ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಭದ್ರಪಡಿಸಿದ ಕಾಶೆಂಪುರ

ಬದಲಾವಣೆಗೆ ಮಣೆ ಹಾಕಿದ ಮತದಾರರು
Last Updated 17 ಮೇ 2018, 8:28 IST
ಅಕ್ಷರ ಗಾತ್ರ

ಜನವಾಡ: ಹಳ್ಳಿಗಳಿಂದ ಕೂಡಿರುವ ಬೀದರ್ ದಕ್ಷಿಣ ಕ್ಷೇತ್ರ ಮತ್ತೆ ಜೆಡಿಎಸ್ ತೆಕ್ಕೆಗೆ ಜಾರಿದೆ. ಕ್ಷೇತ್ರ ಪುನರ್ ವಿಂಗಡಣೆ ನಂತರ ಅಸ್ತಿತ್ವಕ್ಕೆ ಬಂದ ಬೀದರ್ ದಕ್ಷಿಣಕ್ಕೆ ಈವರೆಗೆ ನಡೆದ ಮೂರು ಚುನಾವಣೆಗಳಲ್ಲಿ ಬಂಡೆಪ್ಪ ಕಾಶೆಂಪುರ ಎರಡರಲ್ಲಿ ಗೆಲುವು ಸಾಧಿಸಿ ಕ್ಷೇತ್ರದಲ್ಲಿ ಪಕ್ಷ ಭದ್ರಪಡಿಸಿದ್ದಾರೆ.

2004 ರಲ್ಲಿ ಬೀದರ್ ಕ್ಷೇತ್ರದಿಂದ ಪಕ್ಷೇತರರಾಗಿ ಆಯ್ಕೆಯಾಗಿದ್ದ ಕಾಶೆಂಪುರ ನಂತರ ಜೆಡಿಎಸ್ ಸೇರಿದ್ದರು. ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಕೆಲಸ ಮಾಡಿದ್ದರು. ನಂತರ 2008ರಲ್ಲಿ ಬೀದರ್ ಬಿಟ್ಟು ಬೀದರ್ ದಕ್ಷಿಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಕ್ಷೇತ್ರಕ್ಕೆ ನಡೆದ ಮೊದಲ ಚುನಾವಣೆಯಲ್ಲಿ ಮತದಾರರು ಅವರ ಕೈಹಿಡಿದಿದ್ದರು. ಎರಡನೇ ಚುನಾವಣೆಯಲ್ಲಿ ಉದ್ಯಮಿ ಅಶೋಕ ಖೇಣಿ ಅವರನ್ನು ಆಯ್ಕೆ ಮಾಡಿದ್ದರು. ಇದೀಗ ಮೂರನೇ ಚುನಾವಣೆಯಲ್ಲಿ ಮತ್ತೆ ಕಾಶೆಂಪುರ ಅವರಿಗೆ ಸೇವೆಯ ಅವಕಾಶ ಕೊಟ್ಟಿದ್ದಾರೆ.

ಅಶೋಕ ಖೇಣಿ ಅವರ ಅವಧಿಯಲ್ಲಿ ಕ್ಷೇತ್ರದಲ್ಲಿ ಉತ್ತಮ ರಸ್ತೆಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳು ಆಗಿದ್ದವು. ಆದರೆ, ರೈತರು, ಗ್ರಾಮೀಣ ಪ್ರದೇಶಗಳ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಎಂಬ ಮಾತುಗಳೂ ಕೇಳಿ ಬಂದಿದ್ದವು.

ಉದ್ಯಮಿಯಾಗಿದ್ದ ಖೇಣಿ ಅವರಿಂದ ಕ್ಷೇತ್ರದ ಚಿತ್ರಣವೇ ಬದಲಾಗುತ್ತದೆ ಎಂದು ಜನ ನಂಬಿದ್ದರು. ನಿರುದ್ಯೋಗ ಸಮಸ್ಯೆ ನಿವಾರಣೆ ಕನಸು ಕಂಡಿದ್ದರು. ಆದರೆ, ನಿರೀಕ್ಷಿಸಿದಷ್ಟು ಬದಲಾವಣೆ ಆಗದ ಕಾರಣ ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ ಎಂದು ರಾಜಕೀಯ ಪಕ್ಷಗಳ ಕಾರ್ಯಕರ್ತರು ಹೇಳುತ್ತಾರೆ.

ಅಶೋಕ ಖೇಣಿ ಹಾಗೂ ಬಿಜೆಪಿ ಅಭ್ಯರ್ಥಿ ಶೈಲೇಂದ್ರ ಬೆಲ್ದಾಳೆ ಅವರು ಗೆಲುವಿಗಾಗಿ ಸಾಕಷ್ಟು ಕಸರತ್ತು ನಡೆಸಿದ್ದರು. ಅಬ್ಬರದ ಪ್ರಚಾರ ಮಾಡಿದ್ದರು. ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದರು. ಆದರೆ, ಸೋತ ನಂತ ರವೂ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಿ ಐದು ವರ್ಷ ನಿರಂತರ ಜನ ರೊಂದಿಗೆ ಇದ್ದದ್ದು ಕಾಶೆಂಪುರ ಗೆಲುವಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸುತ್ತಾರೆ.

ಕಾಂಗ್ರೆಸ್ ಅಭ್ಯರ್ಥಿ ಖೇಣಿ ಅವರು ಬರಿ ಅಭಿವೃದ್ಧಿಯ ಕನಸು ತೋರಿಸಿದ್ದಾರೆ. ಬಿಜೆಪಿಯಿಂದಲೂ ಕ್ಷೇತ್ರಕ್ಕೆ ಒಳಿತು ಸಾಧ್ಯವಿಲ್ಲ ಎಂದು ಕಾಶೆಂಪುರ ಮತದಾರರಿಗೆ ಮನವರಿಕೆ ಮಾಡಿದ್ದೂ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ಅಭಿಪ್ರಾಯಪಡುತ್ತಾರೆ.

ನಾಗೇಶ ಪ್ರಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT