ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗಸನಾಗ ಹೊರಟಿದ್ದಅಥರ್ವ!

Last Updated 23 ಏಪ್ರಿಲ್ 2019, 20:47 IST
ಅಕ್ಷರ ಗಾತ್ರ

ಅಗಸರು ಬಟ್ಟೆ ಒಗೆಯುವ ರಭಸಕ್ಕೆ ಮಾರುಹೋಗಿದ್ದ ಹುಡುಗನಿಗೆ ಅದೇ ವೃತ್ತಿ ಆರಿಸಿಕೊಳ್ಳುವಾಸೆ ಬಂದಿತ್ತು. ಅಜ್ಜನ ಬುದ್ಧಿ ಮಾತಿಗೆ ಕರಗಿ ಫುಟ್‌ಬಾಲ್‌ ಆಟಗಾರನಾಗುತ್ತೇನೆಂದು ನಿರ್ಧರಿಸಿಬಿಟ್ಟ. ಇಂಜಿನಿಯರಿಂಗ್‌ ಓದುವಾಗ ಧುತ್ತನೆ ಕಾಡಿದ್ದು ನಟನಾಗುವ ಆಸೆ. ಅದು ಹಾಗೆ ಬಂದು ಹೀಗೆ ಹೋದ ಆಸೆಯಲ್ಲ. ಅಮ್ಮನ ಮಾತಿಗೂ ಜಗ್ಗದೆ ಕ್ಯಾಮೆರಾ ಎದುರಿಸಿ ಮೊದಲ ಚಿತ್ರದಲ್ಲೇ ಸೈ ಅನಿಸಿಕೊಂಡ ಬಳಿಕವೇ ಆಸೆಯ ಕಾವು ಆರಿದ್ದು.

ಕನ್ನಡ ಚಿತ್ರರಂಗ ಕಂಡ ಅಸಾಮಾನ್ಯ ನಿರ್ದೇಶಕ ಎಸ್.ಸಿದ್ದಲಿಂಗಯ್ಯ ಅವರ ಮೊಮ್ಮಗ ಅಥರ್ವ ಅವರ ಸಿನಿ ಪಯಣ ಶುರುವಾಗಿದ್ದು ಹೀಗೆ. ಭಾರತೀಯ ಚಿತ್ರರಂಗವೇ ಚಂದನವನದತ್ತ ತಿರುಗಿ ತಿರುಗಿ ನೋಡಿ ಬೆಚ್ಚಿಬೀಳುವಂತೆ ಮಾಡಿದ್ದ ಸಿದ್ದಲಿಂಗಯ್ಯ ಅವರ ಮಗ, ಕನ್ನಡದಿಂದ ತಮಿಳಿಗೆ ಹೋಗಿ ಅಲ್ಲಿ ಮೇರು ನಟನೆನಿಸಿದ ಮುರಳಿ ಅವರ ಮಗ ಈ ಅಥರ್ವ.

ಕನ್ನಡದ ಹೆಮ್ಮರದಡಿ ಬೆಳೆದ ಮೊಳಕೆಯೊಡೆದ ಸಸಿಯಾದರೂ ಕನ್ನಡದಲ್ಲಿ ಅವರ ಹೆಜ್ಜೆಗುರುತು ಮೂಡಲಿಲ್ಲ. ‘ಪ್ರೇಮಪರ್ವ’ದಂತಹ ಮನೋಜ್ಞ ಚಿತ್ರಗಳಲ್ಲಿ ನಟಿಸಿ ತಂದೆ ಮನೆ ಮಾತಾದರೂ ಇಲ್ಲಿ ಜಾಸ್ತಿ ದಿನ ಬಾಳಲಾಗಲಿಲ್ಲ. ಆದರೆ ತಮಿಳು ಚಿತ್ರರಂಗದಲ್ಲಿ ಅವರು ಅನಾಮತ್ತು ಬೆಳಗಿದರು. ಅಥರ್ವ, ‘ಬಾನಾ ಕಾದಡಿ‘ ಮೂಲಕ ಕಾಲಿವುಡ್‌ಗೆ ಕಾಲಿಟ್ಟಾಗಲೂ ಅವರನ್ನು ಜನ ಗುರುತಿಸಿದ್ದು ‘ಮುರಳಿ ಮಗ’ ಎಂದೇ.

2010ರ ‘ಬಾನಾ ಕಾದಡಿ’ ನಂತರ ಅಥರ್ವ ಖಾಲಿ ಕುಳಿತದ್ದೇ ಕಡಿಮೆ. ವರ್ಷಕ್ಕೆ ಕನಿಷ್ಠ 2ರಿಂದ 3 ಚಿತ್ರಗಳಲ್ಲಿ ನಟಿಸುತ್ತಲೇ ಬಂದರು. 2013ರ ಚಿತ್ರ ‘ಪರದೇಸಿ’ಯ ಅಭಿನಯಕ್ಕೆ ಸಾಲಾಗಿ ಐದು ಪ್ರಶಸ್ತಿಗಳು ಅಥರ್ವಗೆ ಸಿಕ್ಕಿದವು. ರಾಯಪುರದ ಚಹಾ ತೋಟವೊಂದರ ಜೀತದಾಳುವಿನ ಈ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದರು. ಸಮಂತಾ ಈ ಚಿತ್ರದ ನಾಯಕನಟಿಯಾಗಿದ್ದರು. ಪ್ರೇಕ್ಷಕರು, ವಿಮರ್ಶಕರು ಮೆಚ್ಚಿ ನುಡಿದದ್ದಲ್ಲದೆ ನಿರ್ದೇಶಕರು, ನಿರ್ಮಾಪಕರೂ ಬಂಡವಾಳ ವಾಪಸ್‌ ತರುವ ನಟ ಎಂದು ಹೆಗಲು ತಟ್ಟಿದರು. ದಿನ ಬೆಳಗಾಗುವುದರೊಳಗೆ ಅಥರ್ವ ಅವರ ಮುಂದೆ ಕಾಲ್‌ಶೀಟ್‌ಗಳ ಕಂತೆಯೇ ಬಂದುಬಿದ್ದವು.

‘ಪರದೇಸಿ’ಯಲ್ಲಿ ಜೀತದಾಳು ಆಗುವುದಕ್ಕೂ ಮೊದಲು ಒಂದೂವರೆ ತಿಂಗಳು ರಾಯಪುರಂನ ಕೊಳೆಗೇರಿಯಲ್ಲಿ ನೆಲೆನಿಂತು ಅಲ್ಲಿನ ಜನರ ಜೀವನಶೈಲಿ, ಹಾವಭಾವಗಳನ್ನೂ ಕಲಿತುಕೊಂಡಿದ್ದರು ಈ ಯುವಕ. ಈ ಶ್ರದ್ಧೆ ಇಡೀ ಚಿತ್ರರಂಗವನ್ನೇ ಸೆಳೆದಿತ್ತು.

ಅಥರ್ವ ಅವರ ಅದೃಷ್ಟದೋಟ ಶುರುವಾಗಿದ್ದೇ ‘ಪರದೇಸಿ’ಯ ನಂತರ. 2013ರ ಬಳಿಕ ಬೇಡಿಕೆಯ ನಟನಾಗಿ ಬಡ್ತಿ ಪಡೆದರು. 2019ರಲ್ಲಿ ಅಥರ್ವ ಅಭಿನಯದ ಎರಡು ಚಿತ್ರಗಳ ಚಿತ್ರೀಕರಣ ಮುಗಿದಿದೆ. ಶ್ರೀಗಣೇಶ್‌ ನಿರ್ದೇಶನದ ಹೊಸ ಚಿತ್ರದಲ್ಲೂ ಅಥರ್ವ ನಾಯಕನಟನಾಗಿ ನಟಿಸುತ್ತಿದ್ದಾರೆ.

ಹೀಗೆ, ಅಥರ್ವ ಎಂಬ ಅದ್ಭುತ ಪ್ರತಿಭೆ ಸ್ವಂತ ಪರಿಶ್ರಮದಿಂದ ಅದೃಷ್ಟದ ನಾಗಾಲೋಟ ಮುಂದುವರಿದಿದೆ. ಕಾಲಿವುಡ್‌ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದ ದಿಗ್ಗಜ ನಟನಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳನ್ನು ಅವರು ತೋರುತ್ತಿದ್ದಾರೆ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT