತಮುತ್ತ ಶೂಟಿಂಗ್‌ ನಡೆಸಲಾಗಿದೆ. ಸಿಂಗಪುರ, ಮಲೇಷ್ಯಾ, ಥಾಯ್ಲೆಂಡ್‌ನಲ್ಲಿ ಹಾಡನ್ನು ಚಿತ್ರೀಕರಿಸುವ ಯೋಜನೆ ಇದೆ’ ಎಂದು ಮಾಹಿತಿ ನೀಡಿದರು.

ಪ್ರಕಾಶ್‍ ನಟನ ತಮ್ಮ ಪಾತ್ರ ಕುರಿತು ಮಾತನಾಡಿದರು. ನಾಯಕಿ ಪ್ರಿಯಾಂಕಾ ತಿಮ್ಮೇಶ್‌ ಬೋಲ್ಡ್‌ ಆಗಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕನ ಅಮ್ಮನಾಗಿ ‘ಸ್ವರ್ಶ’ ಖ್ಯಾತಿಯ ರೇಖಾ ಬಣ್ಣ ಹಚ್ಚಿದ್ದಾರೆ. 

ರಾಘವೇಂದ್ರ ಕಾಮತ್, ಶಂಕರ್ ಬರೆದಿರುವ ನಾಲ್ಕು ಗೀತೆಗಳಿಗೆ ಧರ್ಮ ವಿಶ್ ಸಂಗೀತ ಸಂಯೋಜಸಿದ್ದಾರೆ. ಛಾಯಾಗ್ರಹಣ ಜೈಆನಂದ್ ಅವರದು.

ಮಾಸ್‍ ಮಾದ ಸಾಹಸ ನಿರ್ದೇಶನ  ಮಾಡಿದ್ದಾರೆ. ಮೂರು ನಿಮಿಷದ ನಾಯಕನ ಪರಿಚಯದ ಹಾಡಿನಲ್ಲಿ ಫೈಟ್‌ಗಾಗಿ 50 ಬೈಕ್ ಮತ್ತು 10 ಕಾರುಗಳನ್ನು ಜಖಂ ಮಾಡಲಾಗಿದೆಯಂತೆ.

ನಿರ್ಮಾಪಕ ರಾಮು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸೆಪ್ಟೆಂಬರ್‌ನಲ್ಲಿ ಜನರ ಮುಂದೆ ಬರುವ ಯೋಚನೆ ಚಿತ್ರತಂಡಕ್ಕಿದೆ. 

ಪ್ರತಿಕ್ರಿಯಿಸಿ (+)