ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಭಾಷೆ ಕಡೆಗಣನೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಕಳವಳ
Last Updated 5 ಮಾರ್ಚ್ 2018, 4:09 IST
ಅಕ್ಷರ ಗಾತ್ರ

ಯಾದಗಿರಿ: ‘ದೇಶದಲ್ಲಿ ರಾಜ್ಯಗಳ ಭಾಷೆಗಳು ಮಾನ್ಯತೆ ಕಳೆದುಕೊಳ್ಳುತ್ತಿವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದ ವಿದ್ಯಾಮಂಗಲದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಭಾಷೆಗಳನ್ನು ಕಡೆಗಣಿಸಲಾಗುತ್ತಿದೆ. ಇತ್ತೀಚೆಗೆ ಪ್ರಥಮ ಭಾಷೆಯಾಗಿ ಇಂಗ್ಲಿಷ್, ಹಿಂದಿ, ಸಂಸ್ಕೃತವನ್ನು ಪರಿಗಣಿಸುತ್ತಿದ್ದಾರೆ. ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಈ ಮೂರು ಭಾಷೆಗಳು ಮಾತೃಭಾಷೆಯಾಗಿವೆಯಾ ಎಂದು ಪ್ರಶ್ನಿಸಿದ ಅವರು, ‘ರಾಜ್ಯ ಭಾಷೆಗಳಿಂದ ಮಾತ್ರ ಮಕ್ಕಳಿಗೆ ಸೃಜನಶೀಲ ಶಕ್ತಿ ಸಿಗಲು ಸಾಧ್ಯ. ಮಕ್ಕಳು ಅಕ್ಷರ ಕಲಿಯುತ್ತಿದ್ದಾರೆಯೇ ಹೊರತು, ಅವರ ಕಲಿಕೆ ಸೃಜನಶೀಲವಾಗಿ ಉಳಿಯುತ್ತಿಲ್ಲ. ಹಾಗಾಗಿ, ರಾಜ್ಯ ಭಾಷೆಗಳನ್ನು ಉಳಿಸಿ ರಕ್ಷಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರಂತರ ಹೋರಾಟ ನಡೆಸಲು ಸಜ್ಜಾಗಿದೆ’ ಎಂದರು.

‘ಇತ್ತೀಚೆಗೆ ಗ್ರಾಮೀಣ ಬ್ಯಾಂಕಿಂಗ್ ಕ್ಷೇತ್ರದಲ್ಲಿ 2017ನೇ ಸಾಲಿನಲ್ಲಿ ರಾಜ್ಯಕ್ಕೆ 2,000 ಹುದ್ದೆಗಳು ಸೃಷ್ಟಿಯಾಗಿದ್ದವು. ಆದರೆ, ನಮ್ಮ ರಾಜ್ಯದ ಮಕ್ಕಳಿಗೆ ದಕ್ಕಿದ್ದು ಕೇವಲ 370 ಹುದ್ದೆಗಳು ಮಾತ್ರ. 2018ರಲ್ಲಿ ಸೃಷ್ಟಿಯಾಗಿದ್ದ 9,000 ಹುದ್ದೆಯಲ್ಲಿ 460 ಹುದ್ದೆಗಳು ಸಿಕ್ಕಿದ್ದವು. ಇಷ್ಟೊಂದು ಹುದ್ದೆಗಳನ್ನು ಕನ್ನಡಿಗರು ಕಳೆದುಕೊಳ್ಳಲು ವಲಸೆ ಅಧಿಕಾರಶಾಹಿ ವ್ಯವಸ್ಥೆ ಕಾರಣವಾಗಿದೆ. ಕೇಂದ್ರ ಸರ್ಕಾರ ಈ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ರಾಜ್ಯ–ರಾಜ್ಯಗಳ ನಡುವೆ ಸಂರ್ಘರ್ಷ ಉಂಟಾಗಲಿದೆ’ಎಂದು ಎಚ್ಚರಿಕೆ ನೀಡಿದರು.

‘ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ಬರುವ ಐಎಎಸ್ ಅಧಿಕಾರಿಗಳು ಇಲ್ಲಿ ಕೆಲಸ ಮಾಡುತ್ತಿದ್ದರೂ, ಅವರ ವ್ಯಾಮೋಹ ಅವರ ರಾಜ್ಯದ ಮೇಲೆಯೇ ಇರುತ್ತದೆ. ಹಾಗಾಗಿ, ಕಾನೂನು, ನಿಯಮಾವಳಿಗಳನ್ನು ತಿರುಚಿ ಅನ್ಯ ರಾಜ್ಯದವರಿಗೆ ಉದ್ಯೋಗ ಕಲ್ಪಿಸುತ್ತಿದ್ದಾರೆ. ಪರಿಣಾಮವಾಗಿ ಕನ್ನಡಿಗರು ಉದ್ಯೋಗ ಕಳೆದುಕೊಳ್ಳುವಂತಾಗಿದೆ. ಈ ರೀತಿಯ ದ್ರೋಹ ಎಲ್ಲ ಕ್ಷೇತ್ರಗಳಲ್ಲಿ ಇದೆ. ಅದರ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಡಾ.ಮೀನಾಕ್ಷಿ ಬಾಳಿ ಮಾತನಾಡಿ,‘ನಗರೀಕರಣದಿಂದಾಗಿ ಕನ್ನಡ ಭಾಷೆಗೆ ಕುತ್ತು ಬಂದಿದೆ. ಗ್ರಾಮೀಣ ಪ್ರದೇಶದ ಬಡವರು, ಶ್ರಮಿಕರು, ರೈತಾಪಿ ವರ್ಗ, ಕೂಲಿಕಾರ್ಮಿರ ಮಕ್ಕಳೇ ಅತೀ ಹೆಚ್ಚು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿಕೊಂಡು ಬರುತ್ತಿರುವುದರಿಂದ ಕನ್ನಡ ಭಾಷೆ ಸಂಪತ್ತು ಉಳಿದುಕೊಂಡು ಬಂದಿದೆ’ ಎಂದು ಹೇಳಿದರು.

‘ಇಂಗ್ಲಿಷ್ ಮಾಧ್ಯಮ ಕಲಿತರೆ ಮಾತ್ರ ಇಂಗ್ಲಿಷ್ ಭಾಷೆಯಲ್ಲಿ ಪರಿಣಿತರಾಗಬಹುದು ಎಂಬುದು ತಪ್ಪು ಕಲ್ಪನೆ. ಭಾಷೆಯು ಪರಸ್ಪರ ಸಂಪರ್ಕ ಸಂಪತ್ತಿನಿಂದ ಕಲಿಯಬಹುದಾಗಿದೆ. ಕನ್ನಡ ಭಾಷೆ ಕಲಿತವರಿಗೆ ಎಲ್ಲ ಭಾಷೆಯಲ್ಲಿಯೂ ಹಿಡಿತ ಸಾಧಿಸಬಹುದು’ ಎಂದರು.

ಶಾಸಕ ಡಾ. ಎ.ಬಿ.ಮಾಲಕರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,‘ಕನ್ನಡ ಭಾಷೆ, ನೆಲ, ಜಲ, ಸಂಪತ್ತಿನ ಬಗ್ಗೆ ಅಭಿಮಾನ ಪ್ರತಿಯೊಬ್ಬರೂ ಬೆಳೆಸಿಕೊಂಡಾಗ ಕನ್ನಡ ಉಳಿಯಲಿದೆ’ ಎಂದರು.

ಪಿಯುಸಿಯಲ್ಲಿ ಹೆಚ್ಚು ಅಂಕಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಾರಿ ಚೈತ್ರಾ ಅವರಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಹಾಗೂ ₹25ಸಾವಿರ ಚೆಕ್ ನೀಡಿ ಗೌರವಿಸಲಾಯಿತು. ಪ್ರಸ್ತುತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಕಲಬುರ್ಗಿ ವಿಭಾಗದ ಒಟ್ಟು 342 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.

ಅಬ್ಬೆತುಮಕೂರು ಸಿದ್ದಸಂಸ್ಥಾನ ಮಠದ ಗಂಗಾಧರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಮರೆಡ್ಡಿ ತಂಗಡಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರತ್ನಾಕರ ಶೆಟ್ಟಿ,ಸಿ.ಎಫ್.ನಾಯ್ಕ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ.ಜಿ.ರಜಪೂತ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಹಿರಿಯ ಸಾಹಿತಿ ಜಗನಾಥ ಹೆಬ್ಬಾಳೆ, ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಇದ್ದರು.

**

ಕನ್ನಡ ಭಾಷೆ ಉಳಿಸಲು ಸಾಂಘಿಕ ಪ್ರಯತ್ನ ಅಗತ್ಯ. ಕನ್ನಡಿಗರ ಜತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರಂತರ ಶ್ರಮಿಸುತ್ತಲೇ ಇರುತ್ತದೆ.

-ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಅಧ್ಯಕ್ಷ ಕನ್ನಡ ಅಭಿವೃದ್ಧಿ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT