ಆಯುಷ್ಮಾನ್‌ಗೆ ಬೋಳು ತಲೆ!

7

ಆಯುಷ್ಮಾನ್‌ಗೆ ಬೋಳು ತಲೆ!

Published:
Updated:

‘ಹವಾಯ್‌ಜಾದಾ’ ಚಿತ್ರಕ್ಕಾಗಿ 2015ರಲ್ಲಿ ವಿಭಿನ್ನ ಕೇಶಶೈಲಿಗೆ ತಲೆಯೊಡ್ಡಿಕೊಂಡಿದ್ದ ನಟ ಆಯುಷ್ಮಾನ್‌ ಖುರಾನಾ ಈ ಬಾರಿ ಬೋಳು ತಲೆಯ ‘ಬಾಲ’ನಾಗಲಿದ್ದಾರೆ. ನಿರ್ದೇಶಕರ ಮಾತಿಗೆ ಸೈ ಅನ್ನುವ ವಿನೀತ ನಟ ಎಂದೇ ಅವರನ್ನು ಗುರುತಿಸಲಾಗುತ್ತದೆ. ‘ಹವಾಯ್‌ಜಾದಾ’ಕ್ಕಾಗಿ ಒಂಬತ್ತು ಬಗೆಯ ಕೇಶಶೈಲಿಗಳ ಪ್ರಯೋಗ ಅವರ ಕೂದಲಿನ ಮೇಲೆ ನಡೆದಿತ್ತು!

ಹೊಸ ಚಿತ್ರ ‘ಬಾಲ’ದಲ್ಲಿ ಅವರದು ಬೊಕ್ಕ ತಲೆಯ ಯುವಕನ ಪಾತ್ರ. ಅಕಾಲಕ್ಕೆ ತಲೆಕೂದಲು ಉದುರಿ ಬೊಕ್ಕ ತಲೆಯಾಗುವ ಈ ಪಾತ್ರಕ್ಕಾಗಿ ಅವರು ತಮ್ಮ ದಟ್ಟ ಕೂದಲನ್ನು ಅಕ್ಷರಶಃ ಬೋಳಿಸಿಕೊಂಡುಬಿಡುತ್ತಾರೋ ವಿಗ್‌ ಹಾಕಿಕೊಳ್ಳುತ್ತಾರೋ ಇನ್ನೂ ತೀರ್ಮಾನವಾಗಿಲ್ಲ.

ಇತ್ತೀಚೆಗಷ್ಟೇ ತೆರೆಕಂಡ ‘ಬಧಾಯಿ ಹೋ’ ಚಿತ್ರದ ಯಶಸ್ಸು ಆಯುಷ್ಮಾನ್‌ ಅವರನ್ನು ಆನಂದತುಂದಿಲರನ್ನಾಗಿಸಿದೆ. ಅವರ ಅಭಿಮಾನಿಗಳಿಗೆ ‘ಬಾಲ’ ಚಿತ್ರದಲ್ಲಿ ಇನ್ನೂ ಒಂದು ಸಿಹಿಸುದ್ದಿ ಇದೆ. ಭೂಮಿ ಪೆಡ್ನೇಕರ್‌ ಮೂರನೇ ಬಾರಿಗೆ ಆಯುಷ್ಮಾನ್‌ ಜೋಡಿಯಾಗಿ ನಟಿಸಲಿದ್ದಾರೆ. ‘ದಮ್‌ ಲಗಾ ಕೆ ಹೈಶಾ’ ಮತ್ತು ‘ಶುಭ ಮಂಗಲ ಸಾವ್‌ಧಾನ್‌’ ಚಿತ್ರಗಳಲ್ಲಿ ಈ ಜೋಡಿಯ ಕೆಮಿಸ್ಟ್ರಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. 

ಹಾಸ್ಯಪ್ರಧಾನ ಚಿತ್ರ ಎನ್ನಲಾಗಿರುವ ‘ಬಾಲ’ ಚಿತ್ರೀಕರಣ ಮುಂದಿನ ಮಾರ್ಚ್‌ನಲ್ಲಿ ಆರಂಭವಾಗಿ ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ತೆರೆಕಾಣುವ ನಿರೀಕ್ಷೆ ಇದೆ. 2018ರ ಹಿಟ್‌ ಚಿತ್ರಗಳಲ್ಲೊಂದಾದ ‘ಸ್ತ್ರೀ’ಯ ನಿರ್ಮಾಪಕ ದಿನೇಶ್‌ ವಿಜಾನ್‌ ಮತ್ತು ನಿರ್ದೇಶಕ ಅಮರ್‌ ಕೌಶಿಕ್‌ ಜೋಡಿ ‘ಬಾಲ’ ಚಿತ್ರದಲ್ಲಿಯೂ ಮುಂದುವರಿಯಲಿದೆ. 

ಭೂಮಿ ಪೆಡ್ನೇಕರ್‌ ನಟನೆಯ ‘ಸೊಂಚಿರಿಯ’ ಸಿನಿಮಾದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಭೂಮಿ ಹಳ್ಳಿಯ ಹೆಣ್ಣುಮಗಳ ಪಾತ್ರ ಮಾಡಿದ್ದು ಸುಶಾಂತ್‌ ಸಿಂಗ್‌ ರಜಪೂತ್‌ ಅವರಿಗೆ ಜೋಡಿಯಾಗಿದ್ದಾರೆ. ಆಯುಷ್ಮಾನ್‌ ಕೂಡಾ ಒಂದಾದ ಮೇಲೊಂದರಂತೆ ಹೊಸ ಚಿತ್ರಗಳ ಆಫರ್‌ಗಳಿಗೆ ಸಮ್ಮತಿ ಸೂಚಿಸುತ್ತಲೇ ಇದ್ದಾರೆ. 2018ರಲ್ಲಿ ಬ್ಯುಸಿಯಾಗಿರುವ ಈ ನಟ ‘ಡ್ರೀಮ್‌ ಗರ್ಲ್‌’ ಚಿತ್ರದಲ್ಲಿ ಸೀರೆಯುಟ್ಟು ಬೈಕ್‌ನಲ್ಲಿ ಸಂಚರಿಸುವ ಪೋಸ್ಟರನ್ನು ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಿಗೆ ಪೋಸ್ಟ್‌ ಮಾಡಿದ್ದರು. 

ಒಟ್ಟಾರೆ, ಒಪ್ಪಿಕೊಂಡ ಪ್ರತಿ ಚಿತ್ರಗಳಲ್ಲೂ ಪಾತ್ರವನ್ನು ಆವಾಹನೆ ಮಾಡಿಕೊಂಡಂತೆ ನಟಿಸುವ ಆಯುಷ್ಮಾನ್‌, 2019ರಲ್ಲಿಯೂ ಬ್ಯುಸಿಯಾಗಿರುವ ಲಕ್ಷಣ ಕಾಣುತ್ತಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !