ಭಾನುವಾರ, ಅಕ್ಟೋಬರ್ 25, 2020
24 °C

ಕಾರ್ಮಿಕರಿಗೆ ಡಾಲಿ ಕೊಟ್ಟ ಗಿಫ್ಟ್ ಏನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡಾಲಿ ಧನಂಜಯ ನಾಯಕನಾಗಿ ನಟಿಸುತ್ತಿರುವ 'ಬಡವ ರಾಸ್ಕಲ್' ಚಿತ್ರದ ಚಿತ್ರೀಕರಣ ಪೂರ್ಣವಾಗಿದ್ದು, ಚಿತ್ರದ ನಿರ್ಮಾಪಕರೂ ಆಗಿರುವ ಡಾಲಿ ಕಾರ್ಮಿಕರಿಗೆ ಉಡುಗೊರೆ ನೀಡಿ, ಕುಂಬಳಕಾಯಿ ಒಡೆದು ಸಂಭ್ರಮಿಸಿದ್ದಾರೆ.

ಶಂಕರ್ ಗುರು ಈ ಚಿತ್ರ ನಿರ್ದೇಶಿಸುತ್ತಿದ್ದು, ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಶಂಕರ್ ಗುರು ಅವರೇ ಬರೆದಿದ್ದಾರೆ. ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರ.ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನದಲ್ಲಿ ನಡೆಯುವ ಘಟನೆಗಳೆ ಈ ಚಿತ್ರದ ಕಥಾಹಂದರ.

ಕೊರೊನಾ ‌ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಚಿತ್ರದ ಭಾಗವನ್ನು ಚಿತ್ರತಂಡ ಬೆಂಗಳೂರು, ಮೈಸೂರು ಹಾಗೂ ಪಾಂಡವಪುರದಲ್ಲಿ ಚಿತ್ರೀಕರಿಸಿತು. ಡಾಲಿ ಪಿಕ್ಚರ್ಸ್ ಲಾಂಛನದಲ್ಲಿ ಸಾವಿತ್ರಮ್ಮ ಅಡವಿಸ್ವಾಮಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ನಾಯಕಿಯಾಗಿ ಅಮೃತ ಅಯ್ಯಂಗಾರ್ ಅಭಿನಯಿಸುತ್ತಿದ್ದಾರೆ. ರಂಗಾಯಣ ರಘು, ತಾರಾ, ಸ್ಪರ್ಶ ಚಿತ್ರ ಖ್ಯಾತಿಯ ರೇಖಾ, ನಾಗಭೂಷಣ್, ಪೂರ್ಣಚಂದ್ರ ಪ್ರಮುಖ ತಾರಾಬಳಗದಲ್ಲಿದ್ದಾರೆ‌.

ಡಾಲಿ ಧನಂಜಯ ಹಾಗೂ ಶಂಕರ್ ಗುರು ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಪ್ರೀತ ಜಯರಾಮನ್ ಛಾಯಾಗ್ರಹಣ, ನಿರಂಜನ್ ದೇವರಮನೆ ಸಂಕಲನ ಹಾಗೂ ವಿನೋದ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಡಾಲಿ ಕೊಡುಗೆಗೆ ಕಾರ್ಮಿಕರ ಕೃತಜ್ಞತೆ

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳು ನಿರ್ಮಾಣವಾಗುತ್ತವೆ. ಆದರೆ ಚಿತ್ರಕ್ಕಾಗಿ ದುಡಿದವರನ್ನು ನೆನಪಿಸಿಕೊಳ್ಳುವುದು ವಿರಳ.‌ ಆದರೆ, ‘ಬಡವ ರಾಸ್ಕಲ್’ ಚಿತ್ರದ ನಿರ್ಮಾಪಕರೂ ಆಗಿರುವ ಡಾಲಿ ಧನಂಜಯ ಚಿತ್ರೀಕರಣದ ಕೊನೆಯ ದಿನ ಚಿತ್ರಕ್ಕಾಗಿ ದುಡಿದ ನೂರಕ್ಕೂ ಹೆಚ್ಚು ಕಾರ್ಮಿಕರಿಗೆ ದಿನಬಳಕೆಯ ‌ವಸ್ತುಗಳಾದ ಕುಕ್ಕರ್, ತವ, ಹಾಟ್ ವಾಟರ್ ಬಾಟಲ್ ಮುಂತಾದ ವಸ್ತುಗಳನ್ನು ಉಡುಗೊರೆ ನೀಡಿ, ತಮ್ಮ ಚಿತ್ರಕ್ಕಾಗಿ ದುಡಿದವರನ್ನು ಗೌರವಿಸಿದರು. ಧನಂಜಯ ಅವರ ಈ ಗುಣವನ್ನು ಚಿತ್ರಕ್ಕಾಗಿ ದುಡಿದ ಕಾರ್ಮಿಕರು ಮುಕ್ತಕಂಠದಿಂದ ಶ್ಲಾಘಿಸಿ, ಕೃತಜ್ಞತೆಯನ್ನೂ ಹೇಳಿದರಂತೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು