ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೇ ಬಂಗಾರ: ಭಾರತಿ ವಿಷ್ಣುವರ್ಧನ್‌ ಬದುಕು, ಭಾವ, ವ್ಯಕ್ತಿತ್ವ, ಸಾಧನೆಯ ಅನಾವರಣ

Last Updated 20 ಆಗಸ್ಟ್ 2021, 1:35 IST
ಅಕ್ಷರ ಗಾತ್ರ

ಭಾರತಿ ವಿಷ್ಣುವರ್ಧನ್‌ ಅಂದರೆ ಒಬ್ಬರು ಖ್ಯಾತ ನಟಿ, ನಟ ದಿವಂಗತ ವಿಷ್ಣುವರ್ಧನ್‌ ಅವರ ಪತ್ನಿ ಅಷ್ಟೇನಾ? ಅಲ್ಲ. ಇದುವರೆಗೆ ತಿಳಿದಿಲ್ಲದ ಭಾರತಿ ಅವರ ಬದುಕು, ಭಾವ, ವ್ಯಕ್ತಿತ್ವ, ಸಾಧನೆ ಎಲ್ಲವನ್ನೂ ಅನಾವರಣ ಮಾಡಲು ಬಂದಿದೆ ‘ಬಾಳೇ ಬಂಗಾರ’. ಆ. 24ರಂದು ಈ ಸಾಕ್ಷ್ಯಚಿತ್ರದ ಪ್ರೀಮಿಯರ್‌ ಷೋ ನಡೆಯಲಿದೆ.

**

ಭಾರತಿ ವಿಷ್ಣುವರ್ಧನ್‌ ಅಂದರೆ ಒಬ್ಬರು ಖ್ಯಾತ ನಟಿ, ನಟ ದಿವಂಗತ ವಿಷ್ಣುವರ್ಧನ್‌ ಅವರ ಪತ್ನಿ ಅಷ್ಟೇನಾ?

ಅಲ್ಲ. ಇದುವರೆಗೆ ತಿಳಿದಿಲ್ಲದ ಭಾರತಿ ಅವರ ಬದುಕು, ಭಾವ, ವ್ಯಕ್ತಿತ್ವ, ಸಾಧನೆ ಎಲ್ಲವನ್ನೂ ಅನಾವರಣ ಮಾಡಲು ಬಂದಿದೆ ‘ಬಾಳೇ ಬಂಗಾರ’. ಆ. 24ರಂದು ಈ ಸಾಕ್ಷ್ಯಚಿತ್ರದ ಪ್ರೀಮಿಯರ್‌ ಷೋ ನಡೆಯಲಿದೆ.

ಭಾರತಿ ವಿಷ್ಣುವರ್ಧನ್‌ ಅವರ ಕುರಿತ ಸಾಕ್ಷ್ಯಚಿತ್ರವನ್ನು ನಿರ್ಮಿಸಿ ಬಿಡುಗಡೆಗೆ ಮುಂದಾಗಿದ್ದಾರೆ ಅವರ ಅಳಿಯ ‘ಜೊತೆ ಜೊತೆಯಲಿ’ ಧಾರಾವಾಹಿ ಖ್ಯಾತಿಯ ಅನಿರುದ್ಧ ಜಟ್ಕರ್‌.

‘ಬಾಳೇ ಬಂಗಾರದಲ್ಲಿ ಏನಿದೆ?

ಸಾಕ್ಷ್ಯಚಿತ್ರ ಹುಟ್ಟಿದ ಬಗೆಯನ್ನುಅನಿರುದ್ಧ ವಿವರಿಸಿದ್ದು ಹೀಗೆ.

‘ಅಮ್ಮನನ್ನು (ಭಾರತಿ ವಿಷ್ಣುವರ್ಧನ್‌) ಒಮ್ಮೆ ಒಬ್ಬರು ಅಭಿಮಾನಿ ಮಹಿಳೆಯು ತಮ್ಮ ಮಗಳಿಗೆ ಪರಿಚಯಿಸುವಾಗ ಇವರು ವಿಷ್ಣುವರ್ಧನ್‌ ಅವರ ಪತ್ನಿ ಎಂದು ಹೇಳಿದರು. ನನಗ್ಯಾಕೋ ಅದು ಅಪೂರ್ಣ ಅನಿಸಿತು. ಏಕೆಂದರೆ ಅಪ್ಪ ಇವರನ್ನು ಮದುವೆಯಾದಾಗ ಭಾರತಿ ಅವರಾಗಲೇ ಬಹುದೊಡ್ಡ ತಾರೆ ಆಗಿದ್ದರು. ಹೀಗಾಗಿ ಅವರ ಬದುಕನ್ನು ಸಮಗ್ರವಾಗಿ ಕಟ್ಟಿಕೊಡಬೇಕು ಅನಿಸಿತು. ಇವತ್ತಿನ ಪೀಳಿಗೆಗೆ ಅವರು ಪರಿಚಯ ಆಗಬೇಕು. ಹೊಸ ಕಲಾವಿದರಿಗೆ ಅವರು ಸ್ಫೂರ್ತಿ ಆಗಬೇಕು. ಇದೊಂದು ದಾಖಲೆಯಾಗಿ ಉಳಿಯಬೇಕು ಎಂಬ ಉದ್ದೇಶದಿಂದ ಈ ಸಾಕ್ಷ್ಯಚಿತ್ರ ನಿರ್ಮಿಸಲು ಮುಂದಾದೆ’ ಎಂದು ಹೇಳಿದರು.

‘ಭಾರತಿ ಅವರು ಸೂಪರ್‌ ಸ್ಟಾರ್‌ ಆಗಲು ಏನೆಲ್ಲಾ ಕಷ್ಟಪಟ್ಟರು. ಅಪ್ಪ ಸಂಕಷ್ಟದಲ್ಲಿ ಸಿಲುಕಿದಾಗ ಅಮ್ಮ ಹೇಗೆ ಬೆನ್ನೆಲುಬಾಗಿ ನಿಂತು ನಿಭಾಯಿಸಿದರು. ಅಪ್ಪನ ಕಷ್ಟದಲ್ಲಿ ಹೇಗೆ ಹೆಗಲುಕೊಟ್ಟರು ಎಂಬುದು ಮಾತ್ರವಲ್ಲ, ಅಪ್ಪ ಭೌತಿಕವಾಗಿ ನಮ್ಮನ್ನು ಅಗಲಿದ ಮೇಲೆ ಅವರ ಬದುಕು ಹೇಗಿದೆ ಎಂಬುದನ್ನು ಸಾಕ್ಷ್ಯಚಿತ್ರದಲ್ಲಿ ಹೇಳಿದ್ದೇನೆ’ ಎಂದರು ಅನಿರುದ್ಧ.

ಭಾರತಿ ಅವರ ಬಾಲ್ಯದಿಂದ ಇಂದಿನವರೆಗಿನ ಎಲ್ಲ ಹಂತಗಳ ಚಿತ್ರಣ ಈ ಸಾಕ್ಷ್ಯಚಿತ್ರದಲ್ಲಿದೆ. 2 ಗಂಟೆ 21 ನಿಮಿಷ ಅವಧಿಯ ಸಾಕ್ಷ್ಯಚಿತ್ರ ಇದು. ಕೀರ್ತಿ ಕ್ರಿಯೇಷನ್ಸ್‌ ಬ್ಯಾನರ್‌ ಅಡಿ ಈ ಸಾಕ್ಷ್ಯಚಿತ್ರ ನಿರ್ಮಾಣವಾಗಿದೆ. ಒಟಿಟಿ ವೇದಿಕೆಗಳಲ್ಲಿ ಬಿಡುಗಡೆ ಆಗಲಿದೆ.

ಅನಿರುದ್ಧ ಈ ಸಾಕ್ಷ್ಯಚಿತ್ರದ ಪರಿಕಲ್ಪನೆ, ಸ್ಕ್ರಿಪ್ಟ್‌ನಿಂದ ಹಿಡಿದು ನಿರೂಪಣೆಯವರೆಗೆ ಎಲ್ಲ ಕೆಲಸಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರಕ್ಕಾಗಿ ಅನಿರುದ್ಧ ಅವರು ಭಾರತಿ ಅಭಿನಯದ 110 ಚಿತ್ರಗಳನ್ನು ವೀಕ್ಷಿಸಿ ಅಧ್ಯಯನ ಮಾಡಿ ದೃಶ್ಯಗಳನ್ನು ಆಯ್ದುಕೊಂಡಿದ್ದಾರೆ. ಅಪರೂಪದ ಫೋಟೊಗಳು, ದಕ್ಷಿಣ ಭಾರತದ ಖ್ಯಾತ ನಟರ ಹೇಳಿಕೆಗಳು, ಭಾರತಿ ಅವರ ಸಂದರ್ಶನ, ಪದ್ಮಶ್ರೀ ಪುರಸ್ಕಾರದ ವಿಡಿಯೊ ಎಲ್ಲವೂ ಚಿತ್ರದಲ್ಲಿ ಇವೆ.

‘ಈ ಸಾಕ್ಷ್ಯಚಿತ್ರ ನಿರ್ಮಿಸಲು ಮೂರು ವರ್ಷ ಅವಧಿ ಹಿಡಿದಿದೆ. ಎಲ್ಲ ಅಂಶಗಳನ್ನೂ ಪರಿಗಣಿಸಲಾಗಿದೆ. ಈ ನಡುವೆ ವಿಷ್ಣುವರ್ಧನ್‌, ಭಾರತಿ ಹಾಗೂ ಮೊಮ್ಮಕ್ಕಳನ್ನೂ ಸೇರಿಸಿಕೊಂಡು ಕನ್ನಡದಲ್ಲೇ ‘ಸಾಹಸ ಸಿಂಹ’ ಎಂಬ ಕಾಮಿಕ್ ಸರಣಿಯನ್ನೂ ಮಾಡಿದೆವು. ‘ಹೃದಯಗೀತೆ’ ಎಂಬ ಕಾರ್ಯಕ್ರಮ ಮಾಡಿ ಅದರಿಂದ ನಿಧಿ ಸಂಗ್ರಹಿಸಿ ಹೃದಯ ಸಮಸ್ಯೆ ಉಳ್ಳವರಿಗೆ ನೀಡಿದೆವು. ವಿಭಾ ಚಾರಿಟಬಲ್‌ ಟ್ರಸ್ಟ್‌ನಿಂದ ನಡೆಸುತ್ತಿರುವ ಸೇವಾ ಕಾರ್ಯಗಳಲ್ಲಿ ಭಾರತಿ ಅವರು ತೊಡಗಿದ್ದಾರೆ. ಜೊತೆಗೆ ವಿಷ್ಣು ಸ್ಮಾರಕ ನಿರ್ಮಾಣವೂ ಭರದಿಂದ ಸಾಗಿದೆ’ ಎಂದರು ಅನಿರುದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT