ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಆಯ್ಕೆಯಲ್ಲಿ ಪಾಲಿಟಿಕ್ಸ್‌?

Last Updated 17 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಫೆ. 26ರಿಂದ ಆರಂಭವಾಗಲಿರುವ 12ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಮೇಲೆ ಸಾಂಸ್ಕೃತಿಕ ರಾಜಕಾರಣದ ಕರಿನೆರಳು ಆವರಿಸಿದೆಯೇ? ಎಂಬುದು ಚರ್ಚೆಗೆ ಗ್ರಾಸವಾಗಿದೆ. ಹಿರಿಯ ನಿರ್ದೇಶಕರ ಸಿನಿಮಾಗಳು ಮತ್ತು ಹಲವು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿರುವ ಚಿತ್ರಗಳನ್ನು ಸಿನಿಮೋತ್ಸವದ ಕನ್ನಡ ಸಿನಿಮಾ ಸ್ಪರ್ಧಾ ಕಣದಿಂದ ಹೊರಗಿಟ್ಟಿರುವುದೇ ಈ ಚರ್ಚೆಗೆ ಮೂಲಕಾರಣ.

‘96’, ‘ಅಭ್ಯಂಜನ’, ‘ಬೆಲ್‌ಬಾಟಂ’, ‘ಭಿನ್ನ’, ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’, ‘ಕವಲುದಾರಿ’, ‘ಮುಂದಿನ ನಿಲ್ದಾಣ’, ‘ಒಂದು ಶಿಕಾರಿಯ ಕಥೆ’, ‘ಪಿಂಗಾರ’, ‘ರಾಘಭೈರವಿ’, ‘ರಂಗನಾಯಕಿ’, ‘ಸವರ್ಣದೀರ್ಘ ಸಂಧಿ’, ‘ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’ ಮತ್ತು ‘ಶುಭಮಂಗಳ’ ಚಿತ್ರಗಳು ಸ್ಪರ್ಧಾ ವಿಭಾಗದಲ್ಲಿವೆ. ಆದರೆ, ಗಾಂಧೀಜಿ ಅವರ ಬಾಲ್ಯ ಕುರಿತ ಮೊದಲ ಚಿತ್ರವೆಂಬ ಖ್ಯಾತಿ ಪಡೆದಿರುವ ಪಿ. ಶೇಷಾದ್ರಿ ನಿರ್ದೇಶನದ ‘ಮೋಹನದಾಸ’ನಿಗೆ ಸಿನಿಮೋತ್ಸವಕ್ಕೆ ಪ್ರವೇಶ ಸಿಕ್ಕಿಲ್ಲ. ಪ್ರಸ್ತುತ ದೇಶದಾದ್ಯಂತ ಗಾಂಧೀಜಿಯ 150ನೇ ಜಯಂತಿಯ ವರ್ಷಾಚರಣೆ ನಡೆಯುತ್ತಿದೆ. ಹಾಗಾಗಿ, ಆಯ್ಕೆ ಸಮಿತಿಯ ಈ ತೀರ್ಮಾನ ಗಾಂಧಿಯ ಅನುಯಾಯಿಗಳಲ್ಲಿ ಅನುಮಾನ ಮೂಡಿಸಿದೆ.

‘ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವ ‘ಗಂಟುಮೂಟೆ’ ಮತ್ತು ‘ಅರಿಷಡ್ವರ್ಗ’ ಸಿನಿಮಾಗಳು ತಮ್ಮ ಸ್ವಂತ ನೆಲದಲ್ಲೇ ಕಡೆಗಣಿಸಲ್ಪಟ್ಟಿವೆ ಎಂದು ನಿರ್ದೇಶಕ ಮಂಸೋರೆ ಕೂಡ ಫೇಸ್‌ಬುಕ್‌ನಲ್ಲಿ ಬೇಸರ ತೋಡಿಕೊಂಡಿದ್ದಾರೆ. ‘ಅಮೃತಮತಿ’ ಸಿನಿಮಾವನ್ನು ಸಿನಿಮೋತ್ಸವದಿಂದ ಹೊರಗಿಟ್ಟಿರುವ ಬಗ್ಗೆ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಆಯ್ಕೆ ಸಮಿತಿಯ ನಿರ್ಧಾರದ ಬಗ್ಗೆ ನನಗೆ ಗೌರವವಿದೆ. ಆಯ್ಕೆಯ ಬಗ್ಗೆ ನನ್ನ ಆಕ್ಷೇಪವಿಲ್ಲ. ‘ಮೋಹನದಾಸ’ ಚಿತ್ರ ಇನ್‌ಫೋಸಿಸ್‌ ಫೌಂಡೇಷನ್‌ ಮತ್ತು ಸುತ್ತೂರು ಮಠದಲ್ಲಿ ಮಾತ್ರ ಪ್ರದರ್ಶನ ಕಂಡಿದೆ. ಮಕ್ಕಳು ಮಾತ್ರವೇ ಸಿನಿಮಾ ವೀಕ್ಷಿಸಿದ್ದಾರೆ. ಮೊದಲ ಬಾರಿಗೆ ನನ್ನ ನೆಲದಲ್ಲಿ ಪ್ರದರ್ಶನ ಮಾಡುವ ಆಸೆಯಿತ್ತು. ಅದು ಸಾಧ್ಯವಾಗಲಿಲ್ಲವಲ್ಲಾ ಎಂಬುದಕ್ಕೆ ಬೇಸರವಿದೆ’ ಎಂದು ಚಿತ್ರದ ನಿರ್ದೇಶಕ ಪಿ. ಶೇಷಾದ್ರಿ ಪ್ರತಿಕ್ರಿಯಿಸಿದರು.

ಆಯ್ಕೆ ಸಮಿತಿಯಲ್ಲಿ 7 ಸದಸ್ಯರಿದ್ದರು. ಅವರಲ್ಲಿ ನಾಲ್ವರು ರಾಜ್ಯದ ಹೊರಗಿನವರು. ‘ಪ್ರತಿ ವರ್ಷ ಅವರವರದ್ದೇ ಸಿನಿಮಾ ಏಕೆ ಆಯ್ಕೆ ಮಾಡಬೇಕು..’ ಎಂದು ಸಮಿತಿ ಸಭೆಯಲ್ಲಿ ಚರ್ಚೆಯಾಯಿತು ಎನ್ನಲಾಗಿದೆ. ಕಾಸರವಳ್ಳಿ ನಿರ್ದೇಶನದ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಸಿನಿಮಾದ ಆಯ್ಕೆಯ ಬಗ್ಗೆಯೂ ಕೆಲವರು ಅಪಸ್ವರ ಎತ್ತಿದರು ಎಂದು ಗೊತ್ತಾಗಿದೆ. ಬಿಜೆಪಿ ಸರ್ಕಾರದ ನೀತಿಗಳ ವಿರುದ್ಧ ಇರುವವರ ಚಿತ್ರಗಳಿಗೆ ಈ ಸಲ ಅವಕಾಶ ಕೊಟ್ಟಿಲ್ಲ ಎನ್ನುವ ಮಾತುಗಳೂ ಕೇಳಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT