ಭಾನುವಾರ, ಜನವರಿ 19, 2020
28 °C

ಬಬ್ರೂವಿನ ರೋಚಕ ಪಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪರದೆ ಮೇಲೆ ‘ಬಬ್ರೂ’ ಎಂಬ ಹೆಸರು ಮೂಡಿದಾಗ ಎಲ್ಲರಿಗೂ ಅಚ್ಚರಿ ಕಾದಿತ್ತು. ಇದರ ಅರ್ಥ ಹೊಳೆಯದೆ ವೇದಿಕೆ ಮುಂದೆ ಕುಳಿತಿದ್ದವರಲ್ಲಿ ಗುಸುಗುಸು ಶುರುವಾಯಿತು. ಕೊನೆಗೆ, ಇದು ಕಾರಿಗೆ ಇಟ್ಟಿರುವ ಹೆಸರು ಎಂದು ಗೊತ್ತಾದಾಗ ಚರ್ಚೆ ಸದ್ದಿಲ್ಲದೆ ಮುಗಿಯಿತು.

ಸುಜಯ್‌ ರಾಮಯ್ಯ ನಿರ್ದೇಶನದ ‘ಬಬ್ರೂ’ ಸಿನಿಮಾ ಇದೇ ಶುಕ್ರವಾರ ತೆರೆ ಕಾಣುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಚಿತ್ರದ ಸಂಪೂರ್ಣ ಚಿತ್ರೀಕರಣ ನಡೆದಿರುವುದು ಅಮೆರಿಕದಲ್ಲಿ. ಅಲ್ಲಿ ಕಾರುಗಳಿಗೆ ಹೆಸರು ಇಡಲು ಅವಕಾಶವಿದೆಯಂತೆ. ಅಲ್ಲಿನ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಿಸಿ ಕಾರಿಗೆ ‘ಬಬ್ರೂ’ ಎಂದು ಹೆಸರಿಡಲಾಗಿದೆ. ಇದು ಕೂಡ ಸಿನಿಮಾದ ಒಂದು ಪಾತ್ರವಂತೆ.


ನಿರ್ದೇಶಕ ಸುಜಯ್ 

‘ಇಬ್ಬರು ಅಪರಿಚಿತರು ಕಾರಿನಲ್ಲಿ ದೇಶ ಸುತ್ತಲು ಹೋದಾಗ ಏನಾಗುತ್ತದೆ ಎಂಬುದೇ ಚಿತ್ರದ ತಿರುಳು. ಅದೊಂದು ರೋಚಕ ಪಯಣ’ ಎಂದರು ನಿರ್ದೇಶಕ ಸುಜಯ್‌.

‘ಸುಮನ್‌ ನಗರಕರ್ ಅವರ ಬಳಿ ಈ ಸಿನಿಮಾ ಮಾಡಬೇಕೆಂದು ಹೇಳಿದಾಗ ತಕ್ಷಣವೇ ಒಪ್ಪಿಕೊಂಡರು. ಹಾಗಾಗಿ, ಸಿನಿಮಾದ ಕೆಲಸ ಸುಲಭವಾಯಿತು’ ಎಂದರು. ಮೊದಲ ದೃಶ್ಯದ ಚಿತ್ರೀಕರಣದ ವೇಳೆ ಕ್ಯಾಮೆರಾ ಕೆಳಗೆ ಬಿದ್ದ ಪರಿಣಾಮ ಎದುರಾದ ಸಂಕಷ್ಟದ ಬಗ್ಗೆಯೂ ಹೇಳಿಕೊಂಡರು.

ಮಹಿ ಹಿರೇಮಠ್‌ ಮತ್ತು ಗಾನಾ ಭಟ್‌ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದಾರೆ. ಸಂಗೀತದ ಪರಿಕರಗಳನ್ನು ಬಳಸದೆ ಕೇವಲ ಮನುಷ್ಯರ ಧ್ವನಿಯ ಮೂಲಕವೇ ಈ ಹಾಡುಗಳಿಗೆ ಸಂಗೀತ ಸಂಯೋಜಿಸಿರುವುದು ವಿಶೇಷ.

ನಟ ದರ್ಶನ್‌, ‘ಅಮೆರಿಕಾ! ಅಮೆರಿಕಾ!! ಚಿತ್ರದ ಅರ್ಧಭಾಗದ ಶೂಟಿಂಗ್‌ ಅಮೆರಿಕದಲ್ಲಿ ನಡೆದಿತ್ತು. ಈ ಚಿತ್ರದ ಸಂಪೂರ್ಣ ಶೂಟಿಂಗ್‌ ಅಲ್ಲಿಯೇ ನಡೆದಿದೆ. ಚಿತ್ರತಂಡಕ್ಕೆ ಶುಭವಾಗಲಿದೆ’ ಎಂದರು. ಸುಮುಖ ಅವರ ಛಾಯಾಗ್ರಹಣವಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು