ಸೋಮವಾರ, ಮಾರ್ಚ್ 27, 2023
32 °C

‘ಅರ್ನಾಬ್‌– ದಿ ನ್ಯೂಸ್‌ ಪ್ರಾಸ್ಟಿಟ್ಯೂಟ್‌’ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌–19ನಿಂದಾಗಿ ಇಡೀ ಭಾರತೀಯ ಚಿತ್ರರಂಗವೇ ಸಂಕಷ್ಟದ ಕುಲುಮೆಯಲ್ಲಿ ಬೇಯುತ್ತಿದೆ. ಚಿತ್ರಮಂದಿರಗಳು ಪ್ರಾರಂಭವಾಗದ ಪರಿಣಾಮ ಹಲವು ನಿರ್ಮಾಪಕರು ಆತಂಕದಿಂದ ದಿನಗಳನ್ನು ದೂಡುತ್ತಿದ್ದಾರೆ. ಆದರೆ, ನಿರ್ದೇಶಕ ಹಾಗೂ ನಿರ್ಮಾಪಕ ರಾಮ್‌ ಗೋಪಾಲ್ ವರ್ಮ ಅವರಿಗೆ ಈ ಮಾತು ಅನ್ವಯಿಸದು!

ಕೊರೊನಾ ಸಂಕಷ್ಟದ ಅವಧಿಯಲ್ಲಿ ಅವರಷ್ಟು ಸುದ್ದಿಯಾದವರು ವಿರಳ. ಯೂಟ್ಯೂಬ್‌ನಲ್ಲಿ ಅವರ ಆರ್‌ಜಿವಿ ವರ್ಲ್ಡ್‌ ಥಿಯೇಟರ್‌ ಚಾನೆಲ್ ಸಿಕ್ಕಾಪಟ್ಟೆ ಟ್ರೆಂಡ್‌ ಸೃಷ್ಟಿಸುತ್ತಿದೆ. ಸಿನಿಮಾ ನಿರ್ದೇಶನದ ಬದಲಾಗಿ ಅವರ ಹೆಸರು ವಿವಾದದಿಂದಲೇ ಚಾಲ್ತಿಯಲ್ಲಿರುವುದೇ ಹೆಚ್ಚು. ಅದಕ್ಕೆ ಅವರು ಘೋಷಿಸುತ್ತಿರುವ ವಿವಾದಾತ್ಮಕ ಸಿನಿಮಾಗಳೇ ಕಾರಣ. ‘ಕ್ಲೈಮ್ಯಾಕ್ಸ್‌’, ‘ನೆಕೇಡ್‌’, ‘ಪವರ್‌ ಸ್ಟಾರ್’, ‘ಅಮೃತಾ’ ಹೀಗೆ ಅವರ ವಿವಾದಾತ್ಮಕ ಸಿನಿಮಾಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಇತ್ತೀಚೆಗೆ ಟಾಲಿವುಡ್‌ ನಟ ಅಲ್ಲು ಅರ್ಜುನ್‌ ಅವರ ತಂದೆ ಅಲ್ಲು ಅರವಿಂದ್‌ ಬಗ್ಗೆಯೂ ಚಿತ್ರ ಮಾಡುತ್ತೇನೆ ಎಂದು ರಾಮ್‌ ಗೋಪಾಲ್ ವರ್ಮ ಘೋಷಿಸಿದ್ದಾರೆ. ಈ ಚಿತ್ರದ ವಿರುದ್ಧ ಅಲ್ಲು ಅರ್ಜುನ್‌ ಅಭಿಮಾನಿಗಳು ಸಿಕ್ಕಾ‍ಪಟ್ಟೆ ಸಿಟ್ಟಾಗಿದ್ದಾರೆ.

ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆಯ ಬಳಿಕ ಅರ್ನಾಬ್‌ ಅವರು ಬಾಲಿವುಡ್‌ ಸೆಲೆಬ್ರಿಟಿಗಳ ವಿರುದ್ಧ ವಾಕ್ಸಮರಕ್ಕೆ ಇಳಿದಿರುವುದು ಗುಟ್ಟೇನಲ್ಲ. ಇದೇ ಅರ್ನಾಬ್‌ ಮೇಲೆ ವರ್ಮ ಸಿಟ್ಟಾಗಲು ಮೂಲ ಕಾರಣ. ‘ಅರ್ನಾಬ್‌ ಗೋಸ್ವಾಮಿ ವಿರುದ್ಧ ಸಿನಿಮಾ ಮಾಡಿ ಆತನ ಕರಾಳಮುಖವನ್ನು ಬೆತ್ತಲೆಗೊಳಿಸುತ್ತೇನೆ’ ಎಂದು ವರ್ಮ ಸರಣಿ ಟ್ವೀಟ್‌ ಮಾಡಿದ್ದರು.

ಕೆಲವು ದಿನಗಳ ಹಿಂದೆ ‘ಅರ್ನಾಬ್‌– ದಿ ನ್ಯೂಸ್‌ ಪ್ರಾಸ್ಟಿಟ್ಯೂಟ್‌’ ಎಂಬ ಸಿನಿಮಾದ ಶೀರ್ಷಿಕೆಯನ್ನೂ ಘೋಷಿಸಿದ್ದರು. ‘ಈ ಚಿತ್ರಕ್ಕೆ ನ್ಯೂಸ್‌ ಪಿಂಪ್‌ ಅಥವಾ ನ್ಯೂಸ್‌ ಪ್ರಾಸ್ಟಿಟ್ಯೂಟ್‌ ಎಂಬ ಟ್ಯಾಗ್‌ಲೈನ್ ಇಡಬೇಕೇ ಎಂಬ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದೇನೆ. ಕೊನೆಗೆ ನ್ಯೂಸ್‌ ಪ್ರಾಸ್ಟಿಟ್ಯೂಟ್‌ ಎಂಬ ಟ್ಯಾಗ್‌ಲೈನ್‌ ಇಡಲು ತೀರ್ಮಾನಿಸಿದೆ’ ಎಂದು ಟ್ವೀಟ್‌ ಮಾಡಿದ್ದರು.

ಈಗ ಈ ಸಿನಿಮಾದ ಮೋಷನ್‌ ಪೋಸ್ಟರ್‌ ಅನ್ನು ಅವರು ಬಿಡುಗಡೆ ಮಾಡಿದ್ದಾರೆ. ಅರ್ನಾಬ್‌ ಅವರ ಮಾತುಗಳು ಈ ಪೋಸ್ಟರ್‌ನಲ್ಲಿವೆ. ಜೊತೆಗೆ ಬೆತ್ತಲೆ ಮಹಿಳೆಯ ಚಿತ್ರವೊಂದನ್ನು ಹಾಕಿದ್ದಾರೆ. ಈ ಪೋಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆದರೆ, ಯಾವಾಗ ಈ ಸಿನಿಮಾದ ಶೂಟಿಂಗ್‌ ಶುರುವಾಗುತ್ತದೆ ಮತ್ತು ಬಿಡುಗಡೆಯ ದಿನಾಂಕದ ಬಗ್ಗೆ ವರ್ಮ ತಿಳಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು