ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ: ಜನರ ಕಾಯೋ ನಾರಾಯಣ

Last Updated 19 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

‘ಕಿರಿಕ್‌ ಪಾರ್ಟಿ’ ತೆರೆಯ ಮೇಲೆ ರಕ್ಷಿತ್‌ ಶೆಟ್ಟಿ ಕಾಣಿಸಿಕೊಂಡ ಕೊನೆಯ ಚಿತ್ರ. ದೊಡ್ಡ ಗ್ಯಾಪ್‌ನ ಬಳಿಕ ಅವರು ‘ಅವನೇ ಶ್ರೀಮನ್ನಾರಾಯಣ’ನಾಗಿ ಪರದೆ ಮೇಲೆ ಬರುತ್ತಿದ್ದು, ಈ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳದಲ್ಲಿ ತೆರೆ ಕಾಣುತ್ತಿದೆ.

ಇಲ್ಲಿಯವರೆಗೂ ಈ ಚಿತ್ರದ 199 ದಿನಗಳ ಶೂಟಿಂಗ್‌ ನಡೆಸಲಾಗಿದೆ. ಸಣ್ಣ ಸನ್ನಿವೇಶವೊಂದರ ಶೂಟಿಂಗ್‌ ಬಾಕಿಯಿದೆಯಂತೆ. ಇದು ಪೂರ್ಣಗೊಂಡರೆ ಬರೋಬ್ಬರಿ 200 ದಿನಗಳ ಕಾಲ ಚಿತ್ರೀಕರಣ ನಡೆಸಿದಂತಾಗುತ್ತದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಅತಿಹೆಚ್ಚು ದಿನಗಳ ಕಾಲ ಶೂಟಿಂಗ್‌ಮಾಡಿದ ಹೆಗ್ಗಳಿಕೆ ಈ ಸಿನಿಮಾದ್ದು. ನವೆಂಬರ್‌ ಅಂತ್ಯಕ್ಕೆ ಜನರ ಮುಂದೆ ಬರಲು ಚಿತ್ರತಂಡ ಸಿದ್ಧತೆ ನಡೆಸಿದೆ.

ರಕ್ಷಿತ್‌ ಶೆಟ್ಟಿ ಇದರಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಹೆಸರು ನಾರಾಯಣ. ಗ್ರಾಮದಲ್ಲಿ ಯಾವುದೇ ಸಮಸ್ಯೆ ಎದುರಾದರೂ ತನ್ನ ಬುದ್ಧಿವಂತಿಕೆಯಿಂದ ಅದನ್ನು ಪರಿಹರಿಸುವುದರಲ್ಲಿ ಆತ ಚಾಣಾಕ್ಷ್ಯ. ಗ್ರಾಮಾಯಣದ ಸಮಸ್ಯೆಗಳಿಗೆ ಆತ ಹೇಗೆ ಪರಿಹಾರ ಹುಡುಕುತ್ತಾನೆ ಎನ್ನುವುದೇ ಈ ಚಿತ್ರದ ಹೂರಣ.

‘ನಾರಾಯಣ ಕ್ಯಾರೆಕ್ಟರ್‌ ಈ ಚಿತ್ರದ ಕೇಂದ್ರಬಿಂದು. ನೋಡಲು ಆತ ಭ್ರಷ್ಟ ಅಧಿಕಾರಿಯಂತೆ ಕಾಣುತ್ತಾನೆ. ಜೊತೆಗೆ ಕಾಮಿಡಿಯನ್‌ ಆಗಿಯೂ ಇರುತ್ತಾನೆ. ಅತಿ ಬುದ್ಧಿವಂತ ಕೂಡ ಹೌದು’ ಎನ್ನುತ್ತಾರೆ ಚಿತ್ರದ ನಿರ್ದೇಶಕ ಸಚಿನ್‌ ರವಿ.

‘ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ವಿಶ್ಯುಯಲ್‌ ಎಫೆಕ್ಟ್‌ ಕೆಲಸ ಹೆಚ್ಚಿದ್ದರಿಂದ ಬಿಡುಗಡೆಗೆ ತಡವಾಗುತ್ತಿದೆ’ ಎನ್ನುವುದು ಅವರ ಸ್ಪಷ್ಟನೆ.

‘ಇದು ಮೂವತ್ತು ವರ್ಷ ಹಿಂದೆ ನಡೆದ ಕಥೆ. ಆದರೆ, ಎಲ್ಲಿಯೂ ನಾವು ವರ್ಷವನ್ನು ನಮೂದಿಸಿಲ್ಲ. ಯಾವುದೋ ಊರಿನಲ್ಲಿ ನಡೆದ ಕಥೆಯಂತೆ ಇದನ್ನು ತೆಗೆದುಕೊಂಡಿದ್ದೇವೆ. ಆ ಟೈಮ್‌ಲೈನ್‌ಗೆ ತಕ್ಕಂತೆ ಚಿತ್ರೀಕರಿಸಲಾಗಿದೆ. ರೆಟ್ರೊ ಎಂದಾಗ ಆ ಕಾಲದ ಉಡುಗೆತೊಡುಗೆಯೇ ಕಣ್ಮುಂದೆ ಬರುತ್ತದೆ. ನಾವು ಆ ತರಹ ಶೂಟ್‌ ಮಾಡಿಲ್ಲ’ ಎಂದು ವಿವರಿಸುತ್ತಾರೆ.

ಸಚಿನ್‌ ರವಿ
ಸಚಿನ್‌ ರವಿ

‘ಚಿತ್ರ ನೋಡಿದಾಗ ನಾಯಕನ ಹೇರ್‌ಸ್ಟೈಲ್‌ ಮಾಡರ್ನ್‌ ಆಗಿದೆಯಲ್ಲಾ ಎಂದು ಅನಿಸಬಹುದು. ಆ ಕಾಲದಲ್ಲಿಯೂ ಯಾರಾದರೊಬ್ಬರು ಆ ಶೈಲಿ ಅನುಕರಿಸಿರಬಹುದಲ್ಲವೇ? ಚಿತ್ರಕ್ಕೆ ತಕ್ಕಂತೆ ಕೆಲವು ಮಾರ್ಪಾಡು ಮಾಡಿಕೊಂಡಿದ್ದೇವೆ’ ಎಂದು ಕಥೆಯ ಬಗ್ಗೆ ಕುತೂಹಲವನ್ನು ಇಮ್ಮಡಿಗೊಳಿಸುತ್ತಾರೆ.

ಚರಣ್‌ ರಾಜ್‌ ಮತ್ತು ಬಿ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಕರಂ ಚಾವ್ಲಾ ಅವರದು.ಶಾನ್ವಿ ಶ್ರೀವಾಸ್ತವ ಇದರ ನಾಯಕಿ. ಚಿತ್ರಕ್ಕೆ ಬಂಡವಾಳ ಹೂಡಿರುವುದು ಎಚ್‌.ಕೆ. ಪ್ರಕಾಶ್‌ ಮತ್ತು ಪುಷ್ಕರ್‌ ಮಲ್ಲಿಕಾರ್ಜುನಯ್ಯ.ಅಚ್ಯುತ್‌ ಕುಮಾರ್‌, ಪ್ರಮೋದ್‌ ಶೆಟ್ಟಿ, ಬಾಲಾಜಿ ಮೋಹನ್‌ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT