ಮಂಗಳವಾರ, ನವೆಂಬರ್ 30, 2021
21 °C

ಒಟಿಟಿಯಲ್ಲಿ ಅಟ್ಕನ್‌ ಚಟ್ಕನ್‌, ಜೆಎಲ್‌ 50

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೆಪ್ಟೆಂಬರ್‌ ತಿಂಗಳಿನಲ್ಲೂ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್ ವಿಡಿಯೊ, ಜೀ 5, ಡಿಸ್ನಿ ಹಾಟ್‌ಸ್ಟಾರ್‌ಗಳಂತ ಒಟಿಟಿ ವೇದಿಕೆಯಲ್ಲಿ ಅನೇಕ ಸಿನಿಮಾ, ವೆಬ್‌ಸಿರೀಸ್‌ಗಳು ಬಿಡುಗಡೆಯಾಗಲಿವೆ. ಅವುಗಳಲ್ಲಿ ಸಂಗೀತ ಮಾಂತ್ರಿಕ ಎ.ಆರ್‌. ರೆಹಮಾನ್ ಅವರ ಅಟ್ಕನ್‌ ಚಟ್ಕನ್‌ ಕೂಡ ಒಂದು. ಈ ಸಿನಿಮಾವು ಸೆಪ್ಟೆಂಬರ್ 5ರಂದು ಜೀ 5 ನಲ್ಲಿ ಬಿಡುಗಡೆಯಾಗಲಿದೆ.

ಈ ಚಿತ್ರವು ಗುಡ್ಡು ಎಂಬ ಹುಡುಗನ ಪಾತ್ರದ ಮೇಲೆ ಕೇಂದ್ರಿಕೃತವಾಗಿದೆ. ಗುಡ್ಡು ಪಾತ್ರಕ್ಕೆ ವಿಶ್ವದ ಉತ್ತಮ ಮಕ್ಕಳ ಪಿಯಾನೋ ವಾದಕ ಎಂಬ ಖ್ಯಾತಿ ಪಡೆದಿರುವ ಲಿಡಿಯನ್ ನಾದಸ್ವರಂ ಬಣ್ಣ ಹಚ್ಚಿದ್ದಾರೆ. ಗುಡ್ಡು ಹಾಗೂ ಅವನ ಸ್ನೇಹಿತರಾದ ಮಾಧವ, ಚುಟ್ಟನ್ ಹಾಗೂ ಮಿತಿ ಟೀ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗರು.

ಶಾಲೆಯಲ್ಲಿ ನಡೆಯುವ ಅತೀ ದೊಡ್ಡ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಲು ಅವರಿಗೆ ಅವಕಾಶ ಸಿಗುತ್ತದೆ. ಆದರೆ ಅದಕ್ಕೆ ಮನೆಯವರು ವಿರೋಧಿಸುತ್ತಾರೆ. ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಖ್ಯಾತಿ ಪಡೆಯುತ್ತಾರಾ ಅಥವಾ ಟೀ ಅಂಗಡಿಗೆ ಅವರ ಜೀವನ ಸೀಮಿತವಾಗಲಿದೆಯಾ? ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕಾಗಿದೆ. ಈ ಸಿನಿಮಾಕ್ಕೆ ಶಿವ ಹರೆ ಚಿತ್ರಕತೆ ಬರೆದಿದ್ದಾರೆ.

ಬಾಲಿವುಡ್‌ ಬಾದ್‌ಶಾ ಅಮಿತಾಭ್ ಬಚ್ಚನ್ ಸೇರಿದಂತೆ ಸೋನು ನಿಗಮ್‌, ಹರಿಹರನ್‌, ರುಣ ಶಿವಮಣಿ ಹಾಗೂ ಉತ್ತರ ಉನ್ನಿಕೃಷ್ಣನ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಜೆಎಲ್‌ 50 ವೆಬ್‌ಸರಣಿ
ಅಭಯ್ ಡಿಯೋಲ್‌ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ವೆಬ್‌ಸರಣಿಯು ಸತ್ಯಘಟನೆಯನ್ನು ಆಧರಿಸಿದೆ. 1954ರಲ್ಲಿ ಕಾಣೆಯಾದ ಸ್ಯಾಂಟಿಯಾಗೋ ಫ್ಲೈಟ್ 513 ವಿಮಾನವು 35 ವರ್ಷಗಳ ಬಳಿಕ ಅಂದರೆ 1989ರಲ್ಲಿ ಪತ್ತೆಯಾಗಿತ್ತು. ಈ ಘಟನೆಯ ಕುರಿತು ಯಾವುದೇ ಪುರಾವೆಗಳಿರಲಿಲ್ಲ. ಆದರೆ ವಿಮಾನದ ಒಳಗೆ ಪ್ರಯಾಣಿಕರ ಶವಗಳು ಅಸ್ಥಿಪಂಜರದ ರೂಪದಲ್ಲಿ ಪತ್ತೆಯಾಗಿದ್ದವು. ಈ ಘಟನೆಯ ಎಳೆಯನ್ನೇ ಇರಿಸಿಕೊಂಡು ಜೆಎಲ್‌50 ವೆಬ್‌ಸರಣಿ ನಿರ್ಮಾಣ ಮಾಡಲಾಗಿದೆ. ಇದು ಸೋನಿ ಲೈವ್‌ನಲ್ಲಿ ಇಂದು ಬಿಡುಗಡೆಯಾಗಲಿದೆ. ಅಭಯ್ ಸಿಬಿಐ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೈಲೇಂದ್ರ ವ್ಯಾಸ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಪಿಯೂಶ್ ಮಿಶ್ರಾ, ರಾಜೇಶ್ ಶರ್ಮಾ, ಪಂಕಜ್ ಕಪೂರ್‌, ಅಮೃತಾ ಚಟ್ಟೋಪಧ್ಯಾಯ, ರಿತಿಕಾ ಆನಂದ್ ಮುಂತಾದವರು ಈ ವೆಬ್‌ಸರಣಿಗೆ ಬಣ್ಣ ಹಚ್ಚಲಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು