ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮೋತ್ಸವದಲ್ಲಿ ಇರಲಿ ಈ ಚಿತ್ರಗಳ ಮೇಲೊಂದು ಕಣ್ಣು

Last Updated 19 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಆ್ಯಷ್‌ ಈಸ್ ಪ್ಯೂರೆಸ್ಟ್ ವೈಟ್‌

ನಿರ್ದೇಶನ: ಝಾಂಕೆ ಜಿಯಾ (Zhangke Jia) ಚೀನಾ/ಚೀನಿ ಭಾಷೆ ಸ್ಥಳೀಯ ರೌಡಿ ಬಿನ್‌ನನ್ನು ಕೈಯೋ ಪ್ರೀತಿಸುತ್ತಿರುತ್ತಾಳೆ. ಗುಂಪುಗಳ ಮಾರಾಮಾರಿ ಸಮಯದಲ್ಲಿ ಬಿನ್‌ನನ್ನು ರಕ್ಷಿಸುವ ಸಲುವಾಗಿ ಕೈಯೋ ಗುಂಡು ಹಾರಿಸುತ್ತಾಳೆ. ಆ ತಪ್ಪಿಗಾಗಿ ಕೈಯೋಗೆ ಐದು ವರ್ಷಗಳ ಜೈಲು ಶಿಕ್ಷೆಯಾಗುತ್ತದೆ. ಬಿಡುಗಡೆಯ ನಂತರ ಕೈಯೋ ಬಿನ್‌ನನ್ನು ಹುಡುಕಿಕೊಂಡು ಹೋದಾಗ ನಡೆವ ಘಟನಾವಳಿಗಳೇ ಈ ಸಿನಿಮಾ.

ಐಕ

ನಿರ್ದೇಶನ: ಸರ್ಗಿ ದ್ವೊರ್ಸ್ತೆವೊಯ್‌ (Sergei Dvortsevoy) ಕಜಕಿಸ್ತಾನ್‌/ 2018 /ರಷ್ಯ ಮತ್ತು ಕಿರ್ಗಿಜ್‌ ಭಾಷೆ/100 ನಿ.

ರಷ್ಯದ ಮಾಸ್ಕೊದಲ್ಲಿ ಮಹಿಳೆಯರು ಎದುರಿಸುತ್ತಿರುವ ಜೀವನ್ಮರಣದ ಪ್ರಶ್ನೆ. ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮಕೊಟ್ಟ ಐಕ, ಮರುಕ್ಷಣವೇ ಅಲ್ಲಿಂದ ಪರಾರಿಯಾಗುತ್ತಾಳೆ. ಅವಳಿಗೆ ಉದ್ಯೋಗವಿಲ್ಲ, ಬಡತನ. ಸಾಲಸ್ತಿ, ಮನೆಯ ಮಾಲೀಕನಿಂದ ಶೋಷಣೆ. ತನಗೇ ನೆಲೆ ಇಲ್ಲದಿರುವಾಗ ಮಗುವಿನ ಹಂಗೇಕೆ? ಐಕ ಮಗುವನ್ನು ಬಿಟ್ಟು ಪರಾರಿಯಾಗಲು ಇದು ಮುಖ್ಯ ಕಾರಣ. ಮಾಸ್ಕೋದ ಮಹಿಳೆಯರ ಆಕ್ರಂದನ ಈ ಚಿತ್ರದಲ್ಲಿದೆ.

ಬರ್ನಿಂಗ್

ನಿರ್ದೇಶನ:ಲೀ ಚಾಂಗ್‌ಡಂಗ್ದಕ್ಷಿಣ ಕೊರಿಯಾ/ಇಂಗ್ಲಿಷ್‌ ಭಾಷೆ/148 ನಿ.

ದಕ್ಷಿಣ ಕೊರಿಯಾದ ಹೆಸರಾಂತ ನಿರ್ದೇಶಕ ಲೀ ಚಾಂಗ್‌ಡಂಗ್ ನಿರ್ದೇಶನದ ಬರ್ನಿಂಗ್ ಮೂರು ಯುವ ಮನಸ್ಸುಗಳ ಸಂಕೀರ್ಣ ಸಂಬಂಧಗಳನ್ನು ದುರಂತದ ಛಾಯೆಯಲ್ಲಿ ಪ್ರತಿಬಿಂಬಿಸುತ್ತದೆ.

ಕೇಪರ್‌ನಾಮ್

ನಿರ್ದೇಶನ: ನಾದಿ ನೆ ಲಾ ಬಾಕಿ (Nadi ne La baki) ಲೆಬನಾನ್‌/ಅರೇಬಿಕ್‌ ಭಾಷೆ/ 2018 / 123 ನಿ.

ಜಿಯಾನ್ ಅಲ್ರಾಫಿ, ಬೈರೂತಿನ ಹನ್ನೆರೆಡು ವರ್ಷ ವಯಸ್ಸಿನ ಬಾಲಕ. ಬಡತನ, ಹಸಿವಿನಿಂದ ರೋಸಿದ ಬಾಲಕನಿಗೆ ತನ್ನನ್ನು ಸರಿಯಾಗಿ ಪೋಷಣೆ ಮಾಡಲಾಗದೆ ಬೀದಿಗೆ ಬಿಟ್ಟಿರುವ ತಂದೆ ತಾಯಿಯ ಬಗ್ಗೆ ಸಿಟ್ಟು. ತನ್ನ ಹನ್ನೊಂದು ವರ್ಷ ವಯಸ್ಸಿನ ತಂಗಿಯನ್ನು ಮನೆಮಾಲಿಕನೊಬ್ಬನಿಗೆ ಮಾರಬೇಕಾಗುತ್ತದೆ. ಸಂದರ್ಭದ ಸುಳಿಗೆ ಸಿಲುಕಿ ಲೆಬನಾನಿನ ಜೈಲು ಸೇರುವ ಜಿಯಾನ್ ತಂದೆ ತಾಯಿಯ ವಿರುದ್ಧ ಜೈಲಿನಿಂದಲೇ ನ್ಯಾಯಾಲಯಕ್ಕೆ ದೂರು ನೀಡುತ್ತಾನೆ. ಪೋಷಕರ ವಿರುದ್ಧವೇ ದೂರು ನೀಡಿದ್ದೇಕೆ ಎಂದು ನ್ಯಾಯಾಧೀಶರು ಪ್ರಶ್ನಿಸಿದಾಗ ನನಗೆ ಜನ್ಮ ನೀಡಿದ ಕಾರಣಕ್ಕೆ ಎಂದು ಬಾಲಕ ಉತ್ತರಿಸುತ್ತಾನೆ.

ಕೋಲ್ಡ್ ಸ್ವೆಟ್ (ಅರಘೇ ಸರ್ದ್‌)

ನಿರ್ದೇಶನ: ಸೊಹೀಲ್‌ ಬೀರಾಗಿ ಇರಾನ್‌(Soheil Beiraghi) / 2018 /ಪರ್ಷಿಯನ್‌ ಭಾಷೆ/ 90 ನಿ.
ಇರಾನ್‌ನ ಮಹಿಳಾ ಫುಟ್ಬಾಲ್ ತಂಡಕ್ಕೆ ಅಫ್ರೂಜ್ ಕ್ಯಾಪ್ಟನ್. ಹನ್ನೊಂದು ವರ್ಷಗಳ ಸತತ ಪರಿಶ್ರಮದಿಂದ ಅವಳ ಕನಸು ಇದೀಗ ನನಸಾಗಿದೆ. ಏಷ್ಯನ್ ಕಪ್ ಪಂದ್ಯದಲ್ಲಿ ಇರಾನ್ ಫೈನಲ್ ಪ್ರವೇಶಿಸಿದೆ. ಫೈನಲ್ ಪಂದ್ಯ ಆಡಲು ಅವಳು ಮಲೇಷ್ಯ ಹೋಗಬೇಕು. ಇದಕ್ಕೆ ಗಂಡ ಅನುಮತಿ ಕೊಡುತ್ತಿಲ್ಲ. ಇರಾನಿನಲ್ಲಿ ಮಹಿಳೆಯರು ಎಲ್ಲಿಯೇ ಪ್ರವಾಸ ಮಾಡಬೇಕೆಂದರೂ ಗಂಡನ ಅನುಮತಿ ಅಗತ್ಯ. ಇದರ ಸುತ್ತ ಕಟ್ಟಿಕೊಂಡ ಸಿನಿಮಾ.

ಕಾರ್ಮೆನ್ ಅಂಡ್ ಲೋಲಾ

ನಿರ್ದೇಶನ: ಅರಾಂತ್ಸ್ಕಾ ಇಷೆವಾರಿಯಾ (Arantxa Echeva rria) ಸ್ಪೇನ್‌/ 2018 / ಸ್ಪ್ಯಾನಿಶ್‌ ಭಾಷೆ /105 ನಿ.

ಕಾರ್ಮೆನ್ ಮ್ಯಾಡ್ರಿಡ್‌ನ ಹೊರವಲಯದಲ್ಲಿ ವಾಸಿಸುತ್ತಿದ್ದ ಜಿಪ್ಸಿ ಸಮುದಾಯದವಳು. ಆ ಸಮುದಾಯದಲ್ಲಿ ತಲೆಮಾರುಗಳಿಂದ ನಡೆದು ಬಂದ ಜೀವನವನ್ನು ಅವಳು ಸಾಗಿಸಬೇಕಿದೆ. ಮದುವೆ, ಮಕ್ಕಳು ಇದೇ ಅವರ ಜೀವನ. ಒಮ್ಮೆ ಅವಳು ಲೋಲಾಳನ್ನು ಭೇಟಿಯಾಗುತ್ತಾಳೆ. ಆಕೆ ಜಿಪ್ಸಿಯ ಇತರೆ ಯುವತಿಯಂತಲ್ಲ. ವಿಶ್ವವಿದ್ಯಾಲಯಕ್ಕೆ ಹೋಗಿ ಓದಬೇಕೆಂಬ ಕನಸು, ಗ್ರಾಫಿಟಿ ಕಲೆ ಹಾಗೂ ಸ್ತ್ರೀಯರನ್ನು ಇಷ್ಟ ಪಡುವುದು ಅವಳ ವ್ಯಕ್ತಿತ್ವ. ಬಹುಬೇಗ ಅವಳ ಜೊತೆ ವಿಶೇಷ ಬಾಂಧವ್ಯ ಬೆಳೆಯುತ್ತದೆ. ಈ ಬೆಳವಣಿಗೆಯಿಂದ ಅವರ ಕುಟುಂಬದವರು ಈ ಇಬ್ಬರನ್ನು ನಿರಾಕರಿಸುತ್ತಾರೆ.

ಹಾಟ್‌ಸೆಂಟ್

ನಿರ್ದೇಶನ: ಅಲಿ ಇಬ್ರಾಹಿಮಿ ಇರಾನ್‌(Ali Ebrahimi) / 2018 / ಪರ್ಷಿಯನ್‌ ಭಾಷೆ/ 83 ನಿ.

ತುಂಬ ಕಟ್ಟು ನಿಟ್ಟಾದ ತಂದೆ ತಾಯಿ ಆಶ್ರಯದಲ್ಲಿ ಬೆಳೆದ ಹದಿಹರಯದ ತರುಣಿ. ಗೆಳೆಯನೊಂದಿಗೆ ರಾತ್ರಿಕಾಲ ಕಳೆದು ತಡವಾಗಿ ಮನೆಗೆ ಬರುವುದು ಅವಳಿಗೆ ಹವ್ಯಾಸ. ಒಂದು ದಿನ ಸ್ನೇಹಿತನ ಮನೆಯಲ್ಲೇ ಉಳಿಯುವ ಅನಿವಾರ‍್ಯ ಪರಿಸ್ಥಿತಿ. ಆ ಸತ್ಯ ಸಂಗತಿಯನ್ನು ತಂದೆಯಿಂದ ಬಚ್ಚಿಡಲು ಯತ್ನಿಸುತ್ತಾಳೆ.
ಆದರೀಗ ಅವಳ ಪಾಡು ಹೃದಯವಿದ್ರಾವಕ ಸ್ಥಿತಿ.

ಒನ್ ಲಾಸ್ಟ್ ಡೀಲ್

ನಿರ್ದೇಶನ: ಕ್ಲೌಸ್‌ ಹ್ಯಾರೊ (Klaus Haro) ಫಿನ್‌ಲ್ಯಾಂಡ್‌/ 2018 /ಫಿನ್ನಿಶ್‌/ಸ್ವೆಡಿಶ್‌/95 ನಿ.

ನಿಗಮೀಕರಣದ ಪ್ರಭಾವದಿಂದ ಕಲೋದ್ಯಮ ಕುಸಿತ. ಹಿರಿಯ ಕಲಾ ವ್ಯಾಪಾರಿ, ಈ ಬೆಳವಣಿಗೆಯಿಂದ ತತ್ತರಿಸುತ್ತಾನೆ. ಆತ ಕೌಟುಂಬಿಕ ಜೀವನದಿಂದಲೂ ದೂರವಾಗಿದ್ದಾನೆ. ಬಳಿ ಇರುವ ಕಡೆಗಣಿಸಲ್ಪಟ್ಟ ಆ ಕಲಾಕೃತಿ ಅವನ ಅದೃಷ್ಟ ಬದಲಾಯಿಸಬಹುದೆಂಬ ಭರವಸೆಯಲ್ಲಿರುತ್ತಾನೆ.

ರೋಮ

ನಿರ್ದೇಶನ: ಅಲ್ಫೊನ್ಸೊ ಕರ‍್ರನ್‌ ಮೆಕ್ಸಿಕೊ/ 2018 /ಸ್ಪ್ಯಾನಿಶ್‌ ಭಾಷೆ/ 135 ನಿ.

ಮೆಕ್ಸಿಕೋ ನಗರದ ರೋಮದಲ್ಲಿ ಮಧ್ಯಮವರ್ಗದ ಕುಟುಂಬದ ಒಡತಿಗೆ, ಸಹಾಯಕಿಯಾಗಿ ಮನೆಗೆಲಸ ಮಾಡಿಕೊಂಡಿರುವ ತರುಣಿ ಕ್ಲಿಯೊಳ ಕತೆ. 1970ರಲ್ಲಿ ನಡೆದ ರಾಜಕೀಯ ಅರಾಜಕತೆ ಜನರ ಜೀವನದಲ್ಲಿ ಅಲ್ಲೋಲ ಕಲ್ಲೋಲ ಮಾಡಿತು. ಅಂತಹ ಸಮಯದಲ್ಲಿ ಭಾವನಾತ್ಮಕ ನೆನಪುಗಳ ಜೊತೆ ಸಂಬಂಧ ಬೆಸೆಯುವ ಭಾವಾನುಬಂಧ.

ದಿ ಗಿಲ್ಟಿ

ನಿರ್ದೇಶನ: ಗುಸ್ತಾವ್‌ ಮೊಲರ್‌ (Gustav Moller) ಡೆನ್ಮಾರ್ಕ್‌/ 2018 /ಡ್ಯಾನಿಶ್‌ ಭಾಷೆ/ 85 ನಿ.

ಅಪಹರಣಕ್ಕೊಳಗಾಗಿರುವ ಮಹಿಳೆಯೊಬ್ಬಳಿಂದ ಮಾಜಿ ಪೊಲೀಸ್ ಅಧಿಕಾರಿ ಅಸ್ಗರ್ ಹೋಮ್‌ಗೆ ಟೆಲಿಫೋನ್ ಕರೆಯೊಂದು ಬರುತ್ತದೆ. ಕರೆ ಸಂಪರ್ಕ ಕಳೆದುಕೊಳ್ಳುತ್ತದೆ. ಅಪಹರಣಕಾರರು, ಅಪಹರಣಕ್ಕೊಳಗಾದ ಮಹಿಳೆಯ ಶೋಧಕಾರ್ಯ ಆರಂಭವಾಗುತ್ತದೆ. ಬಂದ ಕರೆಯೊಂದೇ ಆಧಾರ. ವಿಪತ್ತಿಗೊಳಗಾದ ಮಹಿಳೆಯ ರಕ್ಷಣೆಗೆ ಅಸ್ಗರ್‌ ಕಾರ್ಯಪ್ರವೃತ್ತ ನಾಗುತ್ತಾನೆ. ತನಿಖೆ ಮುಂದುವರೆಸಿದಂತೆಲ್ಲಾ ಆತನಿಗೆ ತಾನು ಮೊದಲು ಎಣಿಸಿದ್ದಕ್ಕಿಂತ ಇದು ಹೆಚ್ಚು ನಿಗೂಢ ಎನಿಸತೊಡಗುತ್ತದೆ.

ಶಾಪ್‌ಲಿಫ್ಟ್‌ರ್ಸ್‌

ನಿರ್ದೇಶನ: ಹಿರೊಕಾಜು ಕೊರೀದಾ ಜಪಾನ್‌(Hirokazu Koreeda)/ 2018 /ಜಪಾನಿ ಭಾಷೆ / 121 ನಿ.

ಟೋಕಿಯೋದ ಗಡಿ ಬಾಗದ ಊರಿನಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುವುದನ್ನೇ ಪ್ರವೃತ್ತಿಯನ್ನಾಗಿಸಿಕೊಂಡು ಜೀವನ ಸಾಗಿಸುತ್ತಿರುವ, ಎಲ್ಲೆಲ್ಲಿಂದಲೋ ಬಂದು ಒಗ್ಗೂಡಿರುವ ಕುಟುಂಬವೊಂದರ ಮನಕಲಕುವ ಜಪಾನಿ ಚಿತ್ರ. ಈ ಕುಟುಂಬದ ಪುಟ್ಟ ಬಾಲಕನೊಬ್ಬನ ಬಂಧನದೊಂದಿಗೆ ರಹಸ್ಯವೊಂದು ಹೊರಬೀಳುತ್ತದೆ. ಅತಿಸೂಕ್ಷ್ಮ ವಿಷಯ
ವೊಂದು ಇಡೀ ಕುಟುಂಬ ಸಿಡಿದೇಳುವಂಥ ವಾತಾವರಣ ಸೃಷ್ಟಿಸುತ್ತದೆ. ಸಂಬಂಧ ಎನ್ನುವುದು ತಮ್ಮ ನಂಬಿಕೆಗಳ
ಆಧಾರದಿಂದಲ್ಲ, ರಕ್ತಸಂಬಂಧದಿಂದಲ್ಲ, ಪ್ರೀತಿ ಎಲ್ಲವನ್ನೂ ಮೀರಿದ್ದು ಎನ್ನುವುದು ಇಲ್ಲಿ ಎದ್ದು ನಿಲ್ಲುತ್ತದೆ.

ದಿ ವೈಲ್ಡ್ ಪೇರ್ ಟ್ರೀ

ನಿರ್ದೇಶನ: ನೂರಿಬಿಲ್ಗಿ ಸೇಲಾನ್‌ (Nuri Bilge Ceylan) ಟರ್ಕಿ/ 2018 / ತುರ್ಕಿ ಭಾಷೆ/ 188 min
ಸಾಹಿತ್ಯಾಸಕ್ತ ಸಿನಾನ್‌ಗೆ ದೊಡ್ಡ ಬರಹಗಾರನಾಗಬೇಕೆಂಬ ಕನಸು. ತನ್ನ ಹುಟ್ಟೂರಿಗೆ ಹಿಂತಿರುಗಿದ ಸಿನಾನ್ ತಾನು ಬರೆದಿದ್ದನ್ನು ಪ್ರಕಟಿಸಲು ಹಣಕ್ಕಾಗಿ ಹಂಬಲಿಸುತ್ತಾನೆ. ಆದರೆ, ಸಾಲದಲ್ಲಿ ಮುಳುಗಿರುವ ತಂದೆಯ ಸಂಕಷ್ಟ ಅವನ ಕೈ ಕಟ್ಟಿಹಾಕುತ್ತದೆ.

ಡಾಗ್‌ಮ್ಯಾನ್

ನಿರ್ದೇಶನ: ಮ್ಯಾಟೆಒ ಗೆರೊನೆ (Matteo Garrone) ಇಟಲಿ/2018 /ಇಟ್ಯಾಲಿಯನ್‌ ಭಾಷೆ/102 ನಿ
ಇಟಲಿಯ ಸಮುದ್ರ ತೀರದ ಹಳ್ಳಿಯೊಂದರಲ್ಲಿ ಎಗ್ಗಿಲ್ಲದ ಗೂಂಡಾಗಿರಿ. ಇಲ್ಲಿ ನಾಯಿ ತಳಿ ಅಭಿವೃದ್ಧಿ ಕೇಂದ್ರವೊಂದನ್ನು ತೆರೆದು ತನ್ನಷ್ಟಕ್ಕೆ ತಾನು ಬದುಕುತ್ತಿರುವ ಮೃದು ಹೃದಯದ ಮಾರ್ಕೆಲೋ ಇದ್ದಾನೆ. ಇದೇ ಊರಿನಲ್ಲಿ ಮಾಜಿ ಬಾಕ್ಸಿಂಗ್ ಪಟು ಸಿಮೊನಿಕೊ ತನ್ನ ಕುಕೃತ್ಯಗಳಿಂದ ಇಡೀ ಹಳ್ಳಿಯನ್ನು ತತ್ತರಗೊಳಿಸಿದ್ದಾನೆ. ಸಿಮೊನಿಕೊನ ಉಪಟಳ ಮಿತಿಮೀರಿದಾಗ ಮಾರ್ಕೆಲೋ ಸೇಡಿನ ಕ್ರಮಕ್ಕೆ ಇಳಿಯುತ್ತಾನೆ. ಮನೋವೈಜ್ಞಾನಿಕ ಕತೆ ನೈಜ ಘಟನೆಯನ್ನಾಧರಿಸಿದೆ.

ಬರ್ಡ್ಸ್ ಆಫ್ ಪ್ಯಾಸೇಜ್

ನಿರ್ದೇಶನ: ಕ್ರಿಸ್ಟಿನಾ ಗ್ಯಾಲಿಗೊ ಸಿರೊ ಗ್ವೇರಾ (Cristina Gallego, Ciro Guerra) ಕೊಲಂಬಿಯಾ/ 2018 /ವಾಯುಯು/ಸ್ಪ್ಯಾನಿಶ್‌/ಇಂಗ್ಲಿಷ್‌/125 ನಿ.

ಮಾದಕವಸ್ತು ಮಾರಾಟದ ಮೂಲ ಕೇಂದ್ರ ಕೊಲಂಬಿಯಾದ ಕತೆ. 1970ರಲ್ಲಿ ಅಮೆರಿಕಾದ ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಸ್ಥಳೀಯ ಕುಟುಂಬವೊಂದು ಭಾರೀ ಬೇಡಿಕೆಯ ವಹಿವಾಟಿನಲ್ಲಿ ತೊಡಗಿಸಿಕೊಂಡು ಬಿಡುತ್ತದೆ. ಇದರಿಂದಾಗಿ ಕುಟುಂಬ ಗೌರವ ಮಣ್ಣುಪಾಲಾಗುತ್ತದೆ, ಸಹೋದರರಲ್ಲೇ ವೈಷಮ್ಯ ಬೆಳೆದು ಕುಟಂಬ ಪರಿವಾರದ ಬದುಕು, ಸಂಸ್ಕೃತಿ, ಸಂಪ್ರದಾಯ ಪತನವಾಗುವ ಕಥನ.

ವಾಟ್ ವಿಲ್ ಪೀಪಲ್ ಸೇ

ನಿರ್ದೇಶನ: ಇರಾಮ್‌ ಹಕ್‌ (Iram Haq) ನಾರ್ವೆ/2017/ನಾರ್ವೇಜಿಯನ್‌/ಉರ್ದು ಭಾಷೆ/ 106 ನಿ.
ನಾರ್ವೆ ದೇಶದಲ್ಲಿ ಪಾಕಿಸ್ತಾನಿಯರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಪಾಕ್‌ ಕುಟುಂಬವೊಂದರ ಹದಿನೈದು ವರ್ಷ ವಯಸ್ಸಿನ ನಿಶಾ ಎರಡು ತರಹದ ಜೀವನಪದ್ಧತಿ ಅನುಸರಿಸುತ್ತಾಳೆ. ಓಸ್ಲೋದ ತನ್ನ ಮನೆಯಲ್ಲಿ ಪಾಕಿಸ್ತಾನಿ ಕುಟುಂಬದ ಸಂಪ್ರದಾಯ ಮತ್ತು ಮೌಲ್ಯಗಳನ್ನು ಪಾಲಿಸುತ್ತಾಳೆ. ಮನೆಯ ಹೊರಗೆ ಎಲ್ಲಾ ನಾರ್ವೇ ಹದಿಹರಯದ ಹುಡುಗಿಯರಂತೆ ಕುಣಿಯುತ್ತಾಳೆ. ಒಂದು ದಿನ ನಿಶಾ ನಾರ್ವೆ ಬಾಯ್‌ಫ್ರೆಂಡ್ ಜೊತೆ ಮಲಗಿರುವಾಗ ತಂದೆಯ ಕಣ್ಣಿಗೆ ಬೀಳುತ್ತಾಳೆ. ನಿಶಾಳನ್ನು ಬಲವಂತವಾಗಿ ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತದೆ. ಆರಂಭದಲ್ಲಿ ನಿಶಾ ಹೆದರುತ್ತಾಳೆ, ಹೊಸ ಜಾಗದ ಬಗ್ಗೆ ಭಯವಾದರೂ ಕ್ರಮೇಣ ಹೊಂದಿಕೊಳ್ಳುತ್ತಾಳೆ. ತಂದೆ ತಾಯಿ ಅನುಸರಿಸುತ್ತಿರುವ ಸಂಸ್ಕೃತಿ ಯಾವುದು ಎನ್ನುವುದನ್ನು ಅರಿಯುವ ಪ್ರಯತ್ನ ಮಾಡುತ್ತಾಳೆ.

ಯೋಮೆದ್ದಿನ್

ನಿರ್ದೇಶನ: ಎ.ಬಿ. ಶಾಕಿ (A.B. Shawky) ಈಜಿಪ್ಟ್‌/ 2018/ಅರೇಬಿಕ್‌ ಭಾಷೆ/ 97 ನಿ.

ಈಜಿಪ್ಟ್ ಮರುಭೂಮಿ ಯಲ್ಲಿರುವ ಕುಷ್ಠರೋಗಿಗಳ ಕೇಂದ್ರದಲ್ಲಿ ಚಿಕ್ಕಂದಿನಿಂದಲೂ ಇರುವ ಬಿಶಾಯ್‌ಗೆ ರೋಗ ಗುಣಮುಖವಾಗಿದೆ. ಆದರೂ ಈ ಸಂಪರ್ಕರಹಿತ ಪ್ರದೇಶದಲ್ಲೇ ಇದ್ದಾನೆ. ಹೆಂಡತಿಯ ಮರಣಾ ನಂತರ ಈ ಜಾಗದಿಂದ ಹೊರ ಹೋಗಲು ನಿರ್ಧರಿಸುತ್ತಾನೆ. ತನ್ನ ತೆಕ್ಕೆಯಲ್ಲಿದ್ದ ಅನಾಥ ಬಾಲಕ ಒಬಾಮನನ್ನೂ, ಪ್ರೀತಿಪಾತ್ರ ಕತ್ತೆಯನ್ನೂ ಕರೆದುಕೊಂಡು ಮೂಲ ಹುಡುಕುತ್ತಾ ಹೊರಡುತ್ತಾನೆ. ಬರುತ್ತೇನೆ ಎಂದು ಹೇಳಿಹೋಗಿದ್ದ ತಂದೆ ಏಕೆ ತನ್ನ ಮಾತನ್ನು ಉಳಿಸಿಕೊಳ್ಳಲಿಲ್ಲ ಎನ್ನುವುದು ಅವನ ಕೊರಗು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT