ಮಂಗಳವಾರ, ಫೆಬ್ರವರಿ 18, 2020
26 °C

ಗುಂಡನ ಕಥೆಗೆ ಆಟೊ ಚಾಲಕ ಸ್ಫೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸತ್ಯಕಥೆಯೊಂದರ ಎಳೆಯನ್ನು ಸ್ಫೂರ್ತಿಯಾಗಿ ಪಡೆದು ಸಿದ್ಧವಾಗಿರುವ ಚಿತ್ರ ‘ನಾನು ಮತ್ತು ಗುಂಡ’. ಇದು ಶುಕ್ರವಾರ (ಜ. 24) ತೆರೆಗೆ ಬಂದಿದೆ.

‘ಆಟೊ ಚಾಲಕನೊಬ್ಬನಿಗೆ ತನ್ನ ನಾಯಿಯ ಜೊತೆ ಬಹಳ ಆತ್ಮೀಯವಾದ ನಂಟು ಇತ್ತು. ಇದು ನನಗೆ ಸ್ಫೂರ್ತಿ ನೀಡಿತು. ಆತ ಆ ನಾಯಿಯನ್ನು ಎಲ್ಲ ಕಡೆಯೂ ಕರೆದುಕೊಂಡು ಹೋಗುತ್ತಿದ್ದ. ಆತನ ಬಗ್ಗೆ ಹಾಗೂ ಆ ನಾಯಿಯ ಬಗ್ಗೆ ಒಂದು ಕಿರುಚಿತ್ರ ಮಾಡೋಣ ಎಂದು ನಾವು ತೀರ್ಮಾನಿಸಿದ್ದೆವು. ಆದರೆ, ಆಗ ನಮ್ಮನ್ನು ಕಾಡಲಾರಂಭಿಸಿದ ಭಾವನೆಗಳು, ನಾವು ಒಂದು ಪೂರ್ಣ ಪ್ರಮಾಣದ ಸಿನಿಮಾ ಸಿದ್ಧಪಡಿಸುವಂತೆ ಮಾಡಿದವು’ ಎಂದು ಚಿತ್ರದ ಹಿಂದಿನ ಕಥೆಯನ್ನು ಬಿಚ್ಚಿಡುತ್ತಾರೆ ನಿರ್ಮಾಪಕ ರಘು ಹಾಸನ್.

ನಾಯಕ ಹಾಗೂ ನಾಯಿಯ ನಡುವಿನ ಭಾವನಾತ್ಮಕ ಸಂಬಂಧ, ದಂಪತಿಯೊಬ್ಬರ ಬದುಕಿನಲ್ಲಿ ನಾಯಿ ಎಷ್ಟು ಮಹತ್ವದ ಸ್ಥಾನ ‍ಪಡೆದಿತ್ತು, ಪ್ರೀತಿಯ ಸಾಕುಪ್ರಾಣಿ ದೂರವಾದಾಗ ಎಷ್ಟೆಲ್ಲ ನೋವು ಅನುಭವಿಸಬೇಕಾಗುತ್ತದೆ ಎನ್ನುವ ಕಥೆಯನ್ನು ಈ ಚಿತ್ರ ಹೊಂದಿದೆ ಎಂದು ಸಿನಿತಂಡ ಈ ಹಿಂದೆಯೇ ಹೇಳಿತ್ತು. ಸಂಯುಕ್ತಾ ಹೊರನಾಡು ಅವರು ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳು ಇವೆ. ‘ಹಾಡುಗಳಿಗೆ ಪ್ರಯೋಗಾತ್ಮಕ ರೀತಿಯಲ್ಲಿ ಸಂಗೀತ ನೀಡಿಲ್ಲ; ಮಾಧುರ್ಯವಿರುವ ಸಂಗೀತ ನೀಡಲಾಗಿದೆ’ ಎಂದು ಹೇಳಿದರು ಸಂಗೀತ ನಿರ್ದೇಶಕ ಕಾರ್ತಿಕ್. ಸಿಂಬ ಎನ್ನುವ ಹೆಸರಿನ ನಾಯಿ ಈ ಚಿತ್ರದ ಪ್ರಮುಖ ಪಾತ್ರಧಾರಿ. ಆದರೆ ಎಲ್ಲಿಯೂ ಕಂಪ್ಯೂಟರ್‌ ಗ್ರಾಫಿಕ್ಸ್‌ ಬಳಕೆ ಆಗಿಲ್ಲ, ಎಲ್ಲವನ್ನೂ ಸಹಜವಾಗಿ ಚಿತ್ರೀಕರಿಸಲಾಗಿದೆ ಎನ್ನುವುದು ಸಿನಿತಂಡ ಹೇಳಿರುವ ಮಾತು.

ಈ ಚಿತ್ರದ ಪ್ರಧಾನ ಪಾತ್ರ ನಿಭಾಯಿಸಬೇಕು ಎಂಬ ಕೋರಿಕೆ ಬಂದಾಗ ಶಿವರಾಜ್ ಅವರಿಗೆ ನಾಯಿಯ ಜೊತೆ ನಟಿಸಬೇಕೇ ಎಂಬ ಭಯ ಸೃಷ್ಟಿಯಾಗಿತ್ತಂತೆ. ‘ಈ ಪಾತ್ರವನ್ನು ನಾನು ನಿಭಾಯಿಸಬಲ್ಲೆನಾ’ ಎಂಬ ಪ್ರಶ್ನೆಯನ್ನು ಅವರು ಸಿನಿತಂಡದ ಬಳಿ ಕೇಳಿದ್ದರು. ಕೊನೆಗೆ, ಸಿನಿಮಾ ತಂಡ ಒತ್ತಾಯಿಸಿದಾಗ ಶಿವರಾಜ್ ಅವರು ಈ ಪಾತ್ರ ಒಪ್ಪಿಕೊಂಡರು.

‘ಒಂದು ತಪಸ್ಸು ಮಾಡುವ ರೀತಿಯಲ್ಲಿ ಈ ಚಿತ್ರ ಸಿದ್ಧಪಡಿಸಿದ್ದೇವೆ. ಇದೊಂದು ಹೋರಾಟ ನಮಗೆ. ದು ನಾಕನ ಸುತ್ತ ಸುತ್ತುವ ಸಿನಿಮಾ ಅಲ್ಲ’ ಎಂದರು ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು