ಶಾರೂಕ್ ಖಾನ್ ಮಗ ಆರ್ಯನ್ ಖಾನ್ ರಂಗಪ್ರವೇಶ

ಶುಕ್ರವಾರ, ಜೂಲೈ 19, 2019
22 °C
ಆರ್ಯನ್ ಖಾನ್

ಶಾರೂಕ್ ಖಾನ್ ಮಗ ಆರ್ಯನ್ ಖಾನ್ ರಂಗಪ್ರವೇಶ

Published:
Updated:
Prajavani

ಶಾರೂಕ್ ಖಾನ್ ಮಗ ಆರ್ಯನ್ ಖಾನ್ ಬಾಲಿವುಡ್ ರಂಗಪ್ರವೇಶ ಖಚಿತವಾಗಿದೆ. ನೋಡಲು ಥೇಟ್ ಅಪ್ಪನಂತಿರುವ ಆರ್ಯನ್‌ಗೆ ನಟನೆಯ ಬಗ್ಗೆ ಒಲವಿಲ್ಲವಂತೆ. ತೆರೆ ಮೇಲೆ ನಾಯಕನಾಗಿ ಕಾಣಿಸಿಕೊಳ್ಳುವುದಕ್ಕಿಂತ ನೇಪಥ್ಯ ರಂಗವೇ ಆರ್ಯನ್‌ಗೆ ಪ್ರಿಯವಂತೆ. 

ಇದಕ್ಕೆ ಇಂಬುಗೊಡುವಂತೆ ಆರ್ಯನ್ ಈಗಾಗಲೇ ಹಾಲಿವುಡ್‌ನ ‘ದಿ ಲಯನ್ ಕಿಂಗ್’ ಹಿಂದಿ ಸರಣಿಗೆ ಧ್ವನಿ ನೀಡಿದ್ದಾನೆ. ಇದರಲ್ಲಿ ‘ಸಿಂಬಾ’ ಪಾತ್ರಕ್ಕೆ ಆರ್ಯನ್ ಧ್ವನಿ ನೀಡಿದ್ದರೆ, ಅಪ್ಪ ಶಾರೂಕ್ ‘ಮುಫ್ಸಾ’ ಪಾತ್ರಕ್ಕೆ ಧ್ವನಿ ನೀಡಿರುವುದು ವಿಶೇಷ.

1994ರಲ್ಲಿ ಲೈವ್–ಆ್ಯಕ್ಷನ್ ಆ್ಯನಿಮೇಟೆಡ್ ರೂಪದಲ್ಲಿ ಹೊರಬಂದ ‘ದಿ ಲಯನ್ ಕಿಂಗ್’ ಹಾಲಿವುಡ್‌ನಲ್ಲಿ ಜನಪ್ರಿಯವಾಗಿತ್ತು. ‘ಈ ಸಿನಿಮಾದ ಹಿಂದಿ ಅವತರಣಿಕೆಗೆ ಧ್ವನಿ ನೀಡಿದ್ದು ನನ್ನ ಮತ್ತು ಮಗ ಆರ್ಯನ್ ವೈಯಕ್ತಿಕ ನಿರ್ಧಾರವಾಗಿತ್ತು. ಅಪ್ಪ–ಮಗ ಒಂದೇ ಸಿನಿಮಾಕ್ಕೆ ಅದರಲ್ಲೂ ಮುಫ್ಸಾ ಮತ್ತು ಸಿಂಬಾಕ್ಕೆ ಧ್ವನಿ ನೀಡಿದ್ದು ಅದ್ಭುತ ಅನುಭವ ನೀಡಿದೆ. ವೈಯಕ್ತಿಕ ಮತ್ತು ವೃತ್ತಿಪರವಾಗಿಯೂ ನಮ್ಮಿಬ್ಬರ ಪಾಲಿಗೆ ಇದೊಂದು ಭಿನ್ನ ಅನುಭವ. ಈ ಚಿತ್ರವನ್ನು ನನ್ನ ಪುಟ್ಟ ಮಗ ಅಬ್‌ರಾಮ್ ಜೊತೆಗೆ ವೀಕ್ಷಿಸುವುದು ವಿಶೇಷ ಸಂಗತಿ. ಅವನು ‘ದಿ ಲಯನ್ ಕಿಂಗ್’ ಸಿನಿಮಾದ ಬಹುದೊಡ್ಡ ಫ್ಯಾನ್. ಅಪ್ಪ ಮತ್ತು ಅಣ್ಣನ ಧ್ವನಿ ಕೇಳುತ್ತಾ ಸಿನಿಮಾ ನೋಡುವುದು ಅಬ್‌ರಾಮ್‌ಗೆ ಖುಷಿ ತರಲಿದೆ’ ಎಂದು ಶಾರೂಕ್ ಅಭಿಪ್ರಾಯಪಟ್ಟಿದ್ದಾರೆ. 

ಅಪ್ಪಂದಿರ ದಿನಾಚರಣೆ ಸಂದರ್ಭದಲ್ಲಿ ಮಗ ಆರ್ಯನ್ ಜೊತೆಗಿರುವ ಫೋಟೊವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಶಾರೂಕ್ ‘ಫಾದರ್ಸ್‌ ಡೇ ಜೋಶ್‌ನಲ್ಲಿ ಕ್ರಿಕೆಟ್ ಮ್ಯಾಚ್. ಆಡು ಇಂಡಿಯಾ ಆಡು’ ಎನ್ನುವ ಒಕ್ಕಣೆಯನ್ನೂ ಬರೆದಿದ್ದಾರೆ. ಈ ಚಿತ್ರದಲ್ಲಿ ನೀಲಿ ಟೀಶರ್ಟ್ ಧರಿಸಿರುವ ಶಾರೂಕ್‌–ಆರ್ಯನ್ ಬೆನ್ನು ಮಾಡಿ ಕೂತಿದ್ದು, ಟೀ ಶರ್ಟ್‌ನ ಹಿಂದೆ ಮುಫ್ಸಾ, ಸಿಂಬಾ ಎಂದು ಇಂಗ್ಲಿಷಿನಲ್ಲಿ ಬರೆಯಲಾಗಿದೆ. 

ಕರಣ್‌ ಜೋಹರ್‌ ನಿರ್ದೇಶನದ ‘ತಖ್ತ್‌’ ಚಿತ್ರದಲ್ಲಿ ಆರ್ಯನ್‌ ಖಾನ್‌ ಸಹನಿರ್ದೇಶಕನಾಗಿ ಕೆಲಸ ಮಾಡಲಿರುವ ಸುದ್ದಿಯೂ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. ‌ಅಮೆರಿಕದಲ್ಲಿ ಚಿತ್ರನಿರ್ಮಾಣದ ಕೋರ್ಸ್ ಮಾಡಿರುವ 21ರ ಹರೆಯದ ಆರ್ಯನ್ ಮುಂದೊಂದು ದಿನ ಸ್ವಂತ ನಿರ್ಮಾಣ ಇಲ್ಲವೇ ನಿರ್ದೇಶನದ ಕನಸು ಹೊತ್ತಿದ್ದಾನೆ. 

Post Comments (+)