ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ ದೇಶದ ಸಿನಿಮಾ ಜಗತ್ತಿನ ಅಪರೂಪದ ಚಿತ್ರಗಳ ಪ್ರದರ್ಶನ

Last Updated 15 ನವೆಂಬರ್ 2018, 14:27 IST
ಅಕ್ಷರ ಗಾತ್ರ

ಕನ್ನಡವಷ್ಟೇ ಅಲ್ಲ ಜಗತ್ತಿನ ಬೇರೆ ಬೇರೆ ದೇಶ–ಭಾಷೆಗಳ ಉತ್ಕೃಷ್ಟ ಚಿತ್ರಗಳನ್ನು ಸಿನಿ ಪ್ರೇಕ್ಷಕರಿಗೆ ಪ್ರದರ್ಶಿಸುವ ಧ್ಯೇಯ ಹೊಂದಿರುವ ಸುಚಿತ್ರ ಫಿಲಂ ಸೊಸೈಟಿ, ಇದೇ 16ರಿಂದ 18ರವರೆಗೆ ಬಾಂಗ್ಲಾ ದೇಶದ ಚಿತ್ರೋತ್ಸವ ಆಯೋಜಿಸಿದೆ.

ಭಾರತದ ನೆರೆಯ ರಾಷ್ಟ್ರದ ಸಿನಿಮಾ ಜಗತ್ತಿನಲ್ಲಿ ಆಗುತ್ತಿರುವ ಪ್ರಯೋಗಗಳು, ಅಲ್ಲಿನ ಕಥಾವಿನ್ಯಾಸ, ಪ್ರಸ್ತುತ ದಿನಗಳಿಗೆ ಅನುಸಂಧಾನವಾಗುವ ಬಗೆಯನ್ನು ಈ ಚಿತ್ರೋತ್ಸವ ಮೂಲಕ ಉಣಬಡಿಸಲಿದೆ ಸುಚಿತ್ರ ಫಿಲಂ ಸೊಸೈಟಿ.

ಫೆಡರೇಷನ್ ಆಫ್ ಸೊಸೈಟೀಸ್ ಆಫ್ ಇಂಡಿಯಾ ಒಟ್ಟು ಏಳು ಸಿನಿಮಾಗಳನ್ನು ಪ್ರದರ್ಶಿಸಲು ಸಹಕಾರ ನೀಡಿದೆ. ಆದರೆ, ಸಮಯದ ಮಿತಿಗನುಗುಣವಾಗಿ ಚಿತ್ರೋತ್ಸವದಲ್ಲಿ ಆರು ಸಿನಿಮಾಗಳನ್ನು ಮಾತ್ರ ಪ್ರದರ್ಶಿಸಲಾಗುತ್ತಿದೆ. ಸಮಯದ ಅನುಕೂಲವಾದರೆ ಮತ್ತೊಂದು ಸಿನಿಮಾವನ್ನೂ ಪ್ರದರ್ಶಿಸುವ ಆಸೆ ಆಯೋಜಕರದ್ದು.

‘ಬಾಂಗ್ಲಾ ದೇಶದಲ್ಲಿ ಈಚೆಗೆ ತಯಾರಾದ, ಅಲ್ಲಿ ಸಾಕಷ್ಟು ಸುದ್ದಿ ಮಾಡಿದ ವಿಶಿಷ್ಟವಾದ ಸಿನಿಮಾಗಳಿವು. ಚಿತ್ರಕಥೆಗಳೂ ವಿಶೇಷವಾಗಿವೆ. ನಮ್ಮ ನೆರೆಯ ರಾಷ್ಟ್ರದಲ್ಲಿ ಆಗುತ್ತಿರುವ ಸಿನಿಮಾ ಚಟುವಟಿಕೆ ಮತ್ತು ಅಲ್ಲಿ ಆಗುತ್ತಿರುವ ಪ್ರಯೋಗಗಳನ್ನು ನೋಡುವ ಮೂಲಕ ನಮ್ಮಲ್ಲಿ ಆಗುತ್ತಿರುವ ಪ್ರಯೋಗಗಳನ್ನು ಗಮನಿಸವುದು ಮತ್ತು ನಮ್ಮ ಸಿನಿಮಾ ಜಗತ್ತಿಗೆ ಅನ್ವಯಿಸಿ ನೋಡುವುದಕ್ಕೆ ಈ ಚಿತ್ರೋತ್ಸವ ಸಹಾಯಕವಾಗುತ್ತದೆ’ ಎನ್ನುತ್ತಾರೆ ಸುಚಿತ್ರ ಫಿಲಂ ಸೊಸೈಟಿಯ ಅಧ್ಯಕ್ಷ ಬಿ.ಸುರೇಶ.

‘ಫೆಡರೇಷನ್ ಆಫ್ ಫಿಲಂ ಸೊಸೈಟೀಸ್ ಆಫ್ ಇಂಡಿಯಾ ಈ ಅಪರೂಪದ ಸಿನಿಮಾಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಟ್ಟಿದೆ. ಬೆಂಗಳೂರಷ್ಟೇ ಅಲ್ಲ ರಾಜ್ಯದ ಇತರ ಮೂರ್ನಾಲ್ಕು ನಗರಗಳಲ್ಲೂ ಈ ಸಿನಿಮಾಗಳು ಪ್ರದರ್ಶವಾಗಲಿವೆ. ಇದಕ್ಕೆ ಸುಚಿತ್ರ ಫಿಲಂ ಸೊಸೈಟಿಯ ಸಹಯೋಗವಿರುತ್ತದೆ’ ಎನ್ನುತ್ತಾರೆ ಅವರು.

‘ವಾರಾಂತ್ಯದಲ್ಲಿ ಈ ಸಿನಿಮಾಗಳು ಪ್ರದರ್ಶನವಾಗುತ್ತಿರುವುದು ವಿಶೇಷ. ದಯಾನಂದ ಸಾಗರ ಕಾಲೇಜಿನಲ್ಲಿರುವ ವಿಶುವೆಲ್ ಕಮ್ಯುನಿಕೇಷನ್ ವಿದ್ಯಾರ್ಥಿಗಳು ಮತ್ತು ಬದುಕು ಕಮ್ಯುನಿಟಿ ಕಾಲೇಜಿನ ಸಿನಿಮಾಸ್ತಕ ವಿದ್ಯಾರ್ಥಿಗಳು ಹೀಗೆ ಎರಡು ಸಿನಿಮಾ ಶಾಲೆಗಳ ಜತೆಗೆ ನಾವು ಸಂಪರ್ಕ ಹೊಂದಿದ್ದೇವೆ. ತಾವು ಕಲಿಯುತ್ತಿರುವ ಸಿನಿಮಾದ ವಿವರಗಳನ್ನು ಸಿನಿ ವಿದ್ಯಾರ್ಥಿಗಳು ನೆರೆಯ ದೇಶಗಳ ಸಿನಿಮಾಗಳನ್ನು ನೋಡಿ ಗಮನಿಸುವ, ಚರ್ಚಿಸುವ ಸಾಧ್ಯತೆ ಈ ಚಿತ್ರೋತ್ಸವ ವೇದಿಕೆಯಾಗಲಿದೆ’ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಸುರೇಶ.

‘ಹಿಂದೆ ನಮ್ಮ ದೇಶದ್ದೇ ಭಾಗವಾಗಿದ್ದ ಬಾಂಗ್ಲಾ ನಮ್ಮಂತೆಯೇ ಆಲೋಚಿಸುವ ದೇಶ. ಆದ್ದರಿಂದ ಅಲ್ಲಿನ ಸಮಸ್ಯೆಗಳು ನಮಗೆ ತಾಕುವಂಥವಾಗಿರುತ್ತವೆ. ಬಾಂಗ್ಲಾ ಸಿನಿಮಾಗಳು ಭಾರತೀಯ ಪ್ರೇಕ್ಷಕರಿಗೆ ಸುಲಭವಾಗಿ ಅರ್ಥವಾಗುತ್ತವೆ. ಮಧ್ಯಮ ವರ್ಗದ ಸಂವೇದನೆಗಳನ್ನು ಹೊಂದಿರುವ ಈ ಚಿತ್ರಗಳ ಮೂಲಲಕ ನಮ್ಮ ಲೋಕ ಮತ್ತು ಅವರ ಲೋಕದ ಕಥೆಗಳನ್ನು ಹೋಲಿಸಿ ನೋಡಬಹುದು’ ಎಂಬ ವಿಶ್ಲೇಷಣೆ ಅವರದ್ದು.

ಮುಸ್ಲಿಂ ಪ್ರಧಾನ ರಾಷ್ಟ್ರವಾಗಿರುವ ಬಾಂಗ್ಲಾದಲ್ಲಿ ಮಹಿಳೆಯರಿಗೆ ಅಷ್ಟಾಗಿ ಸ್ವಾತಂತ್ರ್ಯವಿಲ್ಲ. ಆದರೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಅಲ್ಲಿನ ಮಹಿಳೆಯರು ಸಿನಿಮಾ ರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ನಿರ್ದೇಶಕಿಯೊಬ್ಬರ ಸಿನಿಮಾವೂ ಈ ಚಿತ್ರೋತ್ಸವದಲ್ಲಿರುವುದು ವಿಶೇಷ.

ಈ ಹಿಂದೆ ಬೆಂಗಳೂರಿನಲ್ಲಿ ಬಾಂಗ್ಲಾ ದೇಶದ ಸಿನಿಮಾಗಳು ಪ್ರದರ್ಶನವಾಗಿವೆಯಾದರೂ, ಒಂದೇ ಬಾರಿಗೆ ಬಾಂಗ್ಲಾದ ಉತ್ತಮ ಸಿನಿಮಾಗಳು ಚಿತ್ರೋತ್ಸವದಲ್ಲಿ ಪ್ರದರ್ಶನವಾಗುತ್ತಿರುವುದು ಗಮನೀಯ. ಸಾಂಸ್ಕೃತಿಕ ಪ್ರಯೋಗಗಳ ಮೂಲಕ ಸಮಾಜವನ್ನು ಕಟ್ಟಲು ಸಾಧ್ಯ ಎನ್ನುವ ಮನಸುಗಳಿಗೆ ಬಾಂಗ್ಲಾ ದೇಶದ ಚಿತ್ರೋತ್ಸವ ಅಲ್ಲಿನ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯನ್ನು ಅರಿಯುವ ಅವಕಾಶ ನೀಡಲಿದೆ.

‘ದಿ ಡ್ರೆಸಿಂಗ್ ಟೇಬಲ್’ ಸಿನಿಮಾ ಹೊರತು ಪಡಿಸಿ ಉಳಿದೆಲ್ಲಾ ಸಿನಿಮಾಗಳಿಗೆ ಇಂಗ್ಲಿಷ್ ಸಬ್‌ಟೈಟಲ್ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT