ಥಿಯೇಟರ್‌ಗೆ ಲಗ್ಗೆ ಇಡಲು ಸಜ್ಜಾದ ‘ಅಯೋಗ್ಯ’

7

ಥಿಯೇಟರ್‌ಗೆ ಲಗ್ಗೆ ಇಡಲು ಸಜ್ಜಾದ ‘ಅಯೋಗ್ಯ’

Published:
Updated:
Deccan Herald

‘ಟೈಗರ್‌ ಗಲ್ಲಿ’ ಚಿತ್ರದ ಬಳಿಕ ನಟ ನೀನಾಸಂ ಸತೀಶ್‌ಗೆ ‘ಅಯೋಗ್ಯ’ ಸವಾಲಾಗಿ ನಿಂತಿದ್ದಾನೆ. ನೀನಾಸಂ ಸತೀಶ್‌ ಮತ್ತು ರಚಿತಾ ರಾಮ್‌ ಒಟ್ಟಾಗಿ ನಟಿಸಿರುವ ಈ ಚಿತ್ರ ಚಂದನವನದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವುದು ದಿಟ. 

ಇತ್ತೀಚೆಗೆ ಚಿತ್ರದ ಆಡಿಯೊ ಬಿಡುಗಡೆ ನಡೆಯಿತು. ‘ರಚಿತಾ ರಾಮ್‌ ನಾಯಕಿಯಾಗಿ ಬಂದಿದ್ದರಿಂದ ಅಯೋಗ್ಯನಿಗೆ ಕಳೆ ಬಂದಿತು’ ಎಂದ ಸತೀಶ್‌ ಅವರ ಮಾತಿಗೆ, ಎಲ್ಲರ ಮೊಗದಲ್ಲೂ ಕಿರುನಗೆ ಮೂಡಿತು. 

ಕನ್ನಡದಲ್ಲಿ ವಾರಕ್ಕೆ ಆರೇಳು ಚಿತ್ರಗಳು ತೆರೆಕಾಣುತ್ತಿವೆ. ಇದರ ಪರಿಣಾಮ ಹೂಡಿರುವ ಬಂಡವಾಳ ವಾಪಸ್‌ ಬರುವುದೇ ಕಷ್ಟಕರವಾಗಿದೆ. ‘ಈ ಚಿತ್ರ ಬಿಡುಗಡೆ ಕಾಣುವುದಕ್ಕೂ ಮೊದಲೇ ಅರ್ಧದಷ್ಟು ಬಂಡವಾಳ ವಾಪಸ್‌ ಬಂದಿದೆ’ ಎಂದರು ನಿರ್ಮಾಪಕ ಟಿ.ಆರ್. ಚಂದ್ರಶೇಖರ್.

‘ಗ್ರಾಮೀಣ ಹಿನ್ನೆಲೆಯ ಕತೆ ಇದು. ಉತ್ತಮ ಸಂದೇಶವಿದೆ. ಹಣ ಕೊಟ್ಟು ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಮನರಂಜನೆಗೆ ಕೊರತೆಯಿಲ್ಲ. ಇದೇ ಶುಕ್ರವಾರ ಇನ್ನೂರೈವತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ವಿದೇಶದಲ್ಲೂ ಬಿಡುಗಡೆ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಚಿತ್ರದ ಶೀರ್ಷಿಕೆ ಇಷ್ಟವಾಯಿತು. ನಿಷ್ಕಾಳಜಿಯಿಂದ ಕತೆ ಕೇಳಿ ಖುಷಿಯಿಂದ ಉರುಳಾಡಿದೆ. ಮೊದಲ ನಿರ್ಮಾಪಕರು ಚಿತ್ರದ ಮುಹೂರ್ತದ ಹಿಂದಿನ ದಿನದಂದು ಹಿಂದೆ ಸರಿದರು. ಚಂದ್ರಶೇಖರ್‌ ದೇವರಂತೆ ಬಂದು ಯಾವುದೇ ಕೊರತೆಯಾಗದಂತೆ ಚಿತ್ರ ಮುಗಿಸಿದ್ದಾರೆ’ ಎಂದರು ನೀನಾಸಂ ಸತೀಶ್‌.

‘ನಾನು ಮಂಡ್ಯ ಭಾಷೆಯಲ್ಲಿ ಡಬ್ಬಿಂಗ್ ಮಾಡಿದ್ದೇನೆ. ಏನಮ್ಮಿ... ಹಾಡು ಸೂಪರ್ ಹಿಟ್ ಆಗಿದೆ. ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಾಗ ಸತೀಶ್ ಬಗ್ಗೆ ಏನೇನೋ ಹೇಳಿದ್ದರು. ಎಲ್ಲಾ ಸ್ಟಾರ್ ನಟರೊಟ್ಟಿಗೆ ನಟಿಸಿದ್ದೇನೆ. ಅವರು ಎಲ್ಲಿಯೂ ಬಿಲ್ಡಪ್‌ ತೋರಿಸಿಲ್ಲ. ಅವರಂತೆಯೇ ಸತೀಶ್ ಕೂಡ ಇದ್ದರು’ ಎಂದು ಚಿತ್ರೀಕರಣದ ಅನುಭವ ತೆರೆದಿಟ್ಟರು ನಾಯಕಿ ರಚಿತಾ ರಾಮ್.

‘ಚಿತ್ರರಂಗದಲ್ಲಿ ಆಶ್ರಯ, ವಿದ್ಯೆ, ಅನ್ನ ನೀಡಿದ್ದು ಭಟ್ಟರು. ಸೂರಿ ಅವರ ಆಶೀರ್ವಾದದಿಂದ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದೇನೆ. ಎಲ್ಲಾ ಪಾತ್ರಗಳು ಚೆನ್ನಾಗಿ ಬಂದಿವೆ. ಕಲಾವಿದರು, ತಂತ್ರಜ್ಞರ ಪ್ರೋತ್ಸಾಹಕ್ಕೆ ನಾನು ಆಭಾರಿ. ನಿರ್ಮಾಪಕರು ನನ್ನ ದಾರಿಗೆ ದೇವರಾಗಿ ಬಂದರು’ ಎಂದು ಭಾವುಕರಾದರು ನಿರ್ದೇಶಕ ಎಸ್. ಮಹೇಶ್‍ಕುಮಾರ್.

ಪ್ರೀತಮ್‍ ತೆಗ್ಗಿನಮನೆ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !