ಶುಕ್ರವಾರ, ಆಗಸ್ಟ್ 23, 2019
22 °C

ಭಗ್ನ ಪ್ರಿಯತಮೆಯ ಆರ್ತನಾದ

Published:
Updated:
Prajavani

ಗ್ರಾಮೀಣ ಪರಿಸರದಲ್ಲಿ ಮಳೆ ಸುರಿಯದಿದ್ದರೆ ‘ಬಾರೊ ಬಾರೊ ಮಳೆರಾಯ’ ಎಂದು ಹಾಡು ಹೇಳುತ್ತಾ ಹುಡುಗರು ಮನೆ ಮನೆಗಳಿಗೆ ಮಳೆರಾಯನ ಮೂರ್ತಿ ಹೊತ್ತು ಎಡತಾಕುವುದು ವಾಡಿಕೆ. ಮಳೆಯನ್ನು ಕರೆಯುವುದು ಇದರ ಹಿಂದಿರುವ ಆಶಯ.

ಬಳ್ಳಾರಿ ಮೂಲದ ಹೊಸಬರ ತಂಡವೊಂದು ಈ ಹಾಡಿನ ಮೊದಲ ಸಾಲನ್ನು ಕೊಂಚ ಬದಲಾಯಿಸಿಕೊಂಡು ‘ಬಾರೊ ಬಾರೊ ಗೆಳೆಯ’ ಎಂದು ಸಿನಿಮಾಕ್ಕೆ ಶೀರ್ಷಿಕೆ ಇಟ್ಟಿದೆ. ಚಿತ್ರತಂಡ ಮಳೆಯನ್ನು  ಕರೆಯುತ್ತಿಲ್ಲವಂತೆ. ಇದು ಭಗ್ನ ಪ್ರಿಯತಮೆಯ ಕೂಗು ಅಂತೆ. ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು.

ನಿರ್ದೇಶಕ ಶ್ರೀಕಾಂತ್‌ ಆಚಾರ್ಯ, ‘ಸಿನಿಮಾ ಎಂದರೆ ಗಾಂಧಿನಗರ ಎನ್ನುವ ಅರ್ಥವಿದೆ. ಬಳ್ಳಾರಿಯಂತಹ ಗಡಿ ಭಾಗದಲ್ಲಿ ಕನ್ನಡ ಸಿನಿಮಾಗಳು ಪ್ರದರ್ಶನ ಕಾಣುವುದಿಲ್ಲ. ಅಲ್ಲಿ ತೆಲುಗಿನ ಚಿತ್ರಗಳದ್ದೇ ಅಬ್ಬರ. ಪರಭಾಷೆಯ ಚಿತ್ರಗಳು ಶತ ದಿನಗಳ ಪ್ರದರ್ಶನ ಕಾಣುತ್ತವೆ. ಒಳ್ಳೆಯ ಸಿನಿಮಾ ನಿರ್ಮಿಸಿದರೆ ಗಡಿ ಭಾಗದಲ್ಲೂ ಉತ್ತಮ ಪ್ರದರ್ಶನ ಕಾಣುತ್ತವೆ. ಅದಕ್ಕಾಗಿಯೇ ಈ ಸಿನಿಮಾ ಮಾಡಿದ್ದೇವೆ’ ಎಂದು ವಿವರಿಸಿದರು.

ಕೇವಲ ಹತ್ತು ದಿನದಲ್ಲಿ ಚಿತ್ರದ ಶೂಟಿಂಗ್‌ ಪೂರ್ಣಗೊಳಿಸಲಾಗಿದೆಯಂತೆ. ಮುಂದಿನ ತಿಂಗಳ ಅಂತ್ಯಕ್ಕೆ ಜನರ ಮುಂದೆ ಬರಲು ಚಿತ್ರತಂಡ ನಿರ್ಧರಿಸಿದೆ.  

ಶಿವಚಂದ್ರ ಈ ಚಿತ್ರದ ನಾಯಕ. ಅವರು ಎಂಜಿನಿಯರಿಂಗ್‌ ಶಿಕ್ಷಣ ಪಡೆಯುತ್ತಿದ್ದಾರೆ. ಇದು ಅವರ ಮೊದಲ ಚಿತ್ರ. ‘ಬಳ್ಳಾರಿ ನಗರದಲ್ಲಿ ಕನ್ನಡ ಸಿನಿಮಾಗಳ ಬಗ್ಗೆ ತಿರಸ್ಕಾರದ ಮಾತುಗಳನ್ನಾಡುವ ಜನರು ಇದ್ದಾರೆ. ಗುಣಮಟ್ಟದ ಕನ್ನಡ ಸಿನಿಮಾಗಳನ್ನು ನಿರ್ಮಿಸಿದರೆ ಪ್ರೇಕ್ಷಕರು ಥಿಯೇಟರ್‌ಗೆ ಬರುತ್ತಾರೆ’ ಎಂದರು.

ನಾಯಕಿ ಅಂಜು ಈ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ‘ಕಥೆ ಇಷ್ಟವಾಯಿತು. ಹಾಗಾಗಿ, ಒಪ್ಪಿಕೊಂಡೆ. ಹೊಸಬರ ತಂಡಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕು’ ಎಂದು ಕೋರಿದರು.

ಪ್ರೀತೇಶ್‌ ಕೊಠಾರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಾಲ್ಕು ಹಾಡುಗಳಿದ್ದು, ಅತಿಶಯ್‌ ಜೈನ್‌ ಜೈನ್‌ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ನಾಗಭೂಷಣ್‌ ಕುದುರಿ ಅವರದು. 

Post Comments (+)